ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಮಹಿಳೆಯರ ವೈಯಕ್ತಿಕ ಮಾಹಿತಿ ಹಾಗೂ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಕಾರಣ, ಡಿಜಿಟಲ್ ಯುಗದಲ್ಲಿ ಮಹಿಳೆಯರ ಮಾನಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆ ಖ್ಯಾತ ನಟಿಯರೂ ಹೊರತಾಗಿಲ್ಲ. ಖ್ಯಾತ ತಾರೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೀಳಾಗಿ ಟ್ರೋಲ್ ಮಾಡುವುದು, ಅವರಿಗೆ ಮಾನಸಿಕ ಹಿಂಸೆ ನೀಡುವುದು ಮೊದಲಾದವುಗಳು ಕೂಡ ಸೈಬರ್ ಹಿಂಸೆಯ ಅಡಿಯಲ್ಲಿಯೇ ಬರುತ್ತವೆ. ಇದರ ವಿರುದ್ಧ ಹಲವು ತಾರೆಯರು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದಾರೆ. ಇದೀಗ ಖ್ಯಾತ ಕಿರುತೆರೆ ನಟಿಯೋರ್ವರು ಸೈಬರ್ ಹಿಂಸೆಯ (Cyber Bullying) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ತಮಗಾದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದಿ ಕಿರುತೆರೆಯಲ್ಲಿ ವಿಭೂತಿ ಠಾಕೂರ್ ದೊಡ್ಡ ಹೆಸರು. ‘ತೇರಾ ಯಾರ್ ಹೂನ್ ಮೇನ್’ ಸೇರಿದಂತೆ ಹಲವು ಹಿಟ್ ಧಾರವಾಹಿಗಳಲ್ಲಿ ನಟಿಸಿರುವ ಈ ನಟಿಯ ವೈಯಕ್ತಿಯ ಫೋನ್ ನಂಬರ್ ಅನ್ನು ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಇದರಿಂದಾಗುತ್ತಿರುವ ಅನಾಹುತಗಳ ಬಗ್ಗೆ ನಟಿ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂನ ಖಾತೆಯೊಂದರಲ್ಲಿ ಪೋಸ್ಟ್ ಒಂದರಲ್ಲಿ ವಿಭೂತಿ ಠಾಕೂರ್ ಅವರ ಫೋನ್ ನಂಬರ್ ಅನ್ನು ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ. ಇದರಿಂದಾಗಿ ನಟಿಗೆ ಕರೆಗಳು ಬರಲು ಆರಂಭವಾಗಿವೆ. ಅಲ್ಲದೇ ಕರೆಮಾಡಿದವರು ನಟಿಗೆ ಅಶ್ಲೀಲ ಮಾತುಗಳನ್ನು ಹಾಗೂ ಬೇಡಿಕೆಗಳನ್ನು ಇಡಲು ಆರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಭೂತಿ ಬರೆದುಕೊಂಡಿದ್ದಾರೆ.
ತಮ್ಮ ನಂಬರ್ ಲೀಕ್ ಮಾಡಿದ ಇನ್ಸ್ಟಾಗ್ರಾಂ ಖಾತೆಯ ಪೋಟೋವನ್ನೂ ನಟಿ ಹಂಚಿಕೊಂಡಿದ್ದಾರೆ. ‘ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೋರ್ವರ ಮಾನಸಿಕ ಶಾಂತಿಗೆ ಮತ್ತೊಬ್ಬರು ಭಂಗ ತರಲು ಏಕೆ ಮುಂದಾಗುತ್ತಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಅವರಿಗೆ ನಾಚಿಕೆಯಾಗಬೇಕು. ಮಹಿಳೆಯೋರ್ವರಿಗೆ ಹೀಗೆ ತೊಂದರೆ ನೀಡುವುದು ಕಾನೂನಿನ ಪ್ರಕಾರ ಹಿಂಸೆಯೆಂದು ಪರಿಗಣಿಸಲಾಗುತ್ತದೆ’ ಎಂದಿದ್ದಾರೆ ವಿಭೂತಿ.
‘ನಂಬರ್ ಲೀಕ್ ಮಾಡಿದವರ ವಿರುದ್ಧ ಹಾಗೂ ಮೆಸೇಜ್ ಕಳುಹಿಸಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದೇನೆ. ನನ್ನ ಸ್ನೇಹಿತರು, ಕುಟುಂಬದವರು ಹಾಗೂ ಅಭಿಮಾನಿಗಳು ಈ ಕೆಲಸ ಮಾಡಿದ ಖಾತೆಯನ್ನು ರಿಪೋರ್ಟ್ ಮಾಡಿ’ ಎಂದು ಬರೆದಿರುವ ವಿಭೂತಿ ಆ ಕಿಡಿಗೇಡಿ ಪೇಜ್ನ ಚಿತ್ರ ಹಂಚಿಕೊಂಡಿದ್ದಾರೆ.
ವಿಭೂತಿ ಠಾಕೂರ್ ಹಂಚಿಕೊಂಡ ಪೋಸ್ಟ್:
ಇದುವರೆಗೆ ಇಂತಹ ಸ್ಥಿತಿ ತಮಗೆ ಬಂದಿರಲಿಲ್ಲ ಎಂದು ನೋವು ತೋಡಿಕೊಂಡಿರುವ ವಿಭೂತಿ ಠಾಕೂರ್, ಇದರ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ. ಅವರಿಗೆ ಸ್ನೇಹಿತರು ಹಾಗೂ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: Hrithik Roshan: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್