ಬಿಗ್ ಬಾಸ್ ಮನೆಯಲ್ಲಿ ಜಗಳವನ್ನೇ ಕಾಯಕ ಮಾಡಿಕೊಂಡ ಅಶ್ವಿನಿ ಗೌಡ

ಜಂಟಿಗಳ ಗುಂಪಿನಲ್ಲಿ ಇರುವ ಕಾವ್ಯ ಶೈವ ಮತ್ತು ಗಿಲ್ಲಿ ನಟ ಅವರನ್ನು ಅಶ್ವಿನಿ ಗೌಡ ಟಾರ್ಗೆಟ್ ಮಾಡಿದಂತಿದೆ. ಕಾವ್ಯಾ ಮತ್ತು ಗಿಲ್ಲಿ ನಟನ ಪ್ರತಿ ಚಲನವಲನವನ್ನು ಅಶ್ವಿನಿ ಗೌಡ ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಗಿಲ್ಲಿಯ ನಡೆ-ನುಡಿಯಲ್ಲಿ ಸ್ವಲ್ಪ ತಪ್ಪು ಕಾಣಿಸಿದರೂ ಖಂಡಿಸುತ್ತಿದ್ದಾರೆ. ಇದರಿಂದಾಗಿ ಜಗಳ ನಡೆಯುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಜಗಳವನ್ನೇ ಕಾಯಕ ಮಾಡಿಕೊಂಡ ಅಶ್ವಿನಿ ಗೌಡ
Ashwini Gowda

Updated on: Oct 02, 2025 | 10:41 PM

ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ಜಗಳದ ಮೂಲಕ ಸೌಂಡು ಮಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಆರಂಭ ಆದಾಗಿನಿಂದ ಅವರು ಏರು ಧ್ವನಿಯಲ್ಲೇ ಮಾತನಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ನಟ (Gilli Nata) ಹಾಗೂ ಕಾವ್ಯ ಶೈವ ಅವರನ್ನು ಅಶ್ವಿನಿ ಗೌಡ ಆಗಾಗ ಕೆಣಕುತ್ತಾರೆ. ಇದರಿಂದ ಗಿಲ್ಲಿಗೆ ಸಂಕಟ ಆಗಿದೆ. ಹೋದಲ್ಲಿ ಬಂದಲ್ಲಿ ಗಿಲ್ಲಿಗೆ ಅಶ್ವಿನಿ ಗೌಡ ಕಾಟ ತಡೆಯಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಬಿಗ್​ ಬಾಸ್ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿದೆ.

ಒಂಟಿಗಳು ಮತ್ತು ಜಂಟಿಗಳು ಎಂಬ ಥೀಮ್​​ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಿದೆ. ಅಶ್ವಿನಿ ಗೌಡ ಅವರು ಒಂಟಿಗಳ ಟೀಮ್​​ನಲ್ಲಿ ಇದ್ದಾರೆ. ಒಂಟಿಗಳಿಗೆ ಬಿಗ್ ಬಾಸ್ ಕೆಲವು ವಿಶೇಷ ಅಧಿಕಾರ ನೀಡಿದ್ದಾರೆ. ಆ ಅಧಿಕಾರಿಯನ್ನು ಅಶ್ವಿನಿ ಗೌಡ ಅವರು ಹೆಚ್ಚು ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ಮೂಡುವಂತಾಗಿದೆ.

ಅಶ್ವಿನಿ ಗೌಡ ಅವರು ಒಂಟಿಗಳ ಟೀಮ್​​ನಲ್ಲಿ ರಾಜಮಾತೆಯ ಸ್ಥಾನವನ್ನು ಅಲಂಕರಿಸಿದ್ದಾರೆ. ಜಂಟಿಗಳ ತಂಡದಲ್ಲಿ ಇರುವ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಮೇಲೆ ಅಶ್ವಿನಿ ಗೌಡ ಕಣ್ಣಿಟ್ಟಿದ್ದಾರೆ. ಅವರಿಬ್ಬರು ಮಾಡಿದ್ದನ್ನೆಲ್ಲ ಅಶ್ವಿನಿ ಗೌಡ ವಿರೋಧಿಸುತ್ತಿದ್ದಾರೆ. ಆದರೆ ಇನ್ನುಳಿದ ಜಂಟಿಗಳನ್ನು ಅವರು ಅಷ್ಟೇನೂ ಟಾರ್ಗೆಟ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಅಕ್ಟೋಬರ್ 2ರ ಸಂಚಿಕೆಯಲ್ಲಿ ಎಲ್ಲರನ್ನೂ ಉದ್ದೇಶಿಸಿ ಅಶ್ವಿನಿ ಗೌಡ ಮಾತನಾಡುತ್ತಿದ್ದರು. ಆ ವೇಳೆ ಕಾವ್ಯ ಶೈವ ಅವರು ಬೇರೆ ಕಡೆ ನೋಡುತ್ತಾ ಅಶ್ವಿನಿಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು. ಅದು ಅಶ್ವಿನಿ ಗೌಡ ಅವರಿಗೆ ಸರಿ ಎನಿಸಲಿಲ್ಲ. ‘ಅಹಂ ತೋರಿಸಬೇಡಿ. ನಾನು ಮಾತನಾಡುವಾಗ ನನ್ನ ಮುಖವನ್ನೇ ನೋಡಬೇಕು’ ಎಂದು ತಾಕೀತು ಮಾಡಿದರು.

ಇದನ್ನೂ ಓದಿ: ಗಿಲ್ಲಿ ನಟನಿಗೆ ಕಾಮಿಡಿಯೇ ಮುಳುವಾಯ್ತು: ಬಿಗ್ ಬಾಸ್ ಕಡೆಯಿಂದ ಖಡಕ್ ಎಚ್ಚರಿಕೆ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್ಲಿ ನಟ, ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ‘ನಿಮಗೂ ಕೂಡ ಅಹಂ’ ಇದೆ ಕಾವ್ಯ ಶೈವ ಅವರು ಖಡಕ್ ಆಗಿ ತಿರುಗೇಟು ನೀಡಿದರು. ಗಿಲ್ಲಿ ನಟ ಕಾಮಿಡಿ ಕಲಾವಿದ ಆಗಿರುವುದರಿಂದ ಎಲ್ಲ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಿದ್ದಾರೆ. ಬಹುತೇಕ ಸಂದರ್ಭವನ್ನು ಅವರು ಕಾಮಿಡಿಯಾಗಿ ತೆಗೆದುಕೊಂಡು ಎಲ್ಲರನ್ನೂ ನಗಿಸುತ್ತಿದ್ದಾರೆ. ಇಲ್ಲದಿದ್ದರೆ ಜಗಳ ಇನ್ನಷ್ಟು ಜೋರಾಗುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.