
ಡಿಸೆಂಬರ್ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಡಿಸೆಂಬರ್ ಮತ್ತು ಜನವರಿ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಆಗಿಯೇ ಆಗುತ್ತವೆ. ಈ ಡಿಸೆಂಬರ್ ಅಂತೂ ಕನ್ನಡ ಸಿನಿಮಾ ಪ್ರೇಮಿಗಳಿಗೆ ಹಬ್ಬವೇ ಸರಿ. ಡಿಸೆಂಬರ್ 11 ರಂದು ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದೆ. ಅದಾದ ಬಳಿಕ ಇನ್ನೂ ಎರಡು ದೊಡ್ಡ ಸಿನಿಮಾಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಡಿಸೆಂಬರ್ 25 ರಂದು ಸುದೀಪ್ ನಟನೆಯ ‘ಮಾರ್ಕ್’ ಮತ್ತು ಅದೇ ದಿನದಂದು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಹ ತೆರೆಗೆ ಬರುತ್ತಿದೆ. ಈ ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದೆ.
‘45’ ಮತ್ತು ‘ಮಾರ್ಕ್’ ಸಿನಿಮಾಗಳು ಒಂದೇ ದಿನ ಅಂದರೆ ಡಿಸೆಂಬರ್ 25 ರಂದೇ ಬಿಡುಗಡೆ ಆಗುತ್ತಿವೆ. ಒಂದೇ ದಿನ ಬಿಡುಗಡೆ ಆದರೂ ಸಹ ಪರಸ್ಪರ ಎದುರಾಳಿಗಳು ಆಗದಂತೆ ಕೆಲ ಎಚ್ಚರಿಕೆಗಳನ್ನು ಚಿತ್ರತಂಡಗಳು ವಹಿಸಿಕೊಂಡಿವೆ. ಎರಡೂ ಸಿನಿಮಾಗಳು ಪೇಯ್ಡ್ ಪ್ರೀಮಿಯರ್ ಶೋ ಅಥವಾ ವಿಶೇಷ ಶೋಗಳನ್ನು ಆಯೋಜಿಸುತ್ತಿದ್ದು, ಈ ವಿಶೇಷ ಶೋಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ.
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಬೆಳಿಗ್ಗೆ 6 ಗಂಟೆಗೆ ಶೋ ಪ್ರಾರಂಭ ಮಾಡುತ್ತಿದ್ದರೆ, ‘45’ ಸಿನಿಮಾ ಡಿಸೆಂಬರ್ 24ರ ರಾತ್ರಿಯೇ ಶೋ ಪ್ರದರ್ಶನ ಮಾಡುತ್ತಿದೆ. ಡಿಸೆಂಬರ್ 24ರ ರಾತ್ರಿಯೇ ವಿಶೇಷ ಶೋ ಅನ್ನು ‘45’ ಚಿತ್ರತಂಡ ಆಯೋಜಿಸಿದ್ದು ರಾತ್ರಿ 7 ಗಂಟೆಗೆ ಕೆಲವೆಡೆ, 7:30ಕ್ಕೆ ಕೆಲವೆಡೆ ಶೋಗಳು ಪ್ರದರ್ಶನಗೊಳ್ಳಲಿವೆ. ಆದರೆ ಟಿಕೆಟ್ ದರವನ್ನು ಕಡಿಮೆಯೇ ನಿಗದಿ ಪಡಿಸಲಾಗಿದೆ. ‘ಮಾರ್ಕ್’ ಸಿನಿಮಾದ ವಿಶೇಷ ಶೋಗಳ ಟಿಕೆಟ್ ದರ 400 ರಿಮದ 500 ರೂಪಾಯಿಗಳಿದ್ದರೆ, ‘45’ ಸಿನಿಮಾದ ಟಿಕೆಟ್ ದರ 200 ರಿಂದ 250 ರೂಪಾಯಿ ಪಾತ್ರವೇ ಇದೆ.
ಇದನ್ನೂ ಓದಿ:ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಪವಿತ್ರಾ ಗೌಡ ಯತ್ನ: ಬೇಡವೇ ಬೇಡ ಎಂದ ದಾಸ
‘45’ ಸಿನಿಮಾ ಡಿಸೆಂಬರ್ 24ರ ರಾತ್ರಿ ವಿಶೇಷ ಶೋ ಆಯೋಜಿಸಿದೆ ಆದರೆ ಡಿಸೆಂಬರ್ 25ರ ಬೆಳಿಗ್ಗೆ 6 ಗಂಟೆ ಅಥವಾ ಅರ್ಲಿ ಮಾರ್ನಿಂಗ್ ಶೋ ಅನ್ನು ಪ್ರದರ್ಶಿಸುತ್ತಿಲ್ಲ ಆ ಮೂಲಕ ‘ಮಾರ್ಕ್’ ಜೊತೆ ಸ್ಪರ್ಧೆಗೆ ಇಳಿಯುವ ಪ್ರಯತ್ನ ಮಾಡಿಲ್ಲ. ಅದರಂತೆ ‘ಮಾರ್ಕ್’ ಸಿನಿಮಾ ಸಹ ಡಿಸೆಂಬರ್ 24ರಂದು ಯಾವುದೇ ಪ್ರೀಮಿಯರ್ ಶೋ ಆಯೋಜಿಸಿಲ್ಲ. ಆ ಮೂಲಕ ‘45’ ಸಿನಿಮಾದ ವಿಶೇಷ ಶೋಗಳಿಗೆ ಯಾವುದೇ ಸ್ಪರ್ಧೆ ಒಡ್ಡಿಲ್ಲ.
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಇನ್ನು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶಿಸದ್ದಾರೆ. ಇದು ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಗಮನ ಸೆಳೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ