
ರಜನಿಕಾಂತ್ ನಟನೆಯ ಕೂಲಿ, ಜೂನಿಯರ್ ಎನ್ಟಿಆರ್ ಅಭಿನಯದ ‘ವಾರ್ 2’ ಚಿತ್ರಗಳಿಂದ ‘ಸು ಫ್ರಮ್ ಸೋ’ ಸಿನಿಮಾದ (Su From So Movie) ಗಳಿಕೆ ಕಡಿಮೆ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಊಹೆ ತಪ್ಪಾಗಿದೆ. ಸಿನಿಮಾ ಕಲ್ಪನೆಗೂ ಮೀರಿ ಯಶಸ್ಸು ಕಂಡಿದೆ. 23ನೇ ದಿನವೂ ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ ಎಂದರೆ ಈ ಚಿತ್ರದ ತಾಕತ್ತು ಎಷ್ಟಿದೆ ಎಂಬುದನ್ನು ಊಹಿಸಿ. ಈ ಸಿನಿಮಾ ಇನ್ನೂ ಕೆಲ ವಾರ ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
‘ವಾರ್ 2’ ಸಿನಿಮಾ ಹಾಗೂ ‘ಕೂಲಿ’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿವೆ. ಈ ಎರಡೂ ಸಿನಿಮಾಗಳು ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈ ಎರಡೂ ಸಿನಿಮಾಗಳ ಅಬ್ಬರದ ಮಧ್ಯೆಯೂ ‘ಸು ಫ್ರಮ್ ಸೋ’ ತನ್ನ ಕಲೆಕ್ಷನ್ ಮುಂದುವರಿಸಿದೆ. ಈ ಚಿತ್ರ ಕನ್ನಡಿಗರ ಜೊತೆ ಪರಭಾಷಿಗರಿಗೂ ಹೆಚ್ಚು ಇಷ್ಟ ಆಗಿದೆ. ಈ ಚಿತ್ರವನ್ನು ಜನರು ಕೈ ಬಿಟ್ಟಿಲ್ಲ.
‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 15ರಂದು 2.50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆಗಸ್ಟ್ 14ರಂದು ಈ ಸಿನಿಮಾ 1.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅಂದರೆ ಸಿನಿಮಾದ ಕಲೆಕ್ಷನ್ ಮತ್ತೆ ಹೆಚ್ಚಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ನಾಲ್ಕನೇ ವಾರವೂ ಸಿನಿಮಾ ಅಬ್ಬರ ಮುಂದುವರಿದಿದೆ.
ಇದನ್ನೂ ಓದಿ: ‘ಕೂಲಿ’, ‘ವಾರ್ 2’ ಚಿತ್ರದ ಅಬ್ಬರದ ಮಧ್ಯೆಯೂ ಸ್ಥಿರವಾಗಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
ಸದ್ಯ ಸಿನಿಮಾದ ಕನ್ನಡದ ಕಲೆಕ್ಷನ್ 67.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಸಿನಿಮಾದ ಕಲೆಕ್ಷನ್ 97.34 ಕೋಟಿ ರೂಪಾಯಿ ಆಗಿದೆ. ಈ ಚಿತ್ರಕ್ಕೆ ವಿದೇಶದಿಂದ 11 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಹರಿದು ಬಂದಿದೆ. ಇದು ಸಿನಿಮಾದ ಹೆಚ್ಚುಗಾರಿಕೆ. ಇಂದು ಅಥವಾ ನಾಳೆ ವೇಳೆಗೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.