ಹಿಂದಿ ಬಿಗ್ ಬಾಸ್ 11ನೇ (Bigg Boss Hindi 11) ಸೀಸನ್ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡವರು ಸಪ್ನಾ ಚೌಧರಿ (Sapna Choudhary). ಇವರು ಗಾಯನ ಹಾಗೂ ನೃತ್ಯದಲ್ಲಿ ಪಳಗಿದ್ದಾರೆ. ಈಗ ಅವರು ಸಮಸ್ಯೆ ಒಂದರಲ್ಲಿ ಸಿಲುಕಿದ್ದಾರೆ. ಮೂರು ವರ್ಷದ ಹಿಂದಿನ ಕೇಸ್ನಲ್ಲಿ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಆಗಿದೆ. ಹೀಗಾಗಿ, ಅವರಿಗೆ ಬಂಧನ ಭೀತಿ ಎದುರಾಗಿದೆ. ಲಖನೌನ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅವರನ್ನು ಬಂಧಿಸಿ ತರುವಂತೆ ನ್ಯಾಯಾಧೀಶರು ಹೇಳಿದ್ದಾರೆ. ಹಾಗಾದರೆ ಏನು ಈ ಪ್ರಕರಣ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೂರು ವರ್ಷದ ಹಿಂದಿನ ಘಟನೆ. 2018ರ ಅಕ್ಟೋಬರ್ 13ರದು ಸಪ್ನಾ ಅವರು ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಈ ಕಾರ್ಯಕ್ರಮಕ್ಕೆ 300 ರೂಪಾಯಿ ಟಿಕೆಟ್ ಫಿಕ್ಸ್ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 10 ಗಂಟೆ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಸಪ್ನಾ ಡ್ಯಾನ್ಸ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅನೇಕರು ಆಗಮಿಸಿದ್ದರು. ಆದರೆ, ಅವರು ವೇದಿಕೆ ಏರಲೇ ಇಲ್ಲ. ಈ ಕಾರಣಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದು ಗಲಾಟೆ ಮಾಡಿದ್ದರು. ಅಲ್ಲದೆ, ಟಿಕೆಟ್ ಹಣವನ್ನು ಹಿಂದಿರುಗಿಸುವಂತೆ ಅಭಿಮಾನಿಗಳು ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಆಯೋಜಕರಾದ ಜುನಾಯಿದ್ ಅಹ್ಮದ್, ನವೀನ್ ಶರ್ಮಾ, ಇವಾದ್ ಅಲಿ, ಅಮಿತ್ ಪಾಂಡೆ, ರತ್ನಾಕರ್ ಉಪಾಧ್ಯಾಯ್ ಹಾಗೂ ಸಪ್ನಾ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಪ್ನಾ ಅವರು ಪ್ರಕರಣವನ್ನು ಖುಲಾಸೆ ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್ ಇದನ್ನು ನಿರಾಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 22ಕ್ಕೆ ನಡೆಯಲಿದೆ.
ಸಪ್ನಾ ಹರಿಯಾಣ ಮೂಲದವರು. ಅವರು ವೃತ್ತಿಯಲ್ಲಿ ಡ್ಯಾನ್ಸರ್ ಹಾಗೂ ನಟಿ. ಬಿಗ್ ಬಾಸ್ 11ರ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಈಗ ಅವರಿಗೆ ಬಂಧನ ಭೀತಿ ಎದುರಾಗಿದೆ. ನವೆಂಬರ್ 22ರಂದು ಸಪ್ನಾ ಕೋರ್ಟ್ ಮುಂದೆ ಹಾಜರಾಗುತ್ತಾರಾ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಚಾಕು ಹಿಡಿದು ಹತ್ಯೆ ಮಾಡಿಕೊಳ್ಳಲು ಮುಂದಾದ ಸ್ಪರ್ಧಿ; ವಾಹಿನಿಯಿಂದ ಮಹತ್ವದ ನಿರ್ಧಾರ