‘ವಾರಣಾಸಿ’ ಈವೆಂಟ್​ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ

SS Rajamouli: ರಾಜಮೌಳಿ-ಮಹೇಶ್ ಬಾಬು ಅವರ ಹೊಸ ಚಿತ್ರ ‘ವಾರಣಾಸಿ’ 2027ಕ್ಕೆ ಬಿಡುಗಡೆಯಾಗಲಿದ್ದು, ಅದ್ದೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಸಿಟ್ಟಿಗೆದ್ದ ರಾಜಮೌಳಿ ಹನುಮಂತನ ಬಗ್ಗೆ ಆಡಿದ ಮಾತುಗಳು ಭಾರಿ ವಿವಾದ ಸೃಷ್ಟಿಸಿವೆ. ಅವರ ಕ್ಷಮೆಗೆ ಸಾರ್ವಜನಿಕವಾಗಿ ಒತ್ತಾಯ ಕೇಳಿಬರುತ್ತಿದೆ .

‘ವಾರಣಾಸಿ’ ಈವೆಂಟ್​ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ
ರಾಜಮೌಳಿ-ಮಹೇಶ್ ಬಾಬು

Updated on: Nov 17, 2025 | 8:51 AM

ಇತ್ತೀಚೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ‘ವಾರಾಣಸಿ’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದ್ದು, 2027ರಲ್ಲಿ ಸಿನಿಮಾ ರಿಲೀಸ್ ಆಗಲಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ದೊಡ್ಡ ಈವೆಂಟ್​ನಲ್ಲಿ ಈ ಟೈಟಲ್ ಅನಾವರಣಗೊಂಡಿದೆ. ಇದಕ್ಕಾಗಿ ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಸುರಿದಿದ್ದಾರೆ. ಈ ವೇದಿಕೆ ಮೇಲೆ ರಾಜಮೌಳಿ ಆಡಿದ ಮಾತು ಸಾಕ್ಟು ಚರ್ಚೆಗೆ ಕಾರಣ ಆಗಿದೆ. ರಾಜಮೌಳಿ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ತಾಂತ್ರಿಕ ಸಮಸ್ಯೆ

‘ವಾರಣಾಸಿ’ ಟೈಟಲ್ ಅನಾವರಣ ಮಾಡಲು ದೊಡ್ಡ ಸ್ಕ್ರೀನ್ ಹಾಕಲಾಗಿತ್ತು. ಆದರೆ, ತಾಂತ್ರಿಕ ದೋಷ ಕಾಣಿಸಿಕೊಂಡಿತು. ಈ ಕಾರಣದಿಂದಲೇ ಕೆಲವು ಹೊತ್ತು ಟೈಟಲ್ ಟೀಸರ್​  ಅನಾವರಣ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಟೀಸರ್​ನ ತೋರಿಸಲಾಯಿತು. ವೇದಿಕೆ ಮೇಲೆ ರಾಜಮೌಳಿ ಅವರು ನೆರೆದಿದ್ದ ಅಭಿಮಾನಿಗಳ ಬಳಿ ಕ್ಷಮೆ ಕೇಳಿದರು.

‘ನನಗೆ ದೇವರ ಮೇಲೆ ಅಂತಹ ನಂಬಿಕೆ ಏನೂ ಇಲ್ಲ. ಹನುಮಂತನ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ನನ್ನ ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದರು. ಈ ತಾಂತ್ರಿಕ ಸಮಸ್ಯೆ ಆದಾಗ ನನಗೆ ಸಿಟ್ಟೇ ಬಂತು. ಈ ರೀತಿಯಾ ಅವನು (ಹನುಮಂತ) ನನಗೆ ಸಹಾಯ ಮಾಡೋದು’ ಎಂದು ರಾಜಮೌಳಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ಗಾಗಿ ಹೊಸ ತಂತ್ರಜ್ಞಾನ ತೆಲುಗಿಗೆ ತಂದ ರಾಜಮೌಳಿ

‘ನನ್ನ ಪತ್ನಿ ಹನುಮಂತನ ದೊಡ್ಡ ಭಕ್ತೆ. ಗೆಳೆಯ ಎನ್ನುವ ರೀತಿಯಲ್ಲಿ ಅವಳು ಹನುಮಂತನ ಬಳಿ ಮಾತನಾಡುತ್ತಾ ಇರುತ್ತಾಳೆ. ನನಗೆ ಅವಳ ಮೇಲೂ ಕೋಪ ಬಂತು. ನನ್ನ ಪತ್ನಿಯ ಹನುಮಂತ ಈ ಬಾರಿ ಸಹಾಯ ಮಾಡುತ್ತಾನಾ ನೋಡೋಣ’ ಎಂದಿದ್ದರು ರಾಜಮೌಳಿ.

ರಾಜಮೌಳಿ ಬಗ್ಗೆ ಆಕ್ರೋಶ, ಕ್ಷಮೆಗೆ ಪಟ್ಟು

ರಾಜಮೌಳಿ ಹೇಳಿಕೆಗೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಅವರು ಮಾಡಿಕೊಂಡ ತಾಂತ್ರಿಕ ಸಮಸ್ಯೆಗೆ ಹನುಮಂತನ ದೋಷಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಅವರು ಹಿಂದಿನ ದಿನವೇ ಈ ಬಗ್ಗೆ ಪರಿಶೀಲಿಸಿಕೊಳ್ಳಬೇಕಿತ್ತು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ರಾಜಮೌಳಿ ಅವರು ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ. ‘ಬಿಲಿಗೇಟ್ಸ್​ ಕೂಡ ತಾಂತ್ರಿಕ ಸಮಸ್ಯೆ ಎದುರಿಸಿದ್ದಾರೆ. ಆಗ ಅವರು ಏಸು ಕ್ರಿಸ್ತನ ದೂಷಿಸಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Mon, 17 November 25