
ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾಗಿರುವುದು ನೋವಿನ ಸಂಗತಿ. ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಗುರುವಾರ (ಸೆ.2) ಸಿದ್ದಾರ್ಥ್ ಕೊನೆಯುಸಿರೆಳೆದ ಬಳಿಕ ಇಡೀ ಚಿತ್ರೋದ್ಯಮಕ್ಕೆ ಶಾಕ್ ಆಯಿತು. ಕೋಟ್ಯಂತರ ಅಭಿಮಾನಿಗಳಿಗೆ ಈ ಕಹಿ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಎಲ್ಲರೂ ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಇದರ ನಡುವೆ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ತಮಿಳು ನಟ ಸಿದ್ದಾರ್ಥ್ ಅವರನ್ನು ಟಾರ್ಗೆಟ್ ಮಾಡಿಕೊಂಡು ದ್ವೇಷ ಕಾರುವ ಟ್ವೀಟ್ಗಳನ್ನು ಮಾಡುತ್ತಿದ್ದಾರೆ ಕೆಲವು ಕಿಡಿಗೇಡಿಗಳು. ಸಿದ್ದಾರ್ಥ್ ಅವರು ಅದನ್ನೆಲ್ಲ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.
ಒಂದೇ ಹೆಸರಿನ ನಟರು ಹಲವರು ಇದ್ದಾಗ ಜನರಿಗೆ ಗೊಂದಲ ಆಗುವುದು ಸಹಜ. ಹಿಂದಿ ನಟ ಸಿದ್ದಾರ್ಥ್ ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವವರು ಕಣ್ತಪ್ಪಿನಿಂದ ಕಾಲಿವುಡ್ ನಟ ಸಿದ್ದಾರ್ಥ್ ಅವರ ಫೋಟೋವನ್ನು ಅಪ್ಲೋಡ್ ಮಾಡಿಬಿಟ್ಟರೆ ಹೇಗೋ ಕ್ಷಮಿಸಬಹುದು. ಆದರೆ ಇದು ಕಣ್ತಪ್ಪಿನಿಂದ ಆದ ಪ್ರಮಾದ ಅಲ್ಲ. ಬೇಕಂತಲೇ ತಮಿಳಿನ ಸಿದ್ದಾರ್ಥ್ರ ಫೋಟೋವನ್ನು ಕೆಲವು ಕಿಡಿಗೇಡಿಗಳು ಅಪ್ಲೋಡ್ ಮಾಡುತ್ತಾ, ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಆ ಮೂಲಕ ತಮ್ಮ ಹೀನ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ.
ರಾಜಕೀಯದ ನಿಲುವುಗಳ ಕಾರಣಕ್ಕೆ ಸಿದ್ದಾರ್ಥ್ ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರದ ಕೆಲವು ವಿಚಾರಗಳನ್ನು ಅವರು ನೇರವಾಗಿ ಟೀಕಿಸುತ್ತಾರೆ. ಆ ಕಾರಣಕ್ಕಾಗಿ ಅವರನ್ನು ಈಗ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲವರಂತೂ ಮಿತಿಮೀರಿ ಕಮೆಂಟ್ ಮಾಡುತ್ತಿದ್ದಾರೆ. ‘ಆ ಸಿದ್ದಾರ್ಥ್ ಬದಲಿಗೆ ದೇವರು ಈ ಸಿದ್ದಾರ್ಥ್ಗೆ ಸಾವು ನೀಡಬಹುದಾಗಿತ್ತು’ ಎಂದು ನಿರ್ಲಜ್ಜೆಯಿಂದ ಕೆಲವರು ಕಮೆಂಟ್ ಮಾಡಿದ್ದಾರೆ!
ಇಂಥ ಕೆಲವು ಟ್ವೀಟ್ ಮತ್ತು ಕಮೆಂಟ್ಗಳನ್ನು ಸಿದ್ದಾರ್ಥ್ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ವಿಕೃತರ ಬಣ್ಣ ಬಯಲು ಮಾಡಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ಮುಂಬೈನಲ್ಲಿ ಸಿದ್ದಾರ್ಥ್ ಅಂತ್ಯಕ್ರಿಯೆ:
ಮುಂಬೈನ ಓಶಿವರ ಚಿತಾಗಾರದಲ್ಲಿ ಸಿದ್ದಾರ್ಥ್ ಶುಕ್ಲಾ ಅಂತ್ಯ ಸಂಸ್ಕಾರ ನೆರವೇರಿದೆ. ಬ್ರಹ್ಮಕುಮಾರಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಕೊವಿಡ್ ನಿಯಮಗಳನ್ನು ಸಂಪೂರ್ಣವಾಗಿ ಸಡಿಲ ಮಾಡಿಲ್ಲ. ಹೀಗಾಗಿ, ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಗಳು ನಡೆದಿವೆ. ಸಿದ್ಧಾರ್ಥ್ ಹೃದಯಾಘಾತದಿಂದ ಮೃತಪಟ್ಟಿದ್ದು ಖಚಿತವಾಗಿತ್ತು. ಇದರ ಮಧ್ಯೆ, ಅವರು ಔಷಧ ಸೇವಿಸಿದ್ದಾರೆ ಎಂಬಿತ್ಯಾದಿ ವಿಚಾರಗಳು ವೈರಲ್ ಆಗಿತ್ತು. ಈ ಕಾರಣಕ್ಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಆಸ್ಪತ್ರೆಯಿಂದ ಅವರ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ:
ಸಿದ್ದಾರ್ಥ್ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್ ಖಾನ್: ಶಾಕಿಂಗ್ ವಿಡಿಯೋ ವೈರಲ್
ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ