ನಟ ಅಲ್ಲು ಅರ್ಜುನ್ ಅವರಿಗೆ ಒಂದರ ಹಿಂದೊಂದು ಸಂಕಷ್ಟ ಎದುರಾಗುತ್ತಿದೆ. ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2’ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿದ್ದರಿಂದ ಅಭಿಮಾನಿಯೊಬ್ಬರು ಮೃತರಾದ ಘಟನೆ ಇತ್ತೀಚೆಗೆ ನಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗ ಪ್ರತಿಭಟನೆ ಕೂಡ ನಡೆಯುತ್ತಿದೆ. ಅಲ್ಲು ಅರ್ಜುನ್ ಅವರ ಮನೆಯ ಎದುರು ಪ್ರತಿಭಟನೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದ್ದು, ಈ ವೇಳೆ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ.
ಇಂದು (ಡಿಸೆಂಬರ್ 22) ಓಯು ಜಎಸಿ ಸಂಘಟನೆಯ ಸದಸ್ಯರು ಜ್ಯುಬಿಲಿ ಹಿಲ್ಸ್ನಲ್ಲಿ ಇರುವ ಅಲ್ಲು ಅರ್ಜುನ್ ನಿವಾಸದ ಎದುರು ಪ್ರತಿಭಟನೆ ಮಾಡಲು ಬಂದಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿ ಆಗಿದೆ. ಮನೆಯ ಭದ್ರತಾ ಸಿಬ್ಬಂದಿ ಮೇಲೂ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಒಂದೆಡೆ ‘ಪುಷ್ಪ 2’ ಸಿನಿಮಾ ಸೂಪರ್ ಹಿಟ್ ಆಗಿ, 1500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಖುಷಿ ಅಲ್ಲು ಅರ್ಜುನ್ ಅವರಿಗೆ ಇದೆ. ಆದರೆ ಈ ಖುಷಿಯನ್ನು ಸರಿಯಾಗಿ ಸಂಭ್ರಮಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅಭಿಮಾನಿಯ ಸಾವಿನಿಂದ ಉಂಟಾದ ವಿವಾದ ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: ಫ್ಯಾನ್ಸ್ ಹೆಸರಲ್ಲಿ ನಕಲಿ ಖಾತೆ, ಕೆಟ್ಟ ಭಾಷೆ: ಖಡಕ್ ಎಚ್ಚರಿಕೆ ನೀಡಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರ ಮೇಲೆ ತೆಲಂಗಾಣ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಅನುಮತಿ ಪಡೆಯದೇ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರಿಂದಲೇ ಕಾಲ್ತುಳಿತ ಉಂಟಾಯಿತು ಎಂದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ಕೇಸ್ನಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಆದರೆ ಅದೇ ದಿನ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈಗ ಅಲ್ಲು ಅರ್ಜುನ್ ಅವರು ಜನರ ಪ್ರತಿಭಟನೆಯ ಕಾವು ಎದುರಿಸುವಂತಾಗಿದೆ.
ಈ ನಡುವೆ ತಮ್ಮ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಪೋಸ್ಟ್ಗಳನ್ನು ಹಾಕಬಾರದು ಎಂದು ಅಲ್ಲು ಅರ್ಜುನ್ ಅವರು ಮನವಿ ಮಾಡಿಕೊಂಡಿದ್ದಾರೆ. ಕೆಟ್ಟ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.