ಸೂರ್ಯ ನಟನೆಯ ‘ಕಂಗುವ’ ಸಿನಿಮಾ ನಾಳೆ ಅಂದರೆ ನವೆಂಬರ್ 14ಕ್ಕೆ ತೆರೆ ಕಾಣುತ್ತಿದೆ. ಬೆಂಗಳೂರಿನಲ್ಲಿ ‘ಕಂಗುವ’ ಸಿನಿಮಾ ಬೆಳಿಗ್ಗೆ 6 ಗಂಟೆಗೆ ಪ್ರಾರಂಭ ಆಗಲಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿಯೂ ಸಹ ‘ಕಂಗುವ’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳು ಪ್ರದರ್ಶನಗೊಳ್ಳಲಿವೆ, ಮಾತ್ರವಲ್ಲದೆ ಅಲ್ಲಿ ಸಿನಿಮಾ ಟಿಕೆಟ್ ಬೆಲೆ ಹೆಚ್ಚಳಕ್ಕೆ ಅನುಮತಿಯೂ ದೊರೆತಿದೆ. ಆದರೆ ತಮಿಳುನಾಡಿನಲ್ಲಿಯೇ ‘ಕಂಗುವ’ ಸಿನಿಮಾಕ್ಕೆ ಹಿನ್ನೆಡೆ ಎದುರಾಗಿದೆ. ತಮಿಳುನಾಡಿನ ಸರ್ಕಾರದಿಂದ ದೊಡ್ಡ ಹಿನ್ನಡೆಯನ್ನು ‘ಕಂಗುವ’ ಸಿನಿಮಾ ಎದುರಿಸುತ್ತಿದೆ.
‘ಕಂಗುವ’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳ ಪ್ರದರ್ಶನಕ್ಕೆ ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿದೆ. ತಮಿಳುನಾಡಿನಲ್ಲಿ ‘ಕಂಗುವ’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳು ಪ್ರದರ್ಶನಗೊಳ್ಳುತ್ತಿಲ್ಲ. ಚೆನ್ನೈನಲ್ಲಿ ‘ಕಂಗುವ’ ಸಿನಿಮಾದ ಶೋಗಳು 9:30ಕ್ಕೆ ಆರಂಭ ಗೊಳ್ಳುತ್ತಿವೆ. ಚೆನ್ನೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಂಗುವ ಸಿನಿಮಾದ ಒಂದು ಶೋ ಹೆಚ್ಚುವರಿಯಾಗಿ ಪ್ರದರ್ಶನಗೊಳ್ಳಲಿದೆ. ಆಂಧ್ರ, ತೆಲಂಗಾಣದಲ್ಲಿಯೂ ಇದೇ ಪರಿಸ್ಥಿತಿ ಇದೆ. ತಮಿಳುನಾಡು ಸರ್ಕಾರ ತನ್ನದೇ ರಾಜ್ಯದ ಸಿನಿಮಾಕ್ಕೆ ಅನುಮತಿ ನಿರಾಕರಣೆ ಮಾಡಿದೆ.
ಇದನ್ನೂ ಓದಿ:‘ವೆಟ್ಟೈಯಾನ್’ ಜೊತೆ ಕ್ಲ್ಯಾಶ್ ತಪ್ಪಿಸಿಕೊಂಡ ‘ಕಂಗುವ’ ಚಿತ್ರಕ್ಕೆ ದೊಡ್ಡ ನಷ್ಟ; ಸಿಗುತ್ತಿಲ್ಲ ಥಿಯೇಟರ್
ತಮಿಳುನಾಡಿನಲ್ಲಿ ‘ಕಂಗುವ’ ಸಿನಿಮಾಕ್ಕೆ ಇನ್ನೊಂದು ಹಿನ್ನಡೆ ಉಂಟಾಗಿದೆ. ಎರಡು ವಾರದ ಹಿಂದೆ ಬಿಡುಗಡೆ ಆದ ತಮಿಳಿನ ‘ಅಮರನ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ‘ಕಂಗುವ’ ಸಿನಿಮಾಕ್ಕೆ ಹೆಚ್ಚಿನ ಚಿತ್ರಮಂದಿರಗಳು ಸಿಕ್ಕಿಲ್ಲ. ಚೆನ್ನೈ ಅಂಥಹಾ ಮಹಾನಗರದಲ್ಲಿ ಕಂಗುವ ಸಿನಿಮಾದ ತಮಿಳು ಆವೃತ್ತಿ ಕೇವಲ 14 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಂಗುವ ಸಿನಿಮಾದ ತಮಿಳು ಆವೃತ್ತಿಯ 2ಡಿಗೆ ಸಿಕ್ಕಿರುವ ಶೋಗಳ ಸಂಖ್ಯೆ ಕೇವಲ 108, 3ಡಿ ಆವೃತ್ತಿಗೆ ತುಸು ಹೆಚ್ಚು ಶೋಗಳು ದೊರೆತಿವೆ. ಎರಡು ವಾರದ ಹಿಂದೆ ಬಿಡುಗಡೆ ಆಗಿರುವ ‘ಅಮರನ್’ ಸಿನಿಮಾ ಇನ್ನೂ ಸಾಕಷ್ಟು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ. ಹಾಗಾಗಿ ‘ಕಂಗುವ’ ಸಿನಿಮಾಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ.
‘ಕಂಗುವ’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಸಿನಿಮಾದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದಾರೆ. ಕೆಲವು ಪ್ರತಿಭಾವಂತ ನಟರ ದಂಡು ಈ ಸಿನಿಮಾಕ್ಕಾಗಿ ಒಂದಾಗಿದೆ. ಸಿನಿಮಾದಲ್ಲಿ ಸೂರ್ಯ ಸಹೋದರ ಕಾರ್ತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಜ್ಞಾನವೇಲು ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ