
ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಮೂಲಕ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಯಿತು. ಈ ಶೋನಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ರಕ್ಷಿತಾ ಶೆಟ್ಟಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನವೇ ಮುಂಬೈನಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರು ಮನೆ ಖರೀದಿ ಮಾಡಿದ್ದರು. ಅದು ಹೇಗೆ ಸಾಧ್ಯವಾಯ್ತು ಎಂಬುದನ್ನು ಅವರು ಟಿವಿ9 ಸಂದರ್ಶನದಲ್ಲಿ ವಿವರಿಸಿದ್ದಾರೆ.
‘ಯೂಟ್ಯೂಬ್ ಹಣ ತಕ್ಷಣಕ್ಕೆ ಬರಲ್ಲ. ಸಾವಿರ ವೀವ್ಸ್ ಬಂದರೆ ಅದರಿಂದ 70 ರೂಪಾಯಿ ಬರುತ್ತದೆ. ಹೆಚ್ಚು ವೀವ್ಸ್ ಬಂದರೆ ಹಣ ಆಗುತ್ತದೆ. ಎಲ್ಲ ವಿಡಿಯೋ ಓಡುತ್ತೆ ಅಂತ ಹೇಳೋಕೆ ಆಗಲ್ಲ. ಮನೆ ತೆಗೆದುಕೊಂಡಿದ್ದು ನನಗೆ ದೊಡ್ಡ ರಿಸ್ಕ್. ಯಾಕೆಂದರೆ, ಯೂಟ್ಯೂಬ್ ಹಣ ಸತತವಾಗಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ಈ ತಿಂಗಳು ನಾನು ಒಂದು ಲಕ್ಷ ದುಡಿದರೆ, ಇನ್ನೊಂದು ದಿನಗಳು ಬರೀ 5 ಸಾವಿರ ಆಗಬಹುದು’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
‘ಅದರಿಂದ ಸ್ವಲ್ಪ ಸ್ವಲ್ಪ ಹಣ ಉಳಿತಾಯ ಮಾಡಿ ನಾನು ಮನೆಗೆ ಡೌನ್ ಪೇಮೆಂಟ್ ಮಾಡಿದ್ದೇನೆ. ಇಎಂಐ ಕಟ್ಟುತ್ತಿದ್ದೇನೆ. ನಮ್ಮಂತಹ ಕೆಳ ಮಧ್ಯಮ ವರ್ಗದ ಕುಟುಂಬದವರಿಗೆ ಉಳಿತಾಯ ಮಾಡೋದು ಕಷ್ಟ. ನಾನು ಹೆಚ್ಚು ಖರ್ಚು ಮಾಡಲ್ಲ. ಆದರೆ ತಿನ್ನಲು ಖರ್ಚು ಮಾಡುತ್ತೇನೆ. ಮನೆಯವರಿಗಾಗಿ ಖರ್ಚು ಮಾಡುತ್ತೇನೆ. ಅದರಲ್ಲಿ ನನಗೆ ನೆಮ್ಮದಿ ಸಿಗುತ್ತದೆ’ ಎಂದಿದ್ದಾರೆ ರಕ್ಷಿತಾ ಶೆಟ್ಟಿ.
‘ಹೀಗೆ ಹಣ ಉಳಿತಾಯ ಮಾಡಿ, ನಾನು ಮನೆ ಖರೀದಿಸಲು ಡೌನ್ ಪೇಮೆಂಟ್ ಮಾಡಿದ್ದು ಯೂಟ್ಯೂಬ್ನಿಂದಲೇ. 15 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಅಂದುಕೊಂಡು ಹೋಗುತ್ತೇನೆ. ಇನ್ನುಳಿದ ಖರ್ಚು ಸೇರಿ 35 ಲಕ್ಷ ರೂಪಾಯಿಗೆ ಏರಿಕೆ ಆಗುತ್ತದೆ. ಆ ಸಂದರ್ಭದಲ್ಲಿ ಕೈಯಲ್ಲಿ ದುಡ್ಡು ಇರಬೇಕಾಗುತ್ತದೆ. ಅದು ಸುಲಭ ಅಲ್ಲ. ಈಗ ಸಾಲ ತೀರಿಸುತ್ತಾ ಇದ್ದೇನೆ’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.
ಇದನ್ನೂ ಓದಿ: 25 ಲಕ್ಷ ರೂಪಾಯಿ ಹಣವನ್ನು ಏನ್ ಮಾಡ್ತೀರಾ? ಇದನ್ನು ಖರೀದಿಸುವುದು ನನ್ನ ಆಸೆ ಎಂದ ರಕ್ಷಿತಾ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಬಂದ ಬಳಿಕ ರಕ್ಷಿತಾ ಶೆಟ್ಟಿ ಅವರ ಜನಪ್ರಿಯತೆ ಜಾಸ್ತಿ ಆಗಿದೆ. ಇದು ಅವರ ಮೊದಲ ರಿಯಾಲಿಟಿ ಶೋ. ಮೊದಲನೇ ಪ್ರಯತ್ನದಲ್ಲೇ ಅವರು ಫಿನಾಲೆ ತನಕ ಬಂದು ರನ್ನರ್ ಅಪ್ ಆದರು. ತುಳುನಾಡಿನಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ತುಂಬ ಬೆಂಬಲ ಸಿಕ್ಕಿತು. ಗಿಲ್ಲಿ ನಟ ಅವರು ಈ ಶೋ ವಿನ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.