Cannes 2022: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ಗೌರವ; ಮೆಚ್ಚುಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ
Narendra Modi | Cannes Film Festival: ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ಅವರ ‘ಪ್ರತಿದ್ವಂದಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ 17ರಿಂದ ಆರಂಭ ಆಗಿರುವ ಕಾನ್ ಚಿತ್ರೋತ್ಸವ (Cannes Film Festival) ಗಮನ ಸೆಳೆಯುತ್ತಿದೆ. ಪ್ರಪಂಚದ ಹಲವು ದೇಶಗಳ ಸಿನಿಮಾ ಸೆಲೆಬ್ರಿಟಿಗಳು ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ನಡೆಯುತ್ತಿರುವ 75ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತಕ್ಕೆ ವಿಶೇಷ ಗೌರವ (Country of Honor) ಸಿಕ್ಕಿದೆ. ಇಲ್ಲಿನ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ದೀಪಿಕಾ ಪಡುಕೋಣೆ (Deepika Padukone), ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ, ಎ.ಆರ್. ರೆಹಮಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾನ್ ಚಿತ್ರೋತ್ಸವಕ್ಕೆ ತೆರಳಿದ್ದಾರೆ. ಒಟ್ಟಾರೆ ಭಾರತಕ್ಕೆ ಸಿಕ್ಕಿರುವ ಗೌರವದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪತ್ರ ಬರೆದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಗಿದೆ. ಕಾನ್ ಚಿತ್ರೋತ್ಸವ 75ನೇ ವರ್ಷಕ್ಕೆ ಕಾಲಿಟ್ಟಿದೆ. ಇಂಡೋ-ಫ್ರೆಂಚ್ ಒಪ್ಪಂದಕ್ಕೆ 75 ವರ್ಷ. ಈ ಎಲ್ಲ ಕಾರಣದಿಂದ ಈ ವರ್ಷ ವಿಶೇಷವಾಗಿದೆ ಎಂದು ಪತ್ರದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
‘ಸಿನಿಮಾ ಮತ್ತು ಸಮಾಜ ಒಂದಕ್ಕೊಂದು ಕನ್ನಡಿ ಇದ್ದಂತೆ. ಮಾನವನ ಭಾವನೆಗಳನ್ನು ಕಲಾತ್ಮಕವಾಗಿ ಸಿನಿಮಾ ತೋರಿಸುತ್ತದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಿಸುವ ದೇಶ ಭಾರತ. ಇಲ್ಲಿನ ಹಲವು ಭಾಷೆಗಳಲ್ಲಿ ವಿವಿಧ ರೀತಿಯ ಸಿನಿಮಾಗಳು ಮೂಡಿಬರುತ್ತಿವೆ. ಸಮೃದ್ಧವಾದ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತದ ಶಕ್ತಿ. ಅನ್ವೇಷಿಸಲು ಇಲ್ಲಿ ಸಾಕಷ್ಟು ಕಥೆಗಳಿವೆ’ ಎಂದು ಈ ಪತ್ರದಲ್ಲಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡದ ‘ದೇವರ ಕನಸು’ ಸಿನಿಮಾ
ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ಅವರ ‘ಪ್ರತಿದ್ವಂದಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಸತ್ಯಜಿತ್ ರೇ ಅವರ ಜನ್ಮಶತಮಾನೋತ್ಸವ ವರ್ಷ ಎಂಬುದು ವಿಶೇಷ. ಅಂತಾರಾಷ್ಟ್ರೀಯ ಸಿನಿಮಾ ಮೇಕರ್ಗಳ ಸಹಯೋಗದೊಂದಿಗೆ ಭಾರತದಲ್ಲಿ ಸಿನಿಮಾ ನಿರ್ಮಿಸಲು ಸಿಂಗಲ್ ವಿಂಡೋ ಕ್ಲಿಯರೆನ್ಸ್ ನೀಡುವ ಕುರಿತಾಗಿಯೂ ಈ ಪತ್ರದಲ್ಲಿ ಮೋದಿ ಪ್ರಸ್ತಾಪಿಸಿದ್ದಾರೆ. ಕಾನ್ ಚಿತ್ರೋತ್ಸವ ಯಶಸ್ವಿ ಆಗಲಿ ಎಂದು ಅವರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್ಫುಲ್ ಫೋಟೋಗಳು
ಕಾನ್ ಚಿತ್ರೋತ್ಸವದ ಜ್ಯೂರಿ ತಂಡದಲ್ಲಿ ದೀಪಿಕಾ ಪಡುಕೋಣೆ:
“India??has a lot of stories to be told and the country truly possesses immense potential to become the content hub of the world.”
– PM @narendramodi Ji’s message as India gets set to participate as the first ‘Country of Honour’ at Marche Du Films @Festival_Cannes pic.twitter.com/Op2ZsjB6O6
— Anurag Thakur (@ianuragthakur) May 17, 2022
ಕಾನ್ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಮನ್ನಣೆ ಇದೆ. ಈ ಸಿನಿಮೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನ ಆಗಬೇಕು ಎಂದು ಎಷ್ಟೋ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕನಸು ಕಾಣುತ್ತಾರೆ. ಈ ಬಾರಿ 21 ಸಿನಿಮಾಗಳು ಸ್ಪರ್ಧಿಸುತ್ತಿವೆ. ಈ ಹಿಂದೆ ಭಾರತದ ನಟಿಯರಾದ ಐಶ್ವರ್ಯಾ ರೈ ಬಚ್ಚನ್, ವಿದ್ಯಾ ಬಾಲನ್, ಶರ್ಮಿಳಾ ಟಾಗೋರ್, ನಂದಿತಾ ದಾಸ್ ಅವರು ಕಾನ್ ಚಿತ್ರೋತ್ಸವದ ಜ್ಯೂರಿಗಳಾಗಿ ಕೆಲಸ ಮಾಡಿದ್ದರು. ಈಗ ಆ ನಟಿಯರ ಸಾಲಿಗೆ ದೀಪಿಕಾ ಪಡುಕೋಣೆ ಕೂಡ ಸೇರ್ಪಡೆ ಆಗಿದ್ದಾರೆ. ಮೇ 28ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Thu, 19 May 22