ಚಿತ್ರಮಂದಿರದಲ್ಲಿ ಭಾರಿ ಮೆಚ್ಚುಗೆ ಗಳಿಸಿದ ‘12th ಫೇಲ್’ ಸಿನಿಮಾ (12th Fail Movie) ಈಗ ಟಿವಿಯಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. 2023ರ ಅಕ್ಟೋಬರ್ 27ರಂದು ಥಿಯೇಟರ್ನಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ದಿನದಿಂದ ದಿನಕ್ಕೆ ಬಾಯಿ ಮಾತಿನ ಪ್ರಚಾರ ಪಡೆದ ಈ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದರು. ನಂತರ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಾಗಿ ಸೂಪರ್ ಹಿಟ್ ಆಯಿತು. ಈಗ ‘12th ಫೇಲ್’ ಸಿನಿಮಾ ಕಿರುತೆರೆಯಲ್ಲಿ ಬಿತ್ತರವಾಗುವ (12th Fail Television premiere) ಕಾಲ ಬಂದಿದೆ. ಸಿನಿಮಾದ ಟಿಲಿವಿಷನ್ ಪ್ರೀಮಿಯರ್ ಬಗ್ಗೆ ನಟ ವಿಕ್ರಾಂತ್ ಮಾಸಿ (Vikrant Massey) ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬಡ ಕುಟುಂಬದ ಹುಡುಗನೊಬ್ಬ ಐಪಿಎಸ್ ಅಧಿಕಾರಿ ಆಗುವ ಹಂತಕ್ಕೆ ಬೆಳೆದ ನಿಜವಾದ ಘಟನೆಯನ್ನು ಆಧರಿಸಿ ‘12th ಫೇಲ್’ ಸಿನಿಮಾ ಮೂಡಿಬಂದಿದೆ. ವಿಧು ವಿನೋದ್ ಚೋಪ್ರಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್ ಮಾಸ್ಸಿ, ಮೇಧಾ ಶಂಕರ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಟಿವಿಯಲ್ಲಿ ವೀಕ್ಷಿಸಬಹುದು.
‘12th ಫೇಲ್’ ಚಿತ್ರದಿಂದ ಹೆಚ್ಚಿತು ವಿಕ್ರಾಂತ್ ಮಾಸ್ಸಿ ಜನಪ್ರಿಯತೆ
‘ಇದೇ ಮೊದಲ ಬಾರಿಗೆ ಮನೋಜ್ ಪಾತ್ರದಲ್ಲಿ ನಾನು ನಿಮ್ಮ ಟಿವಿ ಪರದೆಗೆ ಬರುತ್ತಿದ್ದೇನೆ’ ಎಂದು ವಿಕ್ರಾಂತ್ ಮಾಸ್ಸಿ ಅವರು ಪೋಸ್ಟ್ ಮಾಡಿದ್ದಾರೆ. ಫೆಬ್ರವರಿ 29ರಂದು ಗುರುವಾರ ರಾತ್ರಿ 8 ಗಂಟೆಗೆ ‘ಸೋನಿ ಮ್ಯಾಕ್ಸ್’ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾಗೆ ಈಗ ಟಿವಿಯಲ್ಲೂ ಭರ್ಜರಿ ಟಿಆರ್ಪಿ ಸಿಗುವ ನಿರೀಕ್ಷೆ ಇದೆ. ಬಾಕ್ಸ್ ಆಫೀಸ್ನಲ್ಲಿ ‘12th ಫೇಲ್’ ಸಿನಿಮಾ 56.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಕ್ರಾಂತ್ ಮಾಸ್ಸಿ ಅವರು ಹಂಚಿಕೊಂಡಿರುವ ಪೋಸ್ಟ್ ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ನಾವು ಈ ಸಿನಿಮಾ ನೋಡಲು ಕಾದಿದ್ದೇವೆ’ ಎಂದು ಕಾತರ ವ್ಯಕ್ತಪಡಿಸಿದ್ದಾರೆ. 69ನೇ ಫಿಲ್ಮ್ ಫೇರ್ ಅವಾರ್ಡ್ಸ್ನಲ್ಲಿ ಈ ಸಿನಿಮಾ 5 ಪ್ರಶಸ್ತಿಗಳನ್ನು ಗೆದ್ದಿದೆ. ವಿಕ್ರಾಂತ್ ಮಾಸ್ಸಿ ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ಸಿನಿಮಾವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘12th ಫೇಲ್’ ಸಿನಿಮಾದ ಗೆಲುವಿನ ಬಳಿಕ ವಿಕ್ರಾಂತ್ ಮಾಸ್ಸಿ ಅವರು ಸ್ಟಾರ್ ಆಗಿದ್ದಾರೆ. ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗ ಅವರು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.