‘ಗೆದ್ದವರು 50 ಲಕ್ಷ ರೂಪಾಯಿನ ನಿಮಗೆ ಕೊಡಲ್ಲ’; ಚರ್ಚೆ ಹುಟ್ಟುಹಾಕಿದ ಸುದೀಪ್ ಮಾತು

ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಘಟ್ಟದಲ್ಲಿ ಕಿಚ್ಚ ಸುದೀಪ್ ಅವರ ಮಾತುಗಳು ಚರ್ಚೆಗೆ ಕಾರಣವಾಗಿವೆ. ಧ್ರುವಂತ್‌ಗೆ ನೀಡಿದ 'ಕಿಚ್ಚನ ಚಪ್ಪಾಳೆ' ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದ್ದರು. ಅದಕ್ಕೆ ಸುದೀಪ್ ಅದು ವೈಯಕ್ತಿಕ ಎಂದಿದ್ದರು. 'ಗೆದ್ದವರು 50 ಲಕ್ಷ ಬಹುಮಾನವನ್ನು ಯಾರಿಗೂ ಕೊಡಲ್ಲ' ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

‘ಗೆದ್ದವರು 50 ಲಕ್ಷ ರೂಪಾಯಿನ ನಿಮಗೆ ಕೊಡಲ್ಲ’; ಚರ್ಚೆ ಹುಟ್ಟುಹಾಕಿದ ಸುದೀಪ್ ಮಾತು
ಸುದೀಪ್

Updated on: Jan 18, 2026 | 2:37 PM

ಕಿಚ್ಚ ಸುದೀಪ್ (Sudeep) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಶೋ ನಡೆಸಿಕೊಡುತ್ತಿದ್ದಾರೆ. ಇಂದು (ಜನವರಿ 18) ಶೋ ಕೊನೆಯಾಗಲಿದೆ. ಅವರು ಈ ಬಾರಿ ವಿವಾದಗಳ ಮೂಲಕವೂ ಚರ್ಚೆಯಾದರು. ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಸ್ಪಷ್ಟನೆ ಕೊಡುವಾಗ ಅವರು ಆಡಿದ ಮಾತು ಮತ್ತೆ ಚರ್ಚೆಗೆ ಕಾರಣ ಆಗಿದೆ.

ಕಳೆದ ವಾರ ಧ್ರುವಂತ್ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಯಿತು. ಇದನ್ನು ಅನೇಕರು ಪ್ರಶ್ನೆ ಮಾಡಿದರು. ಈ ವಿಷಯ ಗಿಲ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು. ಸುದೀಪ್ ಮಾಡಿದ್ದು ಸರಿ ಅಲ್ಲ ಎಂಬ ಮಾತುಗಳು ವ್ಯಕ್ತವಾದವು. ‘ಧ್ರುವಂತ್ ಅಲ್ಲ, ಗಿಲ್ಲಿಗೆ ಚಪ್ಪಾಳೆ ಕೊಡಬೇಕಿತ್ತು’ ಎಂದಿದ್ದಾರೆ ಗಿಲ್ಲಿ ಫ್ಯಾನ್ಸ್. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಚಪ್ಪಾಳೆ ನನ್ನ ವೈಯಕ್ತಿಕ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.

ಆ ಬಳಿಕ ರಘು ಹಾಗೂ ಅಶ್ವಿನಿ ಅವರ ಫನ್ ವಿಟಿ ತೋರಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸುವಾಗ, ‘ನಾನು ಶೋ ಮುಗಿದ ಬಳಿಕ ಮನೆಗೆ ಹೋಗೋದು’ ಎಂದರು ಅಶ್ವಿನಿ. ಆಗ ಸುದೀಪ್, ‘ಶೋ ಮುಗಿಸಿಕೊಂಡು ನಾನು ನಮ್ಮನೆಗೆ ಹೋಗೋದು. ಗೆದ್ದವರು 50 ಲಕ್ಷ ರೂಪಾಯಿ ಯಾರಿಗೂ ಕೊಡಲ್ಲ. ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ನೋಡಿದರೆ ಎಲ್ಲರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಅವರಿಗೆ ಗೆದ್ದವರು ಹಣ ಕೊಡಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಧ್ರುವಂತ್​​ಗೆ ‘ಸೀಸನ್ ಚಪ್ಪಾಳೆ’ ಕೊಟ್ಟಿದ್ದನ್ನು ಟೀಕಿಸಿದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್

ಈ ಬಗ್ಗೆ ಅನೇಕರು ಚರ್ಚೆ ಮಾಡಿದ್ದಾರೆ. ‘ಸಿನಿಮಾ ವಿಷಯದಲ್ಲೂ ಜನರು ಹೀಗೆಯೇ ಮಾಡಿದ್ದರೆ ಏನಾಗುತ್ತಿತ್ತು’ ಎಂದು ಕೆಲವರು ಕೇಳಿದ್ದಾರೆ. ‘ಸಿನಿಮಾ ನೋಡಿದ ಮಾತ್ರಕ್ಕೆ ಆ ಹಣವನ್ನು ಹೀರೋಗಳು ನಮಗೆ ಕೊಡುವುದಿಲ್ಲ ಎಂದು ಸುಮ್ಮನಾಗಿದ್ದರೆ ಏನಾಗುತ್ತಿತ್ತು’ ಎಂಬುದು ಕೆಲವರ ಪ್ರಶ್ನೆ. ‘ಅಭಿಮಾನಿಗಳು ಅಭಿಮಾನ ತೋರಿಸುತ್ತಾರೆ ಹಣ ನಿರೀಕ್ಷೆ ಮಾಡುವುದಿಲ್ಲ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.