ಲಕ್ಷಾಂತರ ಮಂದಿ ಕನಸು ಕಾಣುತ್ತಿರುವ ಮಾದರಿಯ ಜೀವನವನ್ನು ರಾಜಮೌಳಿ (SS Rajamouli) ಅನುಭವಿಸುತ್ತಿದ್ದಾರೆ. 22 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ರಾಜಮೌಳಿಗೆ ಸೋಲೆಂಬುದೇ ಇಲ್ಲ. ಪ್ರತಿ ಸಿನಿಮಾ ಸಹ ಹಿಂದಿನ ಸಿನಿಮಾಕ್ಕಿಂತಲೂ ದೊಡ್ಡ ಹಿಟ್ ಆಗುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ವಿಶ್ವದ ದೊಡ್ಡ ದೊಡ್ಡ ನಟರೇ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಕಾತರರಾಗಿದ್ದಾರೆ. ಇವರ ಒಂದು ಇಶಾರೆಗೆ ಕಾಯುತ್ತಾ ಕೋಟ್ಯಂತರ ರೂಪಾಯಿ ಹಣ ಸುರಿಯಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಸಂತೃಪ್ತ ವೃತ್ತಿ ಜೀವನವನ್ನು ರಾಜಮೌಳಿ ನಡೆಸುತ್ತಿದ್ದಾರೆ. ಆದರೆ ಈ 22 ವರ್ಷದಲ್ಲಿ ಒಮ್ಮೆ ಮಾತ್ರ ತೀವ್ರ ಬೇಸರಕ್ಕೆ ಖಿನ್ನತೆಗೆ (Dipression) ಒಳಗಾಗಿದ್ದರಂತೆ ರಾಜಮೌಳಿ, ಅದೂ ಬಾಹುಬಲಿ (Bahubali) ಸಿನಿಮಾದಿಂದಾಗಿ.
ಜನಪ್ರಿಯ ವೈದ್ಯ, ರಾಜಮೌಳಿ ಪತ್ನಿ ರಮಾ ಅವರ ಸಂಬಂಧಿಯೂ ಆಗಿರುವ ಡಾ ಎವಿ ಗುರುವಾ ರೆಡ್ಡಿ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ರಾಜಮೌಳಿ, ಈ 22 ವರ್ಷಗಳಲ್ಲಿ ತೀವ್ರ ಬೇಸರಕ್ಕೆ, ಖಿನ್ನತೆಗೆ ಒಳಗಾದ ಸಂದರ್ಭ ಬಾಹುಬಲಿ ಸಿನಿಮಾ ಬಿಡುಗಡೆ ಆದ ಸಂದರ್ಭ ಎಂದಿದ್ದಾರೆ. ಬಾಹುಬಲಿ ಸಿನಿಮಾದ ಮೊದಲ ಭಾಗ ಬಿಡುಗಡೆ ಆದಾಗ ನಾನು ನಿರೀಕ್ಷಿಸಿದ ಮಟ್ಟಿಗೆ ಜನಾಭಿಪ್ರಾಯ ಬರಲಿಲ್ಲ. ನಮ್ಮ ಸಿನಿಮಾಕ್ಕೆ ಅತಿ ಹೆಚ್ಚು ಹಣ ಬರುವುದು ತೆಲುಗು ರಾಜ್ಯಗಳಿಂದ ಆದರೆ ತೆಲುಗು ರಾಜ್ಯಗಳಲ್ಲಿಯೇ ಕೆಲವರು ಸಿನಿಮಾದ ಬಗ್ಗೆ ಋಣಾತ್ಮಕವಾಗಿ ಮಾತನಾಡಲು ಆರಂಭಿಸಿದರು. ತೆಲುಗು ಚಿತ್ರರಂಗದ ಅತಿ ದೊಡ್ಡ ಫ್ಲಾಪ್ ಎಂದು ಸಹ ಹೇಳಿಬಿಟ್ಟರು” ಎಂದು ರಾಜಮೌಳಿ ನೆನಪಿಸಿಕೊಂಡಿದ್ದಾರೆ.
ಆರಂಭದಲ್ಲಿ ಬಂದ ಆ ಮಾತುಗಳು ನನ್ನಲ್ಲಿ ತೀವ್ರ ಆತಂಕ ಮೂಡಿಸಿತ್ತು. ಆ ಸಿನಿಮಾಕ್ಕಾಗಿ ನಿರ್ಮಾಪಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿಬಿಟ್ಟಿದ್ದರು. ನನ್ನನ್ನು ನಂಬಿ ತಮ್ಮ ಬಳಿ ಇದ್ದ ಎಲ್ಲವನ್ನೂ ತೊಡಗಿಸಿದ್ದರು, ಆ ಸಿನಿಮಾ ಫ್ಲಾಪ್ ಆಗಿದ್ದರೆ ಆ ನಿರ್ಮಾಪಕರು ಬೀದಿ ಪಾಲಾಗಿಬಿಡುತ್ತಿದ್ದರು. ಅದು ನನ್ನನ್ನು ಬಹಳ ಆತಂಕಕ್ಕೆ ದೂಡಿಬಿಟ್ಟಿತು, ನಾನು ಖಿನ್ನತೆಗೆ ಜಾರಿ ಬಿಟ್ಟೆ. ನನ್ನ ಜೀವನದ ಅತ್ಯಂತ ಕೆಟ್ಟ, ಬೇಸರದ ಸಮಯವೆಂದರೆ ಅದೇ ಎಂದರು ರಾಜಮೌಳಿ. ಅಂದಹಾಗೆ ಬಾಹುಬಲಿ ಸಿನಿಮಾವನ್ನು ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ನಿರ್ಮಾಣ ಮಾಡಿದ್ದಾರೆ.
ಆದರೆ ರಾಜಮೌಳಿ ಭಯಪಟ್ಟಂತೆ ಆಗಲಿಲ್ಲ, ಸಿನಿಮಾ ಭಾರಿ ದೊಡ್ಡ ಹಿಟ್ ಆಯಿತು. 180 ಕೋಟಿ ರುಪಾಯಿ ಬಜೆಟ್ನ ಆ ಸಿನಿಮಾ ಸುಮಾರು 600 ಕೋಟಿ ರುಪಾಯಿ ಕಲೆಕ್ಷನ್ ಮಾಡಿತು. ಅದಾದ ಬಳಿಕ ಬಂದ ಬಾಹುಬಲಿ 2 ಸಿನಿಮಾ ಅಂತೂ ಭಾರತದಲ್ಲಿ ದಾಖಲೆಗಳನ್ನು ಸೃಷ್ಟಿಸಿ 1800 ಕೋಟಿಗೂ ಹೆಚ್ಚು ಹಣ ಗಳಿಸಿತು. ರಾಜಮೌಳಿಯನ್ನು ಭಾರತದ ಅತ್ಯಂತ ಯಶಸ್ವಿ ನಿರ್ದೇಶಕರನ್ನಾಗಿ ಮಾಡಿತು.
ಇದನ್ನೂ ಓದಿ:ಅದ್ಭುತ ಸಿನಿಮಾ ಆಲೋಚನೆಯಲ್ಲಿದ್ದ ರಾಜಮೌಳಿಗೆ ಪ್ರವೇಶ ನಿರಾಕರಿಸಿತ್ತು ಪಾಕಿಸ್ತಾನ
ಬಾಹುಬಲಿ ಸಿನಿಮಾದ ಮೊದಲ ಭಾಗ ಬಿಡುಗಡೆ ಆದಾಗ ರಾಜಮೌಳಿಗೆ ಕೆಲವು ಅಡೆ-ತಡೆಗಳು ಎದುರಾಗಿದ್ದವು. ಕರ್ನಾಟಕದಲ್ಲಿ ಆ ಸಿನಿಮಾಕ್ಕೆ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರ ಬಗ್ಗೆ ಲಘುವಾಗಿ ಮಾತನಾಡಿದ್ದ ಸತ್ಯರಾಜ್ ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದ ಕಾರಣ ಆ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಲಾಯ್ತು. ಕರವೇ ಬಣಗಳ ಸದಸ್ಯರು ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದರು. ಅದಾದ ಬಳಿಕ ಸ್ವತಃ ರಾಜಮೌಳಿ ಹಾಗೂ ನಟ ಸತ್ಯರಾಜ್ ಅವರುಗಳು ಕ್ಷಮೆ ಕೋರಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಬಳಿಕ ಕರ್ನಾಟಕದಲ್ಲಿಯೂ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ