‘ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ

Pradeep Ranganathan: ಕನ್ನಡದ ನಟಿ ಶ್ರೀಲೀಲಾ, ಟಾಲಿವುಡ್​​ನ ಟಾಪ್ ನಟಿಯಾದ ಬಳಿಕ ಇದೀಗ ಬಾಲಿವುಡ್​ ಹಾಗೂ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದೂ ಎರಡೂ ಕಡೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಂತೂ ಅವರು ‘ಹ್ಯಾಟ್ರಿಕ್ ಹೀರೋ’ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ!

‘ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ
Sreeleela

Updated on: Jan 20, 2026 | 5:33 PM

ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಈಗ ಪರ ಭಾಷೆಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, 2022 ರ ಸಿನಿಮಾ ‘ಧಮಾಕ’ ಮೂಲಕ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ‘ಧಮಾಕ’ ಸಿನಿಮಾದ ಬಳಿಕ ಬಲು ಬೇಗನೇ ತೆಲುಗು ಚಿತ್ರರಂಗದ ಟಾಪ್ ನಟಿಯಾದ ಶ್ರೀಲೀಲಾ, ಇದೀಗ ಬಾಲಿವುಡ್​ ಹಾಗೂ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದೂ ಎರಡೂ ಕಡೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಂತೂ ಅವರು ‘ಹ್ಯಾಟ್ರಿಕ್ ಹೀರೋ’ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ!

‘ಹ್ಯಾಟ್ರಿಕ್ ಹೀರೋ’ ಎಂದೊಡೆ ಶಿವರಾಜ್ ಕುಮಾರ್ ಜೊತೆಗೆ ನಟಿಸುತ್ತಿದ್ದಾರೆ ಎಂದಲ್ಲ. ಬದಲಿಗೆ ಶ್ರೀಲೀಲಾ ನಟಿಸುತ್ತಿರುವುದು ತಮಿಳಿನ ಹ್ಯಾಟ್ರಿಕ್ ಹೀರೋ ಜೊತೆಗೆ. ಅದುವೇ ಪ್ರದೀಪ್ ರಂಗನಾಥನ್. ಸ್ವಂತ ಬಲದ ಮೇಲೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರದೀಪ್ ರಂಗನಾಥ್, ಹಲವು ಅಡೆ-ತಡೆ, ಕುಹುಕ, ವ್ಯಂಗ್ಯ, ಅನುಮಾನ, ಅವಮಾನಗಳನ್ನು ದಾಟಿ ಇದೀಗ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿರುವ ಸತತ ಮೂರು ಸಿನಿಮಾಗಳು 100 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಇದೀಗ ಪ್ರದೀಪ್ ಅವರ ನಾಲ್ಕನೇ ಸಿನಿಮಾಕ್ಕೆ ಕನ್ನಡತಿ ಶ್ರೀಲೀಲಾ ನಾಯಕಿ.

ಶ್ರೀಲೀಲಾ ನಟಿಸಿರುವ ಮೊದಲ ತಮಿಳು ಸಿನಿಮಾ ‘ಪರಾಶಕ್ತಿ’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ಸು ಗಳಿಸಿದೆ. ಅದರ ಬೆನ್ನಲ್ಲೆ ಇದೀಗ ಶ್ರೀಲೀಲಾಗೆ ಎರಡನೇ ತಮಿಳು ಸಿನಿಮಾ ಆಫರ್ ಬಂದಿದ್ದು, ಸಿನಿಮಾದ ನಾಯಕ ಪ್ರದೀಪ್ ರಂಗನಾಥನ್. ವಿಶೇಷವೆಂದರೆ ಈ ಸಿನಿಮಾ ಸಾಮಾನ್ಯಾ ರಾಮ್-ಕಾಮ್ ಸಿನಿಮಾ ಅಲ್ಲ ಬದಲಿಗೆ ಇದೊಂದು ಸೈ-ಫೈ ಸಿನಿಮಾ ಆಗಿದೆ. ಭವಿಷ್ಯದ ಕತೆಯನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಶ್ರೀಲೀಲಾ ಅವರು 2025 ಹೀಗಿತ್ತು: ವಿಡಿಯೋನಲ್ಲಿ ನೋಡಿ…

ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಆದರೆ ಈ ಸಿನಿಮಾನಲ್ಲಿ ಶ್ರೀಲೀಲಾ ಮಾತ್ರವೇ ಅಲ್ಲದೆ ಮತ್ತೊಬ್ಬ ಖ್ಯಾತ ಯುವನಟಿ ಮೀನಾಕ್ಷಿ ಚೌಧರಿ ಸಹ ನಾಯಕಿ ಆಗಿದ್ದಾರೆ. ಈ ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ಪ್ರದೀಪ್ ಅವರೇ ರಚಿಸಿದ್ದು, ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಅವರ ನಟನೆಯ ‘ಆಶಿಖಿ 3’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಜೊತೆಗೆ ಇನ್ನೂ ಎರಡು ಹೊಸ ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸಿದ್ದು, ಅದು ಶೀಘ್ರವೇ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಸಹ ಅವರು ಒಪ್ಪಿಕೊಂಡಿದ್ದಾರೆ. ಇನ್ನು ಪ್ರದೀಪ್ ನಟನೆಯ ‘ಎಲ್​​ಐಕೆ’ (ಲವ್ ಇನ್ಷುರೆನ್ಸ್ ಕಂಪೆನಿ) ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ