ತಮಿಳು ಚಿತ್ರರಂಗದ (Kollywood) ಜನಪ್ರಿಯ ನಟ ಸಿಂಭು ಹೆಸರು ಆಗಾಗ್ಗೆ ಯಾವುದಾದರೂ ವಿವಾದಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಸಿಂಭು ವಿರುದ್ಧ ನಿರ್ಮಾಪಕರೊಬ್ಬರು ದೂರು ನೀಡಿದ್ದು, ಈ ಕೂಡಲೇ ನಟ ಸಿಂಭು ಅನ್ನು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಸಿಂಭು, ಪ್ರಸ್ತುತ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದ ‘ಮಫ್ತಿ’ ಸಿನಿಮಾದ ರೀಮೇಕ್ ‘ಪತ್ತು ತಲ’ ಸಿನಿಮಾದಲ್ಲಿ ಸಿಂಭು ನಟಿಸಿದ್ದರು. ಅದಕ್ಕೂ ಮುನ್ನ ‘ವೆಂದು ತನಿದಿತ್ತು ಕಾಡು’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ‘ಕೊರೊನಾ ಕಿಂಗ್’ ಹೆಸರಿನ ಸಿನಿಮಾನಲ್ಲಿ ಸಿಂಭು ನಟಿಸಬೇಕಿತ್ತು. ‘ಕೊರೊನಾ ಕಿಂಗ್’ ಸಿನಿಮಾವನ್ನು ಗೋಕುಲ್ ಎನ್ ಕೃಷ್ಣ ನಿರ್ದೇಶನ ಮಾಡಿ, ಇಶಾರಿ ಕೆ ಗಣೇಶ್ ನಿರ್ಮಾಣ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಸಿಂಭು ಹೊರ ಬಂದರು.
ಇದನ್ನೂ ಓದಿ:ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ
ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ‘ಕೊರೊನಾ ಕಿಂಗ್’ ಸಿನಿಮಾದಿಂದ ಸಿಂಭು ಹೊರಬಂದರು. ಬಳಿಕ ‘ಪತ್ತು ತಲ’ ಸಿನಿಮಾ ಪ್ರಾರಂಭಿಸಿದರು. ಆದರೆ ಈಗ ‘ಕೊರೊನಾ ಕಿಂಗ್’ ನಿರ್ಮಾಪಕ ಇಶಾರಿ ಕೆ ಗಣೇಶ್ ಸಿಂಭು ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಸಿಂಭು ಶೂಟಿಂಗ್ ಪ್ರಾರಂಭವಾಗುವ ಮುನ್ನವೇ ನಮ್ಮಿಂದ ಅಡ್ವಾನ್ಸ್ ಪಡೆದು ಬಳಿಕ ಸಿನಿಮಾದಿಂದ ಹೊರಗೆ ಹೋಗಿದ್ದಾರೆ. ಅವರನ್ನು ಈ ಕೂಡಲೇ ತಮಿಳು ಚಿತ್ರರಂಗದಿಂದ ಉಚ್ಛಾಟನೆ ಮಾಡಬೇಕು. ಈಗ ನಟಿಸುತ್ತಿರುವ ಸಿನಿಮಾ ಸೇರಿದಂತೆ ಇನ್ಯಾವ ಸಿನಿಮಾದಲ್ಲಿಯೂ ನಟಿಸಲು ಅವಕಾಶ ಮಾಡಿಕೊಡಬಾರದು ಎಂದಿದ್ದಾರೆ.
ಸಿಲಂಬರಸನ್ ಅಲಿಯಾಸ್ ಸಿಂಭುಗೆ ಇದೆಲ್ಲ ಹೊಸದಲ್ಲ. ಸಿನಿಮಾ ಶೂಟಿಂಗ್ ವಿಚಾರವಾಗಿ ಸಿಂಭು ಅಶಿಸ್ತು ತೋರಿಸಿದ ಹಲವು ಆರೋಪಗಳು ಅವರ ಮೇಲೆ ಈಗಾಗಲೇ ಇವೆ. ನಿರ್ದೇಶಕ ಕೆಲಸದಲ್ಲಿ ಮೂಗು ತೂರಿಸುವುದು, ಶೂಟಿಂಗ್ ಸೆಟ್ನಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವುದು. ನಿರ್ಮಾಪಕರ ಜೊತೆಗೆ ಹಣ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೀಗೆ ಹಲವು ವಿವಾದಗಳನ್ನು ಸಿಂಭು ಈ ಹಿಂದೆಯೂ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಸಹ ಸಿಂಭು ವಿರುದ್ಧ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳಿಗೆ ದೂರು ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Sun, 12 May 24