ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ

Spiderman: Brand New Day: ‘ಸ್ಪೈಡರ್​​ಮ್ಯಾನ್​’ ಸಿನಿಮಾ ಹಲವು ಭಾಗಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ
Spider Man

Updated on: Mar 18, 2026 | 9:23 PM

‘ಸ್ಪೈಡರ್​​ಮ್ಯಾನ್’ (Spiderman) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಸೂಪರ್ ಹೀರೋ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದ ಸಿನಿಮಾ. ‘ಸ್ಪೈಡರ್​​ಮ್ಯಾನ್​’ನ ಹಲವು ಆವೃತ್ತಿಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೆಸರಿನ ಸಿನಿಮಾ ಇದಾಗಿದ್ದು, ಟ್ಯಾಗ್​ಲೈನ್​​ನಲ್ಲಿಯೇ ಇರುವಂತೆ, ಸ್ಪೈಡರ್​ಮ್ಯಾನ್ ಪಾಲಿಗೆ ಇದು ಸಂಪೂರ್ಣ ಹೊಸ ದಿನವೇ ಆಗಿದೆ. ಈ ಹಿಂದಿನ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಕ್ಲೈಮ್ಯಾಕ್ಸ್​​ನಲ್ಲಿ ಪೀಟರ್ ಪಾರ್ಕರ್ (ಸ್ಪೈಡರ್​ಮ್ಯಾನ್) ಜಗತ್ತು ಉಳಿಸಲು ತ್ಯಾಗ ಮಾಡಿದ್ದು, ಇದೇ ಕಾರಣಕ್ಕೆ ಅವನ ಗರ್ಲ್​​ಫ್ರೆಂಡ್, ಆತ್ಮೀಯ ಗೆಳೆಯ ಎಲ್ಲರು ಪೀಟರ್ ಪಾರ್ಕರ್ ಅನ್ನು ಮರೆತುಬಿಟ್ಟಿದ್ದಾರೆ, ಆದರೆ ಪೀಟರ್​​ಗೆ ಮಾತ್ರ ಎಲ್ಲರ ನೆನಪು ಇದೆ. ಈಗ ಬಿಡುಗಡೆ ಆಗಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾನಲ್ಲಿ ಅದೇ ಕತೆ ಮುಂದುವರೆದಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಪೀಟರ್​​ನ ಪ್ರೇಯಸಿ ಮತ್ತು ಆಪ್ತ ಮಿತ್ರರು ಪೀಟರ್ ಅನ್ನು ಮರೆತಿದ್ದಾರೆ. ಪೀಟರ್​​ನ ಪ್ರೇಯಸಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಪೀಟರ್ ಆಕೆಯ ಜೀವನಕ್ಕೆ ಮತ್ತೆ ಎಂಟ್ರಿ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ. ಇದರ ನಡುವೆ ಪೀಟರ್​​ನ ತನ್ನ ಸೂಪರ್ ಹೀರೋ ಶಕ್ತಿಗಳನ್ನು ಸಹ ಕಳೆದುಕೊಳ್ಳುತ್ತಿದ್ದಾನೆ. ಹಳೆಯ ಹಲವು ವಿಲನ್​​ಗಳು ಈಗ ಒಮ್ಮೆಲೆ ಪೀಟರ್ ಅಥವಾ ಸ್ಪೈಡರ್​​ಮ್ಯಾನ್ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗೆ ಹಲವು ಅಂಶಗಳು ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಇವೆ.

ಇದನ್ನೂ ಓದಿ:Oscars 2026: ಈ ಬಾರಿ ಆಸ್ಕರ್ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿನ ವಿಷಯವೆಂದರೆ ಪೀಟರ್‌ನ ಶರೀರದಲ್ಲಿ ಬದಲಾವಣೆ ಆಗುತ್ತಿದೆ ಪೀಟರ್, ರೇಷ್ಮೆಗೂಡಿನ ಒಳಗೆ ಎಚ್ಚರಗೊಳ್ಳುವ ದೃಶ್ಯವಿದೆ. ಅಲ್ಲದೆ, ಅವನು ವೆಬ್-ಶೂಟರ್ ಬಳಸಲಾಗದೆ ಬಿದ್ದು ಹೋಗುವ ದೃಶ್ಯವಿದೆ. ಮತ್ತೊಂದು ದೃಶ್ಯದಲ್ಲಿ ತನ್ನ ಮಣಿಕಟ್ಟಿನಿಂದಲೇ ನೇರವಾಗಿ ಜೇಡರ ಬಲೆಯನ್ನು ಬಿಡುತ್ತಿರುವ ದೃಶ್ಯವೂ ಇದೆ. ಹಳೆಯ ಟೋಬಿ ಮ್ಯಾಗೈರ್ ಸ್ಪೈಡರ್​ಮ್ಯಾನ್​​ನಲ್ಲಿ ನಾಯಕ ಬರಿಗೈನಿಂದಲೇ ವೆಬ್ ಶೂಟರ್​​ಗಳನ್ನು ಬಿಡುತ್ತಿದ್ದ.

ಈ ಹೊಸ ಸಿನಿಮಾದಲ್ಲಿ ಮಾರ್ವೆಲ್‌ನ ಇತರ ಪ್ರಮುಖ ಪಾತ್ರಗಳಾದ ಹಲ್ಕ್ ಅಥವಾ ಬ್ರೂಸ್ ಬ್ಯಾನರ್ ಮತ್ತು ಪನಿಶರ್ ಕಾಣಿಸಿಕೊಂಡಿದ್ದಾರೆ. ಪೀಟರ್ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬ್ರೂಸ್ ಬ್ಯಾನರ್ ಬಳಿ ಸಹಾಯ ಕೇಳಲು ಹೋಗುವ ದೃಶ್ಯವನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಸ್ಪೈಡರ್​​ಮ್ಯಾನ್ ಈ ಸಿನಿಮಾನಲ್ಲಿ ಆಧುನಿಕ ಸೂಟ್ ಬದಲಿಗೆ ತಾನೇ ಹೊಲೆದಿದ್ದ ಹಳೆಯ ಸೂಟ್ ಬಳಸುತ್ತಿದ್ದಾನೆ. ಸಿನಿಮಾನಲ್ಲಿ ಸಾಕಷ್ಟು ವಿಲನ್​​ಗಳು ಸಹ ಇದ್ದಾರೆ. ಹಳೆಯ ಶತ್ರು ಸ್ಕಾರ್ಪಿಯಾನ್ ಅಂತಿಮವಾಗಿ ತನ್ನ ಪೂರ್ಣ ರೂಪದಲ್ಲಿ ಮರಳಿದ್ದಾನೆ. ಜೊತೆಗೆ ‘ಟಾಂಬ್‌ಸ್ಟೋನ್’ ಎಂಬ ಭೂಗತ ಪಾತಕಿ ಸಹ ಇದ್ದಾನೆ. ಇವುಗಳ ಜೊತೆಗೆ ಕೆಲವು ಜಪಾನಿ ಸಮುರಾಯ್​ಗಳು ಇದ್ದಾರೆ. ಸ್ವತಃ ಸ್ಪೈಡರ್​​ಮ್ಯಾನ್ ಸಹ ರಾಕ್ಷಸನ ರೂಪ ತಾಳುವ ದೃಶ್ಯವೂ ಸಹ ಇದೆ.

ಒಟ್ಟಾರೆ ‘ಸ್ಪೈಡರ್​​ಮ್ಯಾನ್ : ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟ್ರೈಲರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸಿನಿಮಾನಲ್ಲಿ ಮಾಮೂಲಿನಂತೆ ನಾಯಕನಾಗಿ ಟಾಮ್ ಹಾಲೆಂಡ್ ನಟಿಸಿದ್ದಾರೆ. ನಾಯಕಿ ಜೆಂಡೆಯಾ. ಸಿನಿಮಾ ಜುಲೈ 31ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Wed, 18 March 26

Follow Us