AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ?

EVM Invention: ಇವಿಎಂ ಅಥವಾ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್, ಚುನಾವಣಾ ಅಕ್ರಮಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಡಿಮೆ ಮಾಡಿದೆ, ವಾರಗಳ ಗಟ್ಟಲೆ ನಡೆಯುತ್ತಿದ್ದ ಮತದಾನ ಮತ್ತು ಮತ ಎಣಿಕೆಯನ್ನು ಗಂಟೆಗಳಿಗೆ ಇಳಿಸಿದೆ. ಚುನಾವಣಾ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆಯುವಂತೆ ಮಾಡಿದೆ ಇವಿಎಂ. ಈ ಇವಿಎಂಗೂ ‘ರೋಬೊ’ ಸಿನಿಮಾಕ್ಕೂ ಅಥವಾ ತಮಿಳು ಚಿತ್ರರಂಗಕ್ಕೂ ಸಂಬಂಧ ಇದೆ ಎಂಬುದು ಗೊತ್ತೆ?

‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ?
Robo Evm
ಮಂಜುನಾಥ ಸಿ.
|

Updated on: Apr 30, 2026 | 5:24 PM

Share

ಇವಿಎಂ ಅಥವಾ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಚುನಾವಣಾ ಅಕ್ರಮಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಡಿಮೆ ಮಾಡಿದೆ, ವಾರಗಳ ಗಟ್ಟಲೆ ನಡೆಯುತ್ತಿದ್ದ ಮತದಾನ ಮತ್ತು ಮತ ಎಣಿಕೆಯನ್ನು ಗಂಟೆಗಳಿಗೆ ಇಳಿಸಿದೆ. ಚುನಾವಣಾ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆಯುವಂತೆ ಮಾಡಿದೆ ಇವಿಎಂ. ಕೆಲವರು ಇವಿಎಂ ಹ್ಯಾಕಿಂಗ್ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರಾದರೂ ಯಾವುದೂ ಸಹ ಈ ವರೆಗೆ ಸಾಬೀತಾಗಿಲ್ಲ. ಆದರೆ ಈ ಇವಿಎಂಗೂ ‘ರೋಬೊ’ ಸಿನಿಮಾಕ್ಕೂ ಅಥವಾ ತಮಿಳು ಚಿತ್ರರಂಗಕ್ಕೂ ದೂರದ ಸಂಬಂಧ ಇದೆ.

ಇವಿಎಂ ಅನ್ನು ಐಐಟಿ ಬಾಂಬೆಯಲ್ಲಿ ಫ್ರೊಫೆಸರ್​​ಗಳಾಗಿದ್ದ ಎಜಿ ರಾವ್ ಮತ್ತು ರವಿ ಪೂವಯ್ಯ ಡಿಸೈನ್ ಮಾಡಿದರು. ಅದಕ್ಕೆ ಒಪ್ಪಿಗೆ ನೀಡಿದ ಸರ್ಕಾರ ಮತ್ತು ಚುನಾವಣಾ ಆಯೋಗ 1980 ರಲ್ಲಿ ಇವಿಎಂಗಳನ್ನು ನಿರ್ಮಾಣ ಮಾಡುವ ಹೊಣೆಯನ್ನು ಬೆಂಗಳೂರಿನಲ್ಲಿ ಸ್ಥಿತವಾಗಿರುವ ಬಿಇಎಲ್​​ಗೆ (ಭಾರತ್ ಎಲೆಕ್ಟ್ರಾನಿಕ್ಸ್​) ನೀಡಿತು. ಎಂಜಿನಿಯರ್ ಎಸ್ ರಂಗರಾಜನ್ ಅವರ ನೇತೃತ್ವದಲ್ಲಿ ಇವಿಎಂ ನಿರ್ಮಾಣ ಆಯ್ತು, ಮಾತ್ರವಲ್ಲದೆ ಅವರದ್ದೇ ನೇತೃತ್ವದಲ್ಲಿ ಇವಿಎಂ ಮಾಡೆಲ್ ಹೆಚ್ಚು ಸುಧಾರಣೆಯಾಗಿ ಬಳಕೆಗೂ ಬಂದಿತು.

ಸರಿ, ‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಏನು ಸಂಬಂಧ? ಎಸ್ ರಂಗರಾಜನ್ ನೇತೃತ್ವದಲ್ಲಿ ಭಾರತದಲ್ಲಿ ಇವಿಎಂ ನಿರ್ಮಾಣ ಆಯ್ತು, ಈ ಎಸ್ ರಂಗರಾಜನ್ ಅವರಿಗೆ ಮತ್ತೊಂದು ಹೆಸರು ಇದೆ. ಅದುವೇ ‘ಸುಜಾತ’. ಸಿನಿಮಾ ಪ್ರೇಮಿಗಳಿಗೆ ಈಗಾಗಲೇ ಗೊತ್ತಾಗಿರುತ್ತದೆ ಈ ‘ಸುಜಾತ’ ಯಾರೆಂಬುದು. ತಮಿಳಿನ ಖ್ಯಾತ ಕಾದಂಬರಿಕಾರ, ಕತೆಗಾರ ಮತ್ತು ಸಂಭಾಷಣೆಕಾರ ಇವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಎಸ್ ರಂಗರಾಜನ್ ಅವರು ‘ಸುಜಾತ’ ಕಾವ್ಯನಾಮದಲ್ಲಿ ಕತೆ, ಕಾದಂಬರಿ, ಸಿನಿಮಾ ಕತೆ, ಸಂಭಾಷಣೆ, ಹಾಡುಗಳನ್ನು ಬರೆಯುತ್ತಿದ್ದರು. ತಮಿಳಿನ ಹಲವಾರು ಸೂಪರ್ ಹಿಟ್ ಸಿನಿಮಾಗಳ ಹಿಂದೆ ಅವರ ಪ್ರತಿಭೆ ಇದೆ.

ಇದನ್ನೂ ಓದಿ:‘ಕೆಡಿ’ ಸಿನಿಮಾ ನೋಡಿ ಜನ ಹೇಳಿದ್ದೇನು? ವಿಡಿಯೋ ನೋಡಿ

ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾಕ್ಕೆ ಸಂಭಾಷಣೆ ಮತ್ತು ಚಿತ್ರಕತೆಯನ್ನು ಸಹಾಯ ಮಾಡಿದ್ದರು. ರಾಜಮೌಳಿಗೆ ಮುಂಚೆ ಭಾರತದ ಸ್ಟಾರ್ ನಿರ್ದೇಶಕ ಆಗಿದ್ದ ಶಂಕರ್ ಅವರ ಹಲವಾರು ಸಿನಿಮಾಗಳಿಗೆ ಬೆನ್ನೆಲುಬಾಗಿದ್ದಿದ್ದು ಇದೇ ಸುಜಾತ. ‘ಇಂಡಿಯನ್’ ‘ಬಾಯ್ಸ್’, ‘ಶಿವಾಜಿ’, ‘ಮೊದಲ್ವನ್’, ‘ಅನ್ನಿಯನ್’, ‘ರೋಬೊ’ ಶಂಕರ್ ಅವರ ಇನ್ನೂ ಕೆಲವು ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆ ಬರೆದಿದ್ದು ಇದೇ ಸುಜಾತ. ಸುಜಾತ ಹೋದ ಬಳಿಕ ಶಂಕರ್ ಸಿನಿಮಾಗಳಲ್ಲಿ ಮೊದಲಿನ ಮೊನಚು ಉಳಿಯಲಿಲ್ಲ. ಮಣಿರತ್ನಂ ಅವರ ‘ರೋಜಾ’, ‘ತಿರುಡಾ ತಿರುಡಾ’, ಶಾರುಖ್ ನಟಿಸಿ ಮಣಿರತ್ನಂ ನಿರ್ದೇಶಿಸಿದ್ದ ‘ದಿಲ್ ಸೇ’ ಸಿನಿಮಾದ ತಮಿಳು ಆವೃತ್ತಿ ‘ಉಯಿರೆ’, ‘ಕಣ್ಣತ್ತಿ ಮುತ್ತಮಿತ್ತಾಳ್’, ‘ಯುವ’ ಮಣಿರತ್ನಂ ಅವರ ಇನ್ನೂ ಕೆಲ ಸಿನಿಮಾಗಳಿಗೆ ಸುಜಾತ ಸಂಭಾಷಣೆ ಮತ್ತು ಚಿತ್ರಕತೆಯನ್ನು ಒದಗಿಸಿದ್ದಾರೆ.

Sujatha

Sujatha

ತಮಿಳು ಮಾತ್ರವಲ್ಲ ಕನ್ನಡ ಚಿತ್ರರಂಗದಲ್ಲಿಯೂ ಸುಜಾತ ಕೆಲಸ ಮಾಡಿದ್ದಾರೆ. ರಮೇಶ್ ಅರವಿಂದ್ ಅಭಿನಯದ ಭಿನ್ನ ರೀತಿಯ ಥ್ರಿಲ್ಲರ್ ಕತೆಯುಳ್ಳ ‘ಆರ್ಯಭಟ’ ಯಾರಿಗೆಲ್ಲ ನೆನಪಿದೆ, ಆ ಸಿನಿಮಾದ ಕತೆ ಬರೆದಿದ್ದು ಸುಜಾತ. 1981 ರಲ್ಲಿ ಬಿಡುಗಡೆ ಆದ ‘ಒಂಟಿ ಧ್ವನಿ’ ಸಿನಿಮಾಕ್ಕೂ ಸುಜಾತ ಅವರದ್ದೇ ಕತೆ. ಸುಜಾತ ಅವರು ಕೊನೆಯದಾಗಿ ಕೆಲಸ ಮಾಡಿದ ಸಿನಿಮಾ ‘ರೋಬೊ’ ಅಥವಾ ‘ಎಂದಿರನ್’ ಸುಜಾತ 2008 ರಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅದಕ್ಕೆ ಮುಂಚೆಯೇ ಅವರು ‘ಎಂದಿರನ್’ ಕತೆ ಬರೆದಿದ್ದರು. ಅವರ ನಿಧನದ ಒಂದೂವರೆ ವರ್ಷದ ಬಳಿಕ ‘ರೋಬೊ’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ಚಿತ್ರರಂಗಕ್ಕೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಒದಗಿಸಿರುವ ವ್ಯಕ್ತಿ, ಭಾರತದ ಚುನಾವಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದವರಲ್ಲಿ ಒಬ್ಬರು ಎಂಬುದು ಆಶ್ಚರ್ಯಕರ ಅಲ್ಲವೆ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us