
ಸಿನಿಮಾ (Cinema) ನಟಿಯರು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ನಿಂದನೆ, ಟೀಕೆ, ಲೈಂಗಿಕ ಹಿಂಸೆ, ಬಾಡಿ ಶೇಮಿಂಗ್ಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ನೇರವಾಗಿಯೂ ಇಂಥಹಾ ಮುಜುಗರದ ಸನ್ನಿವೇಶಗಳು ಎದುರಾಗುವುದುಂಟು. ಇತ್ತೀಚೆಗಂತೂ ನಕಲಿ ಪತ್ರಕರ್ತರು, ಕೆಲ ಯೂಟ್ಯೂಬ್ ‘ಪತ್ರಕರ್ತರ’ ಹಾವಳಿ ಹೆಚ್ಚಾಗಿ ನಟಿಯರು ಹೆಚ್ಚಿನ ಮುಜುಗರ ಅನುಭವಿಸುವಂತಾಗಿದೆ. ಇದೀಗ ತಮಿಳಿನ ಜನಪ್ರಿಯ ನಟಿ ‘96’ ಸಿನಿಮಾನಲ್ಲಿಯೂ ನಟಿಸಿದ್ದ ಗೌರಿ ಕಿಶನ್ ಅವರು ಇಂಥಹುದೇ ಒಂದು ಮುಜುಗರದ ಸನ್ನಿವೇಶದಲ್ಲಿ ಸಿಲುಕಿದ್ದರು. ಆದರೆ ಧೈರ್ಯ ಪ್ರದರ್ಶಿಸಿ, ಬಾಡಿ ಶೇಮಿಂಗ್ ಮಾಡಲು ಮುಂದಾದವನಿಗೆ ಚಳಿ ಬಿಡಿಸಿದರು. ಇದೀಗ ನಟಿ ಗೌರಿಯ ಬೆಂಬಲಕ್ಕೆ ತಮಿಳು ಚಿತ್ರರಂಗ ನಿಂತಿದೆ.
ಗೌರಿ ಕಿಶನ್ ನಟನೆಯ ಹೊಸ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಪತ್ರಕರ್ತ’ನೊಬ್ಬ ‘ನಿಮ್ಮ ದೇಹದ ತೂಕ ಎಷ್ಟು?’ ಎಂದು ಕೇಳಿದ್ದಾನೆ. ಇದರಿಂದ ಸಿಟ್ಟಾದ ನಟಿ ಗೌರಿ ಕಿಶನ್, ‘ನನ್ನ ತೂಕ ಕಟ್ಟಿಕೊಂಡು ನಿಮಗೇನಾಗಬೇಕು?, ನೀವು ಸಿನಿಮಾ ಬಗ್ಗೆ ಪ್ರಶ್ನೆ ಕೇಳಿ’ ಎಂದಿದ್ದಾರೆ. ನಟಿಯ ಪ್ರತ್ಯುತ್ತರದಿಂದ ಸಿಟ್ಟಾದ ಆ ಪತ್ರಕರ್ತ ಬಳಿಕ ನಟಿಗೆ ಮಾತನಾಡಲು ಸಹ ಅವಕಾಶ ಕೊಡದಂತೆ ಒಂದೇ ಸಮನೆ ಜೋರು ಧ್ವನಿಯಲ್ಲಿ ಮಾತನಾಡಿ ನಟಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಅದಕ್ಕೆಲ್ಲ ಜಗ್ಗದ ನಟಿ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ನಟಿ ಗೌರಿ ಬೆಂಬಲಕ್ಕೆ ತಮಿಳು ಚಿತ್ರರಂಗದ ಹಲವರು ಧಾವಿಸಿದ್ದು, ಖ್ಯಾತ ನಿರ್ದೇಶಕ ಪಾ ರಂಜಿತ್, ಚಿನ್ಮಯಿ ಶ್ರೀಪಾದ್, ಖ್ಯಾತ ಸಂಗೀತ ನಿರ್ದೇಶಕ ಸಂತೋಶ್ ನಾರಾಯಣ್, ಹಿರಿಯ ನಟಿ, ರಾಜಕಾರಣಿ ಖುಷ್ಬು ಸುಂದರ್ ಇನ್ನೂ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಪತ್ರಕರ್ತರ ಉದ್ಧಟತನವನ್ನು ಖಂಡಿಸಿರುವ ಜೊತೆಗೆ ನಟಿ ಗೌರಿ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಅಲ್ಲದೆ, ಗೌರಿಯ ಜೊತೆಗೆ ತಾವು ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ತೂಕ ಕೇಳಿದ ವ್ಯಕ್ತಿಗೆ ಚಳಿ ಬಿಡಿಸಿದ ನಟಿ ಗೌರಿ ಕಿಶನ್: ಯಾರೀಕೆ?
ಘಟನೆ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನಟಿ ಗೌರಿ ಕಿಶನ್, ‘ಒಬ್ಬ ನಟಿಯಾಗಿದ್ದು, ಸಾರ್ವಜನಿಕ ಜೀವನದಲ್ಲಿ ಇರುವ ಕಾರಣಕ್ಕೆ ನನ್ನನ್ನು ಪ್ರಶ್ನೆ ಕೇಳುವ ಹಕ್ಕಿದೆ. ಆದರೆ ಆ ಪ್ರಶ್ನೆಗಳು ನನ್ನ ವೃತ್ತಿಯ ಬಗ್ಗೆ ಇರಲಿ ಎಂಬುದು ನನ್ನ ಆಶಯ’ ಎಂದಿರುವ ನಟಿ, ‘ಬಾಡಿ ಶೇಮಿಂಗ್ ಅನ್ನು ಸಾಮಾನ್ಯೀಕರಣ ಮಾಡಲಾಗುತ್ತಿದೆ. ಈ ನನ್ನ ಹೇಳಿಕೆ ಯಾವದೋ ಒಬ್ಬ ವ್ಯಕ್ತಿಯ ಕುರಿತಾಗಿ ಅಲ್ಲ ಬದಲಿಗೆ ಬಾಡಿ ಶೇಮಿಂಗ್ ಅನ್ನು ಸಾಮಾನ್ಯೀಕರಣಗೊಳಿಸಲು ಯತ್ನಿಸುತ್ತಿರುವ ಮನಸ್ಥಿತಿಗಳ ಬಗ್ಗೆ ಎಂದಿದ್ದಾರೆ.
ಮುಂದುವರೆದು, ತಮ್ಮ ನಿಲವಿಗೆ ಬೆಂಬಲ ವ್ಯಕ್ತಪಡಿಸಿರುವ ಚೆನ್ನೈ ಪ್ರೆಸ್ ಕ್ಲಬ್, ಮಲಯಾಳಂ ಚಿತ್ರರಂಗದ ಕಲಾವಿದರ ಸಂಘ, ದಕ್ಷಿಣ ಭಾರತದ ಕಲಾವಿದರ ಸಂಘ ಇನ್ನಿತರೆಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ