ಕಾನ್​ ಚಿತ್ರೋತ್ಸವದಲ್ಲಿ ಸೌತ್​ ನಟಿಯರಿಗೂ ಮನ್ನಣೆ; ರೆಡ್​ ಕಾರ್ಪೆಟ್​ಗೆ ಪೂಜಾ ಹೆಗ್ಡೆ, ತಮನ್ನಾ, ನಯನತಾರಾ

ಕಾನ್​ ಚಿತ್ರೋತ್ಸವದಲ್ಲಿ ಸೌತ್​ ನಟಿಯರಿಗೂ ಮನ್ನಣೆ; ರೆಡ್​ ಕಾರ್ಪೆಟ್​ಗೆ ಪೂಜಾ ಹೆಗ್ಡೆ, ತಮನ್ನಾ, ನಯನತಾರಾ
ನಯನತಾರಾ, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ

75th Cannes Film Festival: ನಯನತಾರಾ, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಮಾತ್ರವಲ್ಲದೇ ಈ ಬಾರಿ ಅಕ್ಷಯ್​ ಕುಮಾರ್​, ಎ.ಆರ್​. ರೆಹಮಾನ್​, ದೀಪಿಕಾ ಪಡುಕೋಣೆ​ ಮುಂತಾದವರು ಕೂಡ ಈ ಬಾರಿ ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

TV9kannada Web Team

| Edited By: Madan Kumar

May 14, 2022 | 12:50 PM

ಕಾನ್​ ಚಿತ್ರೋತ್ಸವಕ್ಕೆ (Cannes film Festival) ಜಗತ್ತಿನಾದ್ಯಂತ ಮನ್ನಣೆ ಇದೆ. ಈ ಸಿನಿಮೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನ ಆಗಬೇಕು ಎಂದು ಎಷ್ಟೋ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕನಸು ಕಾಣುತ್ತಾರೆ. ಈ ಬಾರಿ 21 ಸಿನಿಮಾಗಳು ಸ್ಪರ್ಧಿಸುತ್ತಿವೆ. ಮೇ 17ರಂದು ಕಾನ್​ ಫಿಲ್ಮ್​ ಫೆಸ್ಟಿವಲ್ (Cannes film Festival 2022)​ ಆರಂಭ ಆಗಲಿದೆ. ಮೇ 28ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಸಿನಿಪ್ರಿಯರಿಗಾಗಿ ಈ ಚಿತ್ರೋತ್ಸವ ನಡೆಯುತ್ತಿದೆ. ಪ್ರತಿ ಬಾರಿ ಬಾಲಿವುಡ್​ನ ಕೆಲವು ಜನಪ್ರಿಯ ನಟಿಯರು ಕಾನ್ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಾರೆ. ಈ ಬಾರಿ ದಕ್ಷಿಣ ಭಾರತದ ನಟಿಯರಿಗೂ ಮನ್ನಣೆ ನೀಡಲಾಗಿದೆ. ಖ್ಯಾತ ನಟಿಯರಾದ ನಯನತಾರಾ (Nayanthara), ಪೂಜಾ ಹೆಗ್ಡೆ ಮತ್ತು ತಮನ್ನಾ ಭಾಟಿಯಾ ಅವರು ಕೂಡ ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಲಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ಬೆಡಗಿಯರ ಲುಕ್​ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕೌತುಕ ಮೂಡಿದೆ.

ಪೂಜಾ ಹೆಗ್ಡೆ, ನಯನತಾರಾ ಹಾಗೂ ತಮನ್ನಾ ಭಾಟಿಯಾ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಭಾರತೀಯ ಸಿನಿಮಾರಂಗಕ್ಕೆ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರಿಗೆ ಈ ಮನ್ನಣೆ ಸಿಗುತ್ತಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಟ್ವೀಟ್​ ಮಾಡಲಾಗಿದೆ.

ಸಲ್ಮಾನ್​ ಖಾನ್​ ಜೊತೆ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಕೆಲಸಗಳಲ್ಲಿ ಪೂಜಾ ಹೆಗ್ಡೆ ಬ್ಯುಸಿ ಆಗಿದ್ದಾರೆ. ಕಾನ್​ ಚಿತ್ರೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅವರು ಬಿಡುವು ಮಾಡಿಕೊಳ್ಳಬೇಕಿದೆ. ಅದೇ ರೀತಿ ತಮನ್ನಾ ಅವರು ಕೂಡ ಕಾನ್​ ಚಿತ್ರೋತ್ಸವ ಮುಗಿಸಿಕೊಂಡು ಬಂದು ‘ಎಫ್​3’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ನಯನತಾರಾ, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಮಾತ್ರವಲ್ಲದೇ ಈ ಬಾರಿ ಅಕ್ಷಯ್​ ಕುಮಾರ್​, ಎ.ಆರ್​. ರೆಹಮಾನ್​, ದೀಪಿಕಾ ಪಡುಕೋಣೆ, ಕಿರುತೆರೆ ನಟಿ ಹೀನಾ ಖಾನ್​ ಮುಂತಾದವರು ಸಹ ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾನ್​ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ ಜ್ಯೂರಿ:

2022ರ ಕಾನ್​ ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸುತ್ತಿದ್ದಾರೆ. ಅದು ಕೂಡ ಜ್ಯೂರಿ ಆಗಿ ಎಂಬುದು ವಿಶೇಷ. ಈ ಹಿಂದೆ ಅನೇಕ ಬಾರಿ ಸೌಂದರ್ಯ ವರ್ಧಕ ಕಂಪನಿಗಳ ಪ್ರಚಾರ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಅವರು ಕಾನ್​ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದುಂಟು. ಆದರೆ ಇದೇ ಮೊದಲ ಬಾರಿಗೆ ಅವರು ಜ್ಯೂರಿ ತಂಡದ ಸದಸ್ಯರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಜಾಗತಿಕ ಮಟ್ಟದಲ್ಲಿ ದೀಪಿಕಾ ಪಡುಕೋಣೆ ಖ್ಯಾತಿ ಹೆಚ್ಚಿದೆ. ಈ ಸಾಧನೆಗಾಗಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಹಿಂದೆ ಭಾರತದ ನಟಿಯರಾದ ಐಶ್ವರ್ಯಾ ರೈ ಬಚ್ಚನ್​, ವಿದ್ಯಾ ಬಾಲನ್, ಶರ್ಮಿಳಾ ಟಾಗೋರ್​, ನಂದಿತಾ ದಾಸ್​ ಅವರು ಕಾನ್​ ಚಿತ್ರೋತ್ಸವದ ಜ್ಯೂರಿಗಳಾಗಿ ಕೆಲಸ ಮಾಡಿದ್ದರು. ಈಗ ಆ ನಟಿಯರ ಸಾಲಿಗೆ ದೀಪಿಕಾ ಪಡುಕೋಣೆ ಕೂಡ ಸೇರ್ಪಡೆ ಆಗಿದ್ದಾರೆ. ಕಾನ್​ ಚಿತ್ರೋತ್ಸವದ ವೆಬ್​ಸೈಟ್​ನಲ್ಲಿ ಜ್ಯೂರಿ ದೀಪಿಕಾ ಪಡುಕೋಣೆ ಅವರ ಪರಿಚಯ ಮಾಡಿಕೊಡಲಾಗಿದೆ. ಭಾರತದ ನಟಿ, ನಿರ್ಮಾಪಕಿ, ಸಮಾಜ ಸೇವಕಿ ಮತ್ತು ಉದ್ಯಮಿ ಎಂದು ಅವರ ಬಗ್ಗೆ ವಿವರ ನೀಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada