
ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿನ ನಟಿ, ಹಾಸ್ಯ ಕಲಾವಿದೆ ನಯನ ವಿರುದ್ಧ ದೂರು ದಾಖಲಾಗಿದೆ. ನಟಿ ನಯನಾ ಅವರು ದಲಿತ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಯೊಂದು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಯನಾ ಅವರು ಕಳೆದ ತಿಂಗಳು ಚಿಟ್ ಫಂಡ್ ಮೋಸದ ಕುರಿತಾಗಿ ಮಾತನಾಡುತ್ತಾ ಬಳಸಿದ್ದ ಪದಗಳು ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕ ಪದಗಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಬುರ್ಗಿಯಲ್ಲಿ ದಲಿತ ಸೇನೆಯ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಿರುವುದಿಷ್ಟು, ಕಳೆದ ತಿಂಗಳು 29ರಂದು ಮೈಸೂರಿನ ಸರಸ್ವತಿಪುರದಲ್ಲಿ, ಮೈಸೂರು ಮೆಟ್ರೊ ಮಿನಿಮಿಥಿ ಚಿಟ್ ಫಂಡ್ ಅವರ ಹಗರಣ ಕುರಿತಾಗಿ ಮಾತನಾಡಿದ್ದ ನಯನಾ, ಚಿಟ್ ಫಂಡ್ನವರನ್ನು ನಿಂದಿಸುವ ಭರದಲ್ಲಿ ಜಾತಿ ಸೂಚಕ ಪದವೊಂದನ್ನು ಬಳಸಿದ್ದರು. ಆ ಬಳಿಕ ಅದರ ಜೊತೆಗೆ ಹೊಲಸು ಪದವನ್ನು ಸೇರಿಸಿ ಮಾತನಾಡಿದ್ದರು. ಇದೀಗ ಕಲಬುರ್ಗಿಯ ದಲಿತ ಸೇನೆ ಸಂಘಟನೆಯ ಅಧ್ಯಕ್ಷ ಮಂಜುನಾಥ ಎಂಬುವರು ನಯನಾ ವಿರುದ್ಧ ದೂರು ದಾಖಲಿಸಿದ್ದು, ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಯನಾ ಒಬ್ಬ ಸವರ್ಣೀಯರಾಗಿದ್ದು, ಅವರು ದಲಿತ ವಿರೋಧಿ ಮನಸ್ಥಿತಿ ಹೊಂದಿದ್ದು, ಅವರು ಆಡಿರುವ ಮಾತುಗಳಿಂದ ಇದು ಖಾತ್ರಿ ಆಗಿದೆ. ಅವರು ಆಡಿರುವ ಮಾತುಗಳಿಂದ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹಾಗಾಗಿ ನಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಮಂಜುನಾಥ ಅವರ ದೂರಿನ ಅನ್ವಯ ನಟಿಯ ವಿರುದ್ಧ ಅಟ್ರಾಸಿಟಿ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ:VIDEO: ಕಟೌಟ್, ಬಿಜಿಎಂ… ಸಿನಿಮಾ ಸ್ಟೈಲ್ನಲ್ಲಿ ಸಂಜು ಸ್ಯಾಮ್ಸನ್ ಆಗಮನ
ಈ ಹಿಂದೆ ನಟ ಉಪೇಂದ್ರ ಸಹ ತಮ್ಮ ವಿಡಿಯೋ ಒಂದರಲ್ಲಿ ಇದೇ ಪದವನ್ನು ಬಳಸಿದ್ದರು. ಆಗಲೂ ಸಹ ನಟ ಉಪೇಂದ್ರ ವಿರುದ್ಧ ಹಲವು ದಲಿತಪರ ಸಂಘಟನೆಗಳು ದೂರು ದಾಖಲಿಸಿದ್ದವು. ಉಪೇಂದ್ರ, ಗಾದೆಯ ರೀತಿ ಜಾತಿ ಸೂಚಕ ಪದವೊಂದನ್ನು ತಮ್ಮ ವಿಡಿಯೋನಲ್ಲಿ ಬಳಕೆ ಮಾಡಿದ್ದರು. ಉಪೇಂದ್ರ ವಿರುದ್ಧ ದೂರು ದಾಖಲಾದ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಸಹ ನಡೆದಿತ್ತು. ಇದೀಗ ಅದೇ ಪದವನ್ನು ನಟಿ ನಯನಾ ಸಹ ಬಳಸಿದ್ದಾರೆ. ಅವರ ವಿರುದ್ಧವೂ ದೂರು ದಾಖಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Wed, 19 November 25