
ಪ್ರತಿ ಬಾರಿಯಂತೆ ಈ ವರ್ಷವೂ ಆಸ್ಕರ್ (Oscars 2022) ಅಖಾಡದಲ್ಲಿ ನೂರಾರು ಸಿನಿಮಾಗಳು ಹಣಾಹಣಿ ನಡೆಸುತ್ತಿವೆ. ಭಾರತದಿಂದ ನಾಮನಿರ್ದೇಶನಗೊಂಡಿದ್ದ ‘ಜೈ ಭೀಮ್’ (Jai Bhim Movie) ಸಿನಿಮಾ ಬಗ್ಗೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಸೂರ್ಯ (Suriya) ಅಭಿನಯದ ಈ ಸಿನಿಮಾ ಸಾಮಾಜಿಕ ಕಳಕಳಿಯ ಹಥಾಹಂದರ ಹೊಂದಿದೆ. ಒಟಿಟಿಯಲ್ಲಿ ರಿಲೀಸ್ ಆಗಿ ಜನಮೆಚ್ಚುಗೆ ಗಳಿಸಿದ ಈ ಸಿನಿಮಾ ಈಗ ಆಸ್ಕರ್ ರೇಸ್ನಿಂದ ಹೊರಬಿದ್ದಿದೆ. ಅಂತಿಮ ಸುತ್ತಿಗೆ ಆಯ್ಕೆ ಆಗಲು ‘ಜೈ ಭೀಮ್’ ವಿಫಲವಾಗಿದೆ. ಈ ಬಾರಿಯಾದರೂ ಭಾರತಕ್ಕೆ ಒಂದು ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಆದರೂ ಕೂಡ ಸೂರ್ಯ ಅಭಿಮಾನಿಗಳ ಖುಷಿ ಕಡಿಮೆ ಆಗಿಲ್ಲ. ಈ ಸಿನಿಮಾ ಆಸ್ಕರ್ ಗೆಲ್ಲದೇ ಇರಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ ಎಂಬ ಕಾರಣಕ್ಕೆ ಸೂರ್ಯ ಫ್ಯಾನ್ಸ್ ಹೆಮ್ಮೆ ಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೂರ್ಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
‘ಜೈ ಭೀಮ್’ ಚಿತ್ರಕ್ಕೆ ಆಸ್ಕರ್ ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಂತ ಈ ಸಿನಿಮಾ ಮಾಡಿದ ಸಾಧನೆ ಸಣ್ಣದೇನಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕೆಲವು ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ‘ಆಸ್ಕರ್ ಯೂಟ್ಯೂಬ್ ಲೈಬ್ರರಿ’ಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಿನಿಮಾ ಎಂಬ ಖ್ಯಾತಿಗೆ ‘ಜೈ ಭೀಮ್’ ಪಾತ್ರವಾಗಿದೆ. ಈ ಬಗ್ಗೆ ಸೂರ್ಯ ಫ್ಯಾನ್ಸ್ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.
‘ಆಸ್ಕರ್ನ ಅತ್ಯುತ್ತಮ ಸಿನಿಮಾ ಕ್ಯಾಟಗರಿ ರೇಸ್ನಿಂದ ಜೈ ಭೀಮ್ ಸಿನಿಮಾ ಹೊರಬಿದ್ದಿರಬಹುದು. ಆದರೆ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಯಾವಾಗಲೂ ನಂಬರ್ ಒನ್ ಆಗಿರಲಿದೆ. ಇದು ನಮ್ಮ ಹೆಮ್ಮೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಸೂರ್ಯ ನಟನೆಯ ಸಿನಿಮಾಗಳ ಕೆಲವು ಸ್ಫೂರ್ತಿದಾಯಕ ಡೈಲಾಗ್ಗಳನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ಸೂರ್ಯ ಇನ್ನಷ್ಟು ಸಾಧನೆ ಮಾಡುತ್ತಾರೆ ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆನ್ನು ತಟ್ಟುತ್ತಿದ್ದಾರೆ.
2021ರ ನವೆಂಬರ್ನಲ್ಲಿ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ‘ಜೈ ಭೀಮ್’ ಚಿತ್ರ ತೆರೆಕಂಡಿತು. ರಿಯಲ್ ಲೈಫ್ ಘಟನೆಯನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ಸೂರ್ಯ ಲಾಯರ್ ಪಾತ್ರ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾದ ಈ ಸಿನಿಮಾ ಕುರಿತು ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಟಿ.ಜೆ. ಜ್ಞಾನವೇಲ್ ನಿರ್ದೇಶನದ ಈ ಚಿತ್ರ ಹಲವು ಆಯಾಮಗಳಲ್ಲಿ ಜನಮನ ಗೆದ್ದಿದೆ.
ಇದನ್ನೂ ಓದಿ:
Oscar Nominations 2022: ಆಸ್ಕರ್ ಫೈನಲ್ ರೇಸ್ನಲ್ಲಿ ಯಾರೆಲ್ಲಾ? ಇಲ್ಲಿದೆ ಪೂರ್ಣ ಪಟ್ಟಿ
ಆತ್ಮಹತ್ಯೆ ಮಾಡಿಕೊಂಡ ಆಸ್ಕರ್ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್ ಬಾಳಿನಲ್ಲಿ ಆವರಿಸಿತು ಕತ್ತಲು