ಬಿಗ್ಬಾಸ್ (BiggBoss) ಮನೆಯಲ್ಲಿ ಈ ವಾರವೆಲ್ಲ ಟಾಸ್ಕ್ಗಳಿಗಾಗಿ ಗಂಧದ ಗುಡಿ ಹಾಗೂ ವಜ್ರಕಾಯ ತಂಡಗಳು ಪರಸ್ಪರ ಸ್ಪರ್ಧಿಸಿದವು. ವಾರದ ಅಂತ್ಯದಲ್ಲಿ ಡ್ರೋನ್ ಪ್ರತಾಪ್ ಮುನ್ನಡೆಸಿದ್ದ ಗಂಧದ ಗುಡಿ ತಂಡ ಗೆಲುವು ಸಾಧಿಸಿತು. ಆದರೆ ಹೆಚ್ಚು ಟಾಸ್ಕ್ ಗೆದ್ದಿದ್ದ ಗಂಧದ ಗುಡಿ ತಂಡದ ಸದಸ್ಯರು ಮಾತ್ರವೇ ಕ್ಯಾಪ್ಟೆನ್ಸಿ ಟಾಸ್ಕ್ಗೆ ಅರ್ಹರಾಗಿದ್ದರು. ನಿನ್ನೆಯ ಎಪಿಸೋಡ್ನಲ್ಲೇ ಕ್ಯಾಪ್ಟನ್ಸಿ ಟಾಸ್ಕ್ ಆರಂಭವಾಗಿತ್ತು, ಅಂತಿಮ ಸುತ್ತಿಗೆ ಭಾಗ್ಯಶ್ರೀ ಹಾಗೂ ಮೈಖಲ್ ಮಾತ್ರವೇ ಉಳಿದಿದ್ದರು.
ಬಲಶಾಲಿ ಮೈಖಲ್ ಹಾಗೂ ಭಾಗ್ಯಶ್ರೀ ನಡುವೆ ಮೈಖಲ್ ಸುಲಭವಾಗಿ ಗೆಲ್ಲುತ್ತಾರೆ ಎಂಬುದು ಎಲ್ಲ ನಿರೀಕ್ಷೆಯಾಗಿತ್ತು, ಆದರೆ ಬಿಗ್ಬಾಸ್ ಒಂದು ಜಬರ್ದಸ್ತ್ ಟ್ವಿಸ್ಟ್ ನೀಡಿದರು. ಇಬ್ಬರು ನೇರವಾಗಿ ಒಬ್ಬರ ಮೇಲೊಬ್ಬರು ಸ್ಪರ್ಧಿಸದೆ, ಅವರಿಗಾಗಿ ಆಡಲು ಮೂರು ಮೂರು ಮಂದಿಯನ್ನು ಒಪ್ಪಿಸುವಂತೆ ಬಿಗ್ಬಾಸ್ ಸೂಚಿಸಿದರು. ಭಾಗ್ಯಶ್ರೀ ಆರಿಸಿದ ಮೂವರು ಸ್ಪರ್ಧಿಗಳು ಮೈಖಲ್ ಆರಿಸಿದ ಮೂವರು ಸ್ಪರ್ಧಿಗಳ ವಿರುದ್ಧ ಆಡಿ ಗೆಲ್ಲಬೇಕಿತ್ತು.
ಅಂತೆಯೇ ಭಾಗ್ಯಶ್ರೀ ಪರವಾಗಿ ಸಂಗೀತಾ, ವಿನಯ್ ಹಾಗೂ ನಮ್ರತಾ ಆಡಲು ತಯಾರಾದರೆ, ಮೈಖಲ್ ಪರವಾಗಿ ಸ್ನೇಹಿತ್, ತನಿಷಾ ಹಾಗೂ ಕಾರ್ತಿಕ್ ಆಡಿದರು. ಹೆಲ್ಮಟ್ಗೆ ದಾರವೊಂದನ್ನು ಕಟ್ಟಿ ಅದರ ತುದಿಗೆ ಬಾಲ್ ಒಂದನ್ನು ಕಟ್ಟಲಾಗಿತ್ತು. ಅದರ ಮೂಲಕ ನಿಲ್ಲಿಸಿದ್ದ ಸಣ್ಣ ಕಟ್ಟಿಗೆಯ ತುಂಡುಗಳನ್ನು ಬೀಳಿಸಬೇಕಿತ್ತು. ಮೊದಲು ಆಟ ಆರಂಭಿಸಿದ್ದು ಸ್ನೇಹಿತ್ ಹಾಗೂ ಸಂಗೀತಾ. ಸ್ನೇಹಿತ್ ಬಹಳ ಸುಲಭವಾಗಿ ಹಲಗೆ ಮೇಲೆ ನಿಂತು ಹೆಲ್ಮೆಟ್ಗೆ ಕಟ್ಟಿದ ಚೆಂಡಿನಿಂದ ತುಂಡುಗಳನ್ನು ಉದುರಿಸಿದರು. ಆದರೆ ಸಂಗೀತಾಗೆ ಅದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?
ಸ್ನೇಹಿತ್ ಬಹಳ ಸುಲಭವಾಗಿ ಮೊದಲ ಹಂತವನ್ನು ದಾಟಿ ಹೆಲ್ಮೆಟ್ ಅನ್ನು ತಂಡದ ಎರಡನೇ ಸದಸ್ಯೆ ತನಿಷಾಗೆ ಪಾಸ್ ಮಾಡಿದರು. ಆಗ ಸಂಗೀತಾ ಇನ್ನೂ ಅರ್ಧ ಕಟ್ಟಿಗೆಗಳನ್ನು ಸಹ ಬೀಳಿಸಿರಲಿಲ್ಲ, ತನಿಷಾಗೆ ಕಟ್ಟಿಗೆ ಉರುಳಿಸುವುದು ಸುಲಭವಾಗಿತ್ತು ನೆಲದ ಮೇಲೆ ನಿಂತು ಸುಲಭವಾಗಿ ತುಂಡುಗಳನ್ನು ಉದುರಿಸಿ ಟಾಸ್ಕ್ನ ಎರಡನೇ ಹಂತ ಮುಗಿಸಿದರು. ಆಗಲೂ ಸಹ ಸಂಗೀತಾ ಮೊದಲ ಹಂತವನ್ನು ಪೂರ್ಣಗೊಳಿಸಲು ಕಷ್ಟಪಡುತ್ತಿದ್ದರು. ತನಿಷಾ ಬಳಿಕ ಕಾರ್ತಿಕ್ಗೆ ಹೆಲ್ಮೆಟ್ ಹಸ್ತಾಂತರವಾಯ್ತು, ಅವರು ಇನ್ನೂ ಸುಲಭವಾಗಿ ಟಾಸ್ಕ್ ಅನ್ನು ಪೂರ್ಣಗೊಳಿಸಿದರು. ಮೈಖಲ್ರ ಇಡೀ ತಂಡ ಟಾಸ್ಕ್ ಅನ್ನು ಪೂರ್ಣಗೊಳಿಸಿ, ಮೈಖಲ್ ಅನ್ನು ಕ್ಯಾಪ್ಟನ್ ಮಾಡಿದರು, ಆದರೆ ಸಂಗೀತಾ ಇನ್ನೂ ಮೊದಲ ಹಂತದಲ್ಲಿಯೇ ಇದ್ದರು.
ಟಾಸ್ಕ್ ಮುಗಿಯುತ್ತಿದ್ದಂತೆ ಸಂಗೀತಾ ಅಳಲು ಆರಂಭಿಸಿದರು. ತಾವು ಅತ್ಯಂತ ಕೆಟ್ಟದಾಗಿ ಪ್ರದರ್ಶನ ನೀಡಿದ ಬಗ್ಗೆ ಸಂಗೀತಾ ಬೇಸರಗೊಂಡಿದ್ದರು, ತಮಗೆ ತಾವೇ ಶೇಮ್ ಎಂದು ಕರೆದುಕೊಂಡರು. ಆಗ ಉಸ್ತುವಾರಿಯಾಗಿದ್ದ ಸಿರಿ, ನಮ್ರತಾ, ಸಂಗೀತಾರನ್ನು ಟಾಸ್ಕ್ಗೆ ಆಯ್ಕೆ ಮಾಡಿದ್ದ ಭಾಗ್ಯಶ್ರೀ ಅವರುಗಳು ಬಂದು ಸಮಾಧಾನ ಮಾಡಿದರು. ಬಳಿಕ ಸಂಗೀತಾ, ವಿನಯ್ ಹಾಗೂ ಭಾಗ್ಯಶ್ರೀ ಬಳಿ ಕ್ಷಮೆಯನ್ನೂ ಕೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ