‘ಆರ್ಆರ್ಆರ್’ (RRR) ಸಿನಿಮಾದ ಗ್ಲೋಬಲ್ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ಮೇಲಿನ ನಿರೀಕ್ಷೆ ಹತ್ತು ಪಟ್ಟಾಗಿದೆ. ‘ಆರ್ಆರ್ಆರ್’ ಸಿನಿಮಾದ ಬಿಡುಗಡೆಗೆ ಮುನ್ನವೇ ರಾಜಮೌಳಿ ತಾವು ತಮ್ಮ ಮುಂದಿನ ಸಿನಿಮಾವನ್ನು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಜೊತೆಗೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಕತೆಯೂ ಸಹ ಅಂತಿಮವಾಗಿತ್ತು. ಆದರೆ ‘ಆರ್ಆರ್ಆರ್’ ಸಿನಿಮಾಕ್ಕೆ ವಿಶ್ವಮಟ್ಟದಲ್ಲಿ ದೊರೆತ ಯಶಸ್ಸಿನಿಂದಾಗಿ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಹಾಲಿವುಡ್ ಸಿನಿಮಾಗಳ ಗುಣಮಟ್ಟಕ್ಕೆ ತಕ್ಕಂತೆ ಮಾಡಲು ಮುಂದಾದ ಕಾರಣ ಸಿನಿಮಾದ ಚಿತ್ರೀಕರಣ ಪ್ರಾರಂಭ ತಡವಾಗಿದೆ. ಇದೀಗ ಸಿನಿಮಾದ ಮುಹೂರ್ತ ದಿನಾಂಕ ನಿಗದಿಯಾಗಿದೆ.
ರಾಜಮೌಳಿ ಹಾಗೂ ಮಹೇಶ್ ಬಾಬು ನಟನೆಯ ಸಿನಿಮಾದ ಮುಹೂರ್ತ ಯುಗಾದಿ ದಿನದಂದು ನಡೆಯಲಿದೆಯಂತೆ. ಹೈದರಾಬಾದ್ನಲ್ಲಿಯೇ ಮುಹೂರ್ತ ಸಮಾರಂಭ ನಡೆಯಲಿದ್ದು, ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರನ್ ಮುಹೂರ್ತಕ್ಕೆ ಅತಿಥಿಯಾಗಿ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭಾರಿ ಅದ್ಧೂರಿಯಾಗಿ ಈ ಮುಹೂರ್ತ ಸಮಾರಂಭ ನಡೆಯಲಿದ್ದು, ‘ಆರ್ಆರ್ಆರ್’ ಸಿನಿಮಾದ ನಾಯಕರಾದ ಜೂ ಎನ್ಟಿಆರ್, ರಾಮ್ ಚರಣ್ ಗಳ ಜೊತೆಗೆ ಪ್ರಭಾಸ್, ರಾಣಾ ದಗ್ಗುಬಾಟಿ ಇನ್ನೂ ಕೆಲವರು ಸಹ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸರಳವಾದ ಹೆಸರು: ಆ ಎರಡರಲ್ಲಿ ಯಾವುದು ಅಂತಿಮ?
ರಾಜಮೌಳಿಯ ಮುಂದಿನ ಸಿನಿಮಾಕ್ಕೆ ಈಗಾಗಲೇ ಕಳೆದ ಕೆಲವು ತಿಂಗಳಿನಿಂದಲೂ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ಹಾಲಿವುಡ್ನ ಹಲವು ದೊಡ್ಡ ಸಂಸ್ಥೆಗಳೊಟ್ಟಿಗೆ ರಾಜಮೌಳಿ ಹಲವು ಸುತ್ತುಗಳ ಸಭೆಗಳನ್ನು ನಡೆಸಿದ್ದು ಸಿನಿಮಾಕ್ಕಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ರಾಜಮೌಳಿ ಬಳಸಿಕೊಳ್ಳಲಿದ್ದಾರೆ. ರಾಜಮೌಳಿ ಸಾಮಾನ್ಯವಾಗಿ ತಮ್ಮ ನಂಬಿಕೆಯ ತಂತ್ರಜ್ಞಾನರನ್ನು ತಮ್ಮ ಸಿನಿಮಾಗಳಿಗೆ ಹಾಕಿಕೊಳ್ಳುತ್ತಾರೆ. ಆದರೆ ಈ ಸಿನಿಮಾಕ್ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ರಾಜಮೌಳಿ ಮಾಡಿಕೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ಕೀರವಾಣಿ ಈ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ, ಕ್ಯಾಮೆರಾಮ್ಯಾನ್ ಸೆಂಥಿಲ್ ಸಹ ಇರುವುದಿಲ್ಲ, ರಾಜಮೌಳಿಯ ನಂಬುಗೆಯ ಸಂಕಲನಕಾರರು ಸಹ ಇರುವುದಿಲ್ಲ. ಬದಲಿಗೆ ಹಾಲಿವುಡ್ನ ಕೆಲವು ಅತ್ಯುತ್ತಮ ತಂತ್ರಜ್ಞರನ್ನು ರಾಜಮೌಳಿ ಕರೆತರಲಿದ್ದಾರೆ.
ರಾಜಮೌಳಿಯ ಮುಂದಿನ ಸಿನಿಮಾ ಸಾಹಸಮಯ ಕತೆಯನ್ನು ಒಳಗೊಂಡಿರಲಿದೆ. ಅವರೇ ಈ ಹಿಂದೆ ಹೇಳಿಕೊಂಡಿರುವಂತೆ ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’ ಮಾದರಿಯ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಅರಣ್ಯದಲ್ಲಿ ನಡೆಯುವ ಸಾಹಸಮಯ ಪ್ರಯಾಣದ ರೋಚಕ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಕತೆಯನ್ನು ರಾಜಮೌಳಿಯವರ ತಂದೆಯವರೇ ರಚಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಇಂಡೊನೇಷ್ಯಾದ ಚೆಲುವೆಯೊಬ್ಬರು ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ