‘ವೀಲ್ ಚೇರ್ ರೋಮಿಯೋ’ನ ನಯಾ ಗಾನಬಜಾನ; ಇದು ಪ್ರೀತಿ-ಗೀತಿ ಇತ್ಯಾದಿಯ ಹೂರಣ
Wheel Chair Romeo: ರಾಮ್ ಚೇತನ್ ಮತ್ತು ಮಯೂರಿ ‘ವೀಲ್ ಚೇರ್ ರೋಮಿಯೋ’ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ.
ಕನ್ನಡ ಸಿನಿಮಾ ಲೋಕದಲ್ಲಿ ಈಗ ‘ವೀಲ್ ಚೇರ್ ರೋಮಿಯೋ’ (Wheel Chair Romeo) ಸದ್ದು ಜೋರಾಗಿದೆ. ಅದಕ್ಕೆ ಕಾರಣ ಸಿನಿಮಾದ ಕಂಟೆಂಟು, ಕ್ವಾಲಿಟಿ. ಟ್ರೇಲರ್ ಮೂಲಕ ಡೈಲಾಗ್ ಮಜಾ, ವಿಭಿನ್ನವಾದ ಕಾನ್ಸೆಪ್ಟ್ ಉಣಬಡಿಸಿರುವ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಬಳಗದಿಂದ ಗುನುಗುಡುವ ಗೀತೆ ಬಿಡುಗಡೆಯಾಗಿದೆ. ವಿ. ನಾಗೇಂದ್ರ ಪ್ರಸಾದ್ (V Nagendra Prasad) ಆಕರ್ಷಕ ಸಾಹಿತ್ಯ ಬರೆದಿರುವ ‘ರಂಗು ರಾಟೆ ರಂಗು..’ ಹಾಡು ಸಂಗೀತ ಪ್ರಿಯರಲ್ಲಿ ಗುಂಗು ಹಿಡಿಸಿದೆ. ವಿಜಯ್ ಪ್ರಕಾಶ್ ಧ್ವನಿ ನೀಡಿರುವ, ಭರತ್ ಬಿಜೆ (Bharath BJ) ಸಂಗೀತ ಸ್ಪರ್ಶವಿರುವ ಈ ಹಾಡು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ವೀಲ್ ಚೇರ್ ಮೇಲೆ ಕುಳಿತ ರೋಮಿಯೋಗೆ ಕಣ್ಣು ಕಾಣದ ಯುವತಿಯ ಮೇಲಿ ಪ್ರೀತಿಯಾಗುವ ಸನ್ನಿವೇಶವನ್ನು ಈ ಹಾಡಿನಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ.
ಸಣ್ಣಪರದೆ ಮೂಲಕ ಖ್ಯಾತಿ ಗಳಿಸಿರುವ ರಾಮ್ ಚೇತನ್, ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಖ್ಯಾತಿಯ ಮಯೂರಿ ಈ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಪ್ರತಿಭಾನ್ವಿತ ಕಲಾವಿದರ ದಂಡು ಸಿನಿಮಾದಲ್ಲಿದೆ.
ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಸಿನಿಮಾ ಕನಸು ಕಾಣ್ತಿದ್ದ ನಟರಾಜ್ ಅವರು ‘ವೀಲ್ ಚೇರ್ ರೋಮಿಯೋ’ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ತಾವೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಭರತ್ ಬಿಜೆ ಸಂಗೀತ, ಸಂತೋಷ್ ಪಾಂಡಿ ಛಾಯಾಗ್ರಹಣ, ಗುರು ಕಶ್ಯಪ್ ಸಂಭಾಷಣೆ, ಕಿರಣ್ ಸಂಕಲನ ಸಿನಿಮಾಕ್ಕಿದೆ.
ಕಾಲಿಲ್ಲದ ಯುವಕ ಹಾಗೂ ಕಣ್ಣು ಕಾಣದ ವೇಶ್ಯ ನಡುವಿನ ಪ್ರೀತಿಯ ಕಥಾಹಂದರ ಹೊಂದಿರುವ ‘ವೀಲ್ ಚೇರ್ ರೋಮಿಯೋ’ ಸಿನಿಮಾವನ್ನು ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ತನ್ನ ತಾಕತ್ತು ತೋರ್ಪಡಿಸಿರುವ ‘ವೀಲ್ ಚೇರ್ ರೋಮಿಯೋ’ ಮೇ 27ರಂದು ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾನೆ.
(‘ವೀಲ್ ಚೇರ್ ರೋಮಿಯೋ’ ಸಿನಿಮಾದ ಹಾಡು)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:26 pm, Sat, 14 May 22