ಅದ್ಭುತ ಸಿನಿಮಾ ಆಲೋಚನೆಯಲ್ಲಿದ್ದ ರಾಜಮೌಳಿಗೆ ಪ್ರವೇಶ ನಿರಾಕರಿಸಿತ್ತು ಪಾಕಿಸ್ತಾನ
Rajamouli: ಸಿಂಧೂ ನಾಗರಿಕತೆ ಬಗ್ಗೆ ಸಿನಿಮಾ ಮಾಡುವ ಯೋಚನೆಯಲ್ಲಿದ್ದ ರಾಜಮೌಳಿ ಮೊಹೆಂಜೊಧಾರೊಗೆ ಭೇಟಿ ಕೊಡಲು ಯತ್ನಿಸಿದಾಗ ಪಾಕಿಸ್ತಾನ ಸರ್ಕಾರವು ಅವಕಾಶ ನಿರಾಕರಿಸಿತ್ತಂತೆ.
ಆರ್ಆರ್ಆರ್ (RRR) ಸಿನಿಮಾದ ಮೂಲಕ ವಿಶ್ವದ ಅಗ್ರಗಣ್ಯ ನಿರ್ದೇಶಕರ ಪಟ್ಟಿ ಸೇರಿಕೊಂಡಿದ್ದಾರೆ ರಾಜಮೌಳಿ (SS Rajamouli). ಭಾರತದ ಐತಿಹಾಸಿಕ, ಪೌರಾಣಿಕ ಕತೆಗಳನ್ನು ಸಿನಿಮಾ ಮಾಡಿ ಜಗತ್ತಿಗೆ ತೋರಿಸಬೇಕೆಂಬ ಆಸೆ ಹೊಂದಿರುವ ರಾಜಮೌಳಿ, ಆ ರೀತಿಯ ಕತೆಗಳಿಗಾಗಿ, ಕಥಾ ಎಳೆಗಳಿಗಾಗಿ ಹುಡುಕಾಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಇಂಥಹುದೇ ಐತಿಹಾಸಿಕ ಸಿನಿಮಾ ಮಾಡುವ ಉದ್ದೇಶದಿಂದಾಗಿ ಈಗಿನ ಪಾಕಿಸ್ತಾನದಲ್ಲಿರುವ ಸ್ಥಳವೊಂದಕ್ಕೆ ಭೇಟಿ ಮಾಡಲು ರಾಜಮೌಳಿ ಯತ್ನಿಸಿದ್ದರು, ಆದರೆ ಪಾಕಿಸ್ತಾನವು ಪ್ರವೇಶವನ್ನು ನಿರಾಕರಿಸಿತ್ತಂತೆ. ಈ ವಿಷಯವನ್ನು ಇಂದು ಟ್ವೀಟ್ ಮೂಲಕ ರಾಜಮೌಳಿ ಬಹಿರಂಗಪಡಿಸಿದ್ದಾರೆ.
ಭಾರತದ ಹೆಮ್ಮೆಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆನಂದ್ ಮಹಿಂದ್ರಾ ಅವರು, ರಾಜಮೌಳಿಯವರಿಗೆ ಟ್ವೀಟ್ ಒಂದನ್ನು ಮಾಡಿ, ಸಿಂಧು ನಾಗರೀಕತೆಯ ಬಗ್ಗೆ ಸಿನಿಮಾ ಒಂದನ್ನು ಮಾಡಿ ಎಂದು ಮನವಿ ಮಾಡಿದ್ದರು. ಹರಪ್ಪ, ಮೊಹಂಜೊಧಾರೊ, ಧೋಲವೀರಾ ಇನ್ನಿತರೆ ಪುರಾತನ ನಾಗರೀಕತೆಗಳ ಚಿತ್ರಗಳುಳ್ಳ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದ ಆನಂದ್ ಮಹಿಂದ್ರಾ, ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಯನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಆ ಪುರಾತನ ನಾಗರಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಆ ಅದ್ಭುತ ಯುಗ ಆಗಿನ ಜನ ಜೀವನದ ಆಧಾರಿಸಿದ ಸಿನಿಮಾ ಮಾಡುವ ಯೋಜನೆಯನ್ನು ಪರಿಗಣಿಸಿ” ಎಂದು ರಾಜಮೌಳಿಯವರ ಬಳಿ ಮನವಿ ಮಾಡಿದ್ದರು.
ಆನಂದ್ ಮಹಿಂದ್ರಾರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ರಾಜಮೌಳಿ, ”ಧೊಲವೀರನಲ್ಲಿ ಮಗಧೀರ ಸಿನಿಮಾದ ಚಿತ್ರೀಕರಣ ಮಾಡುವ ವೇಳೆ ನಾನೊಂದು ಮರವನ್ನು ನೋಡಿದ್ದೆ. ಆ ಮರ ಅದೆಷ್ಟು ಪುರಾತನವಾದದ್ದು ಎಂದರೆ ಅದು ಪಳೆಯುಳಿಕೆ ಆಗಿಬಿಟ್ಟಿತ್ತು. ಆಗ ಸಿಂಧು ನಾಗರೀಕತೆಯ ಉದಯ ಹಾಗೂ ಅವಸಾನದ ಬಗ್ಗೆ ಆ ಮರವೇ ಕತೆ ಹೇಳುವ ಮಾದರಿಯ ಸಿನಿಮಾ ಒಂದರ ಆಲೋಚನೆ ಆಗ ಹೊಳೆಯಿತು. ಅದಾದ ಕೆಲವು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ, ಆಗ ಮೊಹೆಂಜೊಧಾರೊಗೆ ಭೇಟಿ ನೀಡುವ ಪ್ರಬಲ ಪ್ರಯತ್ನ ಮಾಡಿದೆ. ಆದರೆ ಅವಕಾಶ ನಿರಾಕರಿಸಲಾಯ್ತು” ಎಂದಿದ್ದಾರೆ.
ಸಿಂಧು ನಾಗರಿಕತೆಯಲ್ಲಿ ಹರಪ್ಪ ಹಾಗೂ ಮೊಹೆಂಜೊಧಾರೊಗಳದ್ದು ಮಹತ್ವದ ಪಾತ್ರ. ಈ ಎರಡೂ ಪಟ್ಟಣಗಳು ಈಗ ಪಾಕಿಸ್ತಾನದಲ್ಲಿವೆ. ಮೊಹೆಂಜೊಧಾರೊ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಖಾನಾ ಜಿಲ್ಲೆಗೆ ಸೇರಿದ್ದರೆ, ಹರಪ್ಪ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಹಿವಾಲ್ ಜಿಲ್ಲೆಗೆ ಸೇರಿದೆ.
ಸಿಂಧು ನಾಗರಿಕತೆಯ ಕುರಿತಾದ ಕೆಲವು ಬೆರಳೆಣಿಕೆಯ ಚಿತ್ರಗಳು ಭಾರತದಲ್ಲಿ ಈಗಾಗಲೇ ನಿರ್ಮಾಣವಾಗಿವೆ ಆದರೆ ಯಾವುವೂ ಸಹ ದೊಡ್ಡ ಪರಿಣಾಮ ಬೀರಿಲ್ಲ. ಹೃತಿಕ್ ರೋಷನ್ ನಟನೆಯ ಮೊಹಂಜೊಧಾರೊ ಅದರಲ್ಲೊಂದು. ಆದರೆ ರಾಜಮೌಳಿ, ಈ ಮಾದರಿಯ ಸಿನಿಮಾಗಳನ್ನು ಮಾಡುವುದರಲ್ಲಿ ನಿಸ್ಸೀಮರು, ಸ್ವತಃ ಅವರೇ ಹೇಳಿಕೊಂಡಿರುವಂತೆ ಭಾರತದ ಐತಿಹಾಸಿಕ ಹಾಗೂ ಪೌರಾಣಿಕ ಕತೆಗಳನ್ನು ತೆರೆಗೆ ತರುವುದರಲ್ಲಿ ಅವರಿಗೆ ಅತೀವ ಆಸಕ್ತಿಯಿದೆ. ಹಾಗಾಗಿ ಆನಂದ್ ಮಹಿಂದ್ರಾ ನೀಡಿರುವ ಸಲಹೆಯನ್ನು ರಾಜಮೌಳಿ ಪರಿಗಣಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಜೊತೆಗೆ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾವು ಇಂಡಿಯಾನಾ ಜೋನ್ಸ್ ಮಾದರಿಯ ಪ್ರವಾಸಿ ಸಾಹಸಮಯ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದ ಬಹುತೇಕ ಕತೆ ಕಾಡುಗಳಲ್ಲಿ ನಡೆಯುವ ಸಾಹಸಗಳನ್ನು ಒಳಗೊಂಡಿರಲಿದೆ. ಅಮೆಜಾನ್ ಕಾಡು ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಿರುವುದಾಗಿ ರಾಜಮೌಳಿ ಹೇಳಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಬೇಕಾದ ತಯಾರಿಯನ್ನು ಈಗಾಗಲೇ ಆರಂಭಿಸಿದ್ದು, ಅದಕ್ಕಾಗಿ ಹಾಲಿವುಡ್ನ ಕೆಲವು ಟಾಪ್ ಸ್ಟುಡಿಯೋಗಳೊಟ್ಟಿಗೆ, ತಂತ್ರಜ್ಞರೊಟ್ಟಿಗೆ ಮಾತುಕತೆ ಸಹ ಮುಗಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ