ಭಾರತೀಯ ಚಿತ್ರರಂಗದ (Indian Cinema) ಶಕ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ ಎಸ್ಎಸ್ ರಾಜಮೌಳಿ (SS Rajamouli). ಆರ್ಆರ್ಆರ್ (RRR) ಸಿನಿಮಾದ ಭಾರಿ ಯಶಸ್ಸಿನ ಬಳಿಕ ರಾಜಮೌಳಿಯ ಮುಂದಿನ ಸಿನಿಮಾಗಳ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಆರ್ಆರ್ಆರ್ ಮೂಲಕ ತೆಲುಗು ರಾಜ್ಯಗಳ ಕೋಮರಂ ಭೀಮ್, ಅಲ್ಲೂರಿ ಸೀತಾರಾಮ ರಾಜು ಅವರ ಪರಿಚಯವನ್ನು ವಿಶ್ವಕ್ಕೆ ಮಾಡಿಸಿದ ರಾಜಮೌಳಿ, ಅದೇ ರೀತಿ ಭಾರತದ ಮಹಾಕಾವ್ಯಗಳು, ಭಾರತದ ಸಾಧಕರ ಪರಿಚಯವನ್ನು ಸಿನಿಮಾ ಮೂಲಕ ವಿಶ್ವಕ್ಕೆ ಮಾಡಿಸಲಿ ಎಂಬುದು ಹಲವರ ಆಶಯ. ರಾಜಮೌಳಿ ಸಹ ಇದೇ ಗುರಿಯನ್ನು ಹೊಂದಿದ್ದಾರೆ. ಮಹಾಭಾರತ ಸಿನಿಮಾ ಮಾಡುವುದು ನನ್ನ ಕನಸು ಎಂದು ರಾಜಮೌಳಿ ಈಗಾಗಲೇ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಭಾರತದ ಮಹಾನ್ ಸಾಧಕರೊಬ್ಬರ ಜೀವನವನ್ನು ಸಿನಿಮಾ ಮಾಡುವ ಆಶಯವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಪೌರಾಣಿಕ ಕತೆಗಳ ಬಗ್ಗೆ ಅತೀವ ಆಸಕ್ತಿವಹಿಸಿರುವ ರಾಜಮೌಳಿ, ಅಪರೂಪಕ್ಕೆ ನವಭಾರತದ ಸಾಧಕರೊಬ್ಬರ ಕತೆಯನ್ನು ಸಿನಿಮಾ ಮಾಡುವ ಆಸೆಯಿರುವುದಾಗಿ ಹೇಳಿದ್ದಾರೆ. ಭಾರತದಲ್ಲಿ ಶ್ವೇತ ಕ್ರಾಂತಿ ಮಾಡಿ ಕೋಟ್ಯಂತರ ರೈತರಿಗೆ ನೆರವಾದ ವರ್ಗೀಸ್ ಕುರಿಯನ್ ಜೀವನವನ್ನು ಸಿನಿಮಾ ಮಾಡುವ ಆಸೆ ರಾಜಮೌಳಿಯವರಿಗೆ ಇದೆಯಂತೆ.
ತಮ್ಮ ಸಂಬಂಧಿಯೂ ಆಗಿರುವ ಜನಪ್ರಿಯ ವೈದ್ಯ ಎವಿ ಗುರುವಾ ರೆಡ್ಡಿ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ರಾಜಮೌಳಿ, ವರ್ಗೀಸ್ ಕುರಿಯನ್ ನಾನು ಆದರ್ಶವಾಗಿ ಸ್ವೀಕರಿಸಿರುವ ಮೂವರು ವ್ಯಕ್ತಿಗಳಲ್ಲಿ ಒಬ್ಬರು. ಅವರೊಬ್ಬ ಮಹಾನ್ ಸಾಧಕ. ಅವರ ಜೀವನದ ಬಗ್ಗೆ ಸಿನಿಮಾ ಮಾಡುವುದು ನನ್ನ ಬಹುವರ್ಷಗಳ ಕನಸು. ಈ ಬಗ್ಗೆ ಮೊದಲಿನಿಂದಲೂ ಯೋಚಿಸಿದ್ದೆ. ಎಂದಾದರೂ ಸಾಧ್ಯವಾದರೆ ಅವರ ಬಗ್ಗೆ ಸಿನಿಮಾ ಮಾಡುವೆ ಎಂದಿದ್ದಾರೆ.
ವರ್ಗೀಸ್ ಕುರಿಯನ್ ಅವರು ಕೇರಳದಲ್ಲಿ ಜನಿಸಿದರಾದರೂ ಗುಜರಾತ್ ಅನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಭಾರತದಲ್ಲಿ ಶ್ವೇತ ಕ್ರಾಂತಿಗೆ ಕಾರಣರಾದರು. ಭಾರತದ ಜನಪ್ರಿಯ ಅಮೂಲ್ ಸ್ಥಾಪನೆಗೆ ಕಾರಣಕರ್ತರಾದರು. ಹೈನುಗಾರಿಕೆಯನ್ನು ಕೃಷಿಕರ ಪ್ರಮುಖ ಆದಾಯದ ಮೂಲವನ್ನಾಗಿಸಿದ ಶ್ರೇಯ ವರ್ಗೀಸ್ ಕುರಿಯನ್ ಅವರಿಗೆ ಸಲ್ಲುತ್ತದೆ.
ಶ್ಯಾಮ್ ಬೆನಗಲ್ ನಿರ್ದೇಶಿಸಿರುವ ಮಂಥನ್ ಸಿನಿಮಾದಲ್ಲಿ ಕುರಿಯನ್ ಜೀವನ ಕುರಿತಾದ ಕತೆ ಇದೆ. ಈ ಸಿನಿಮಾವನ್ನು ಅಮೂಲ್ನ ರೈತರೇ ನಿರ್ಮಾಣ ಮಾಡಿರುವುದು ವಿಶೇಷ. ಕುರಿಯನ್ ಅವರ ಮನವಿ ಮೇರೆಗೆ ಅಮೂಲ್ನ ರೈತರೆಲ್ಲ ಎರಡು ರೂಪಾಯಿಗಳನ್ನು ನೀಡಿದ್ದರು. ಆ ಹಣದಿಂದ ಶ್ಯಾಮ್ ಬೆನಗಲ್ ಮಂಥನ್ ಸಿನಿಮಾ ಮಾಡಿದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ಆಫ್ರಿಕಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಪ್ರದರ್ಶಿಸಲಾಯಿತು. ಅಮರ್ ಚಿತ್ರಕತಾ ಸಹ ಕುರಿಯನ್ ಕುರಿತಾದ ಕಾರ್ಟೂನ್ ಅನ್ನು ಮುದ್ರಿಸಿತ್ತು. ಈಗ ರಾಜಮೌಳಿ ಸಹ ಕುರಿಯನ್ ಕುರಿತ ಸಿನಿಮಾ ಮಾಡಲು ಮುಂದಾಗಿದ್ದು ಅದು ಯಾವಾಗ ಸಾಧ್ಯವಾಗುತ್ತದೆಯೋ ನೋಡಬೇಕಿದೆ. ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈ ವರ್ಷಾಂತ್ಯಕ್ಕೆ ಪ್ರಾರಂಭವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ