
ತೇಜ್ ಸಜ್ಜಾ ಎಂದರೆ ಹೆಚ್ಚು ಜನರಿಗೆ ಗೊತ್ತಾಗಲಿಕ್ಕಿಲ್ಲ, ಆದರೆ ತೆಲುಗಿನ ‘ಹನುಮಾನ್’ ಸಿನಿಮಾದ ನಾಯಕ ಎಂದರೆ ತಿಳಿಯದ ಸಿನಿಮಾ ಪ್ರೇಮಿಗಳು ಕಡಿಮೆ. ಸೂಪರ್ ಹೀರೋ ಸಿನಿಮಾ ಮೂಲಕ ಭಾರಿ ಹಿಟ್ ಕೊಟ್ಟಿರುವ ಯುವ ನಟ ತೇಜ್ ಸಜ್ಜಾ ಇದೀಗ ‘ಮಿರೈ’ ಹೆಸರಿನ ಮತ್ತೊಂದು ಸೂಪರ್ ಹೀರೋ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಮತ್ತೊಂದು ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ನಿನ್ನೆ (ಆಗಸ್ಟ್ 23) ನಟ ತೇಜ್ ಸಜ್ಜಾ ಅವರ ಹುಟ್ಟುಹಬ್ಬ ಇತ್ತು. ವಿಶೇಷ ದಿನದಂದು ತೇಜ್ ಸಜ್ಜಾ ಅವರ ಮುಂದಿನ ಸಿನಿಮಾ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ತೇಜ್ ಸಜ್ಜಾ ಅವರ ಹೊಸ ಸಿನಿಮಾ ನಿರ್ಮಾಣ ಮಾಡಲಿದೆ. ‘ಮಿರೈ’ ಸಿನಿಮಾ ಅನ್ನೂ ಸಹ ಇದೇ ಪೀಪಲ್ ಮೀಡಿಯಾ ಫ್ಯಾಕ್ಟರಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈಗ ತೇಜ್ ಸಜ್ಜಾ ಜೊತೆಗೆ ಮತ್ತೊಂದು ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರತಿಭಟನೆ ಅಂತ್ಯ, ಮತ್ತೆ ಶುರುವಾದ ಶೂಟಿಂಗ್, ಟಾಲಿವುಡ್ ನಿರಾಳ
ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು ಕುತೂಹಲ ಹುಟ್ಟಿಸುತ್ತಿದೆ. ವಿಡಿಯೋ ಗೇಮ್ ಆಡಲು ಬಳಸುವ ಕಂಟ್ರೋಲರ್ ಅನ್ನು ಅನ್ನು ಕೈ ಒಂದು ಹಿಡಿದಿದೆ. ದೆವ್ವದ ಕೈ ರೀತಿ ಚೂಪಾದ ಉಗುರುಗಳು ಆ ಕೈಗೆ ಇದೆ. ಇದು ಹಾರರ್ ಸಿನಿಮಾ ಎಂಬ ಸುಳಿವು ಪೋಸ್ಟರ್ ಇಂದ ಸಿಗುತ್ತಿದೆ. ಆದರೆ ಕೈಯಲ್ಲಿರುವ ಗೇಮ್ ಕಂಟ್ರೋಲರ್ ಕತೆಯ ಬಗ್ಗೆ ಕುತೂಹಲ ಮೂಡುವಂತೆ ಮಾಡುತ್ತಿದೆ. ಪೋಸ್ಟರ್ ಮೇಲೆ ‘ಎಕ್ಸ್ 2’ ಎಂದಿದೆ. ಇದೇನು ಸಿನಿಮಾದ ಹೆಸರೊ ಏನೋ ಎಂಬ ಬಗ್ಗೆ ಖಾತ್ರಿ ಇಲ್ಲ.
ಪೋಸ್ಟರ್‌ನಲ್ಲಿ “ರಾಯಲಸೀಮೆಯಿಂದ ಪ್ರಪಂಚದ ಕೊನೆಯವರೆಗೂ” ಎಂಬ ಕ್ಯಾಪ್ಷನ್ ಇದ್ದು, ಪ್ರಾದೇಶಿಕ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಈ ಸಿನಿಮಾದ ನಿರ್ದೇಶಕರು ಯಾರು, ತಾಂತ್ರಿಕ ಬಳಗದ ಜತೆಗೆ ತಾರಾಗಣದ ಮಾಹಿತಿಯೂ ಮುಂದಿನ ದಿನಗಳಲ್ಲಿ ಸಿಗಲಿದೆ. ಸದ್ಯ ಈ ಪೋಸ್ಟರ್ ಹಾಗೂ ಕುತೂಹಲ ಕೆರಳಿಸುವ ಅಡಿಬರಹ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಪ್ಯಾನ್-ಇಂಡಿಯಾ ಚಿತ್ರವನ್ನು 2027ರ ಸಂಕ್ರಾಂತಿಯಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.
ತೇಜ್ ಸಜ್ಜಾ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ, ಅಲ್ಲು ಅರ್ಜುನ್, ವೆಂಕಟೇಶ್, ಮಹೇಶ್ ಬಾಬು, ಪ್ರಭಾಸ್ ಇನ್ನೂ ಹಲವು ಸ್ಟಾರ್ ನಟರ ಸೂಪರ್ ಹಿಟ್ ಸಿನಿಮಾಗಳಲ್ಲಿ ತೇಜ್ ಸಜ್ಜಾ ಬಾಲನಟನಾಗಿ ನಟಿಸಿದ್ದರು. ಸಮಂತಾ ನಟನೆಯ ‘ಓಹ್ ಬೇಬಿ’ ಸಿನಿಮಾ ಮೂಲಕ ನಾಯಕನಾದರು. ಆ ಬಳಿಕ ‘ಜಾಂಬಿ ರೆಡ್ಡಿ’, ‘ಇಷ್ಕ್’, ‘ಅದ್ಭುತಂ’ ಸಿನಿಮಾಗಳಲ್ಲಿ ನಟಿಸಿದರು. ಆದರೆ ಹಿಟ್ ದೊರೆತಿದ್ದು ‘ಹನುಮಾನ್’ ಸಿನಿಮಾ ಮೂಲಕ. ಈಗ ಸೂಪರ್ ಹೀರೋ ಸಿನಿಮಾಗಳ ಬೆನ್ನತ್ತಿದ್ದಾರೆ ತೇಜ್ ಸಜ್ಜಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ