ಅಲ್ಲು ಅರ್ಜುನ್ ನಿವಾಸದ ಮೇಲೆ ಕಲ್ಲು ತೂರಾಟ: ಪ್ರತಿಕ್ರಿಯೆ ನೀಡಿದ ಅಲ್ಲು ಅರವಿಂದ್
ಅಭಿಮಾನಿಯ ಸಾವಿನ ಬಳಿಕ ಅಲ್ಲು ಅರ್ಜುನ್ ಅವರ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜುಬಿಲಿ ಹಿಲ್ಸ್ ನಿವಾಸದ ಎದುರು ಪ್ರತಿಭಟನೆ ಮಾಡಲಾಗಿದ್ದು, ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ಘಟನೆ ಕುರಿತಂತೆ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಪ್ರತಿಕ್ರಿಯಿಸಿದ್ದಾರೆ. ಸಂಯಮ ಸಾಧಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
‘ಪುಷ್ಪ 2’ ಸಿನಿಮಾದ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯ ಕುರಿತಂತೆ ಅವರ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಎಲ್ಲರೂ ನೋಡಿದ್ದಾರೆ. ಜುಬಿಲಿ ಹಿಲ್ಸ್ ಪೊಲೀಸರು ನಮ್ಮ ಮನೆಗೆ ಬಂದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಯಾರೇ ಜಗಳ ಮಾಡಿದರೂ ಅವರನ್ನು ಕರೆದುಕೊಂಡು ಹೋಗಲು ಪೊಲೀಸರು ಸಿದ್ಧರಿದ್ದಾರೆ. ಇಂತಹ ದುಷ್ಕೃತ್ಯಗಳಿಗೆ ಯಾರೂ ಪ್ರಚೋದನೆ ನೀಡಬಾರದು’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಒಯು ಜೆಎಸಿ ನಾಯಕರು ಅಲ್ಲು ಅರ್ಜುನ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಪ್ರತಿಭಟನಾಕಾರರನ್ನು ಮನೆಯ ಭದ್ರತಾ ಸಿಬ್ಬಂದಿ ತಡೆಯಲು ಪ್ರಯತ್ನಿಸಿದಾಗ ಕಲ್ಲು ತೂರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ‘ಸದ್ಯ ಈ ವಿಚಾರದಲ್ಲಿ ಸಂಯಮ ಸಾಧಿಸುವ ಅಗತ್ಯವಿದೆ. ಅದಕ್ಕಾಗಿಯೇ ನಾವು ನಮ್ಮ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ. ದಯವಿಟ್ಟು ಎಲ್ಲರೂ ಅರ್ಥಮಾಡಿಕೊಳ್ಳಲು ನಾವು ವಿನಂತಿಸುತ್ತೇವೆ’ ಎಂದಿದ್ದಾರೆ ಅಲ್ಲು ಅರವಿಂದ್.
ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರು ಇನ್ನೂ ಪ್ರತಿಕ್ರಿಯೆ ನೀಡುವುದು ಬಾಕಿ ಇದೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಆದಾಗ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಆಗ ಉಂಟಾದ ಕಾಲ್ತುಳಿದಲ್ಲಿ ಮಹಿಳೆಯೊಬ್ಬರು ಮೃತರಾಗಿದ್ದರು. ಅವರ ಪುತ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ ಹೆಸರಲ್ಲಿ ನಕಲಿ ಖಾತೆ, ಕೆಟ್ಟ ಭಾಷೆ: ಖಡಕ್ ಎಚ್ಚರಿಕೆ ನೀಡಿದ ಅಲ್ಲು ಅರ್ಜುನ್
ಮಗನ ಪರಿಸ್ಥಿತಿ ಬಗ್ಗೆ ಇತ್ತೀಚೆಗೆ ಅಲ್ಲು ಅರವಿಂದ್ ಅವರು ಮಾತನಾಡಿದ್ದರು. ‘ಅಭಿಮಾನಿಯ ಸಾವಿನಿಂದ ನನ್ನ ಮಗ ಡಿಸ್ಟರ್ಬ್ ಆಗಿದ್ದಾನೆ. ಒಬ್ಬನೇ ಇರುತ್ತಾರೆ. ಕಳೆದ 2 ವಾರದಿಂದ ಯಾರ ಜೊತೆಗೂ ಬೆರೆಯುತ್ತಿಲ್ಲ. ವಿದೇಶಕ್ಕೆ ಹೋಗಿ ಒಂದು ಬ್ರೇಕ್ ಪಡೆದುಕೊಂಡು ಬಾ ಎಂದು ನಾನು ಹೇಳಿದ್ದೇನೆ. ಆದರೆ ಅದಕ್ಕೂ ಅವನು ಸಿದ್ಧನಿಲ್ಲ. ಮಗನನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಅಲ್ಲು ಅರವಿಂದ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.