ವಿವಿಧತೆಯಲ್ಲಿ ಏಕತೆ ಎಂಬುದು ಬಿಗ್ಬಾಸ್ (Bigg Boss) ಮನೆಯ ಧ್ಯೇಯ. ಅದಕ್ಕೆ ತಕ್ಕಂತೆ ಇದೀಗ ಬಿಗ್ಬಾಸ್ ಮನೆಗೆ ಟ್ರಾನ್ಸ್ಜೆಂಡರ್ ಮಹಿಳೆ ನೀತು ವನಜಾಕ್ಷಿ ಎಂಟ್ರಿ ನೀಡಿದ್ದಾರೆ. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೀರತೆಯಿಂದ ಮೆಟ್ಟಿನಿಂತು ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗುವಂಥಹಾ ಉದ್ಯಮಿಯಾಗಿ ಬೆಳೆದಿದ್ದಾರೆ. ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ನೀತು ವನಜಾಕ್ಷಿ, ತನ್ನಂಥಹಾ ಅನೇಕರ ಬದುಕಿನಲ್ಲಿ ಸ್ಪೂರ್ತಿ ತುಂಬಲೆಂದು ತಾವಿಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.
ಗದಗದಲ್ಲಿ ಮಂಜುನಾಥನಾಗಿ ಹುಟ್ಟಿ ಬಳಿಕ ಹೆಣ್ಣಾಗಿ ಬದಲಾಗಿ ನೀತು ಎಂದಾದರು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ನೀತು ಅದನ್ನೇ ಬಂಡವಾಳವಾಗಿಟ್ಟುಕೊಂಡು ಟ್ಯಾಟೂ ಕಲಾವಿದೆ ಆದರು. ಅದರಿಂದ ಬಂದ ಹಣದಲ್ಲಿ ಬ್ಯೂಟಿ ಪಾರ್ಲರ್ ತೆರೆದರು. ಅದಾದ ಬಳಿಕ ಉತ್ತರ ಕರ್ನಾಟಕದ ಸೊಗಡಿನ ಆಹಾರವನ್ನು ಗ್ರಾಹಕರಿಗೆ ಉಣಬಡಿಸುವ ಹೋಟೆಲ್ ಒಂದನ್ನು ಅಮ್ಮನೊಂದಿಗೆ ಸೇರಿ ತೆರೆದರು. ಮಾಡೆಲಿಂಗ್ ಮಾಡಿದರು, ಫ್ಯಾಷನ್ ಶೋಗಳಲ್ಲಿ ಟ್ರ್ಯಾನ್ಸ್ಜೆಂಡರ್ ಬ್ಯೂಟಿ ಪೆಜೆಟ್ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?
ಮಂಗಳಮುಖಿಯವರನ್ನು ಸಮಾಜ ನೋಡುವ ವಿಧಾನವನ್ನು ಬದಲಾಯಿಸಬೇಕು ಎಂಬ ಅಪಾರ ಆಸೆಯಿಟ್ಟುಕೊಂಡಿರುವ ನೀತು, ತಮ್ಮ ಸಮುದಾಯವರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸಿ, ಅದಕ್ಕೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ನಾನು ಗೆದ್ದಿದ್ದೀನಿ ಎಂದು ಹಲವರಿಗೆ ಗೊತ್ತಿದೆ. ಆದರೆ ಆ ಗೆಲುವಿನ ಹಾದಿಯಲ್ಲಿ ಏನೇನು ಅಡ್ಡಿ ಇತ್ತು ಎಂಬುದನ್ನು ನಾನು ಹೇಳಬೇಕಿದೆ. ಅಲ್ಲಿ ನಿಂತು ನನ್ನಂಥಹಾ ಹಲವರಿಗೆ ನಾನು ಸ್ಪೂರ್ತಿ ತುಂಬಬೇಕಿದೆ ಎಂದರು ನೀತು.
ತಮ್ಮ ತಾಯಿ ತಮಗೆ ನೀಡಿರುವ ಬೆಂಬಲದಿಂದ ತಮ್ಮ ತಾಯಿ ವನಜಾಕ್ಷಿ ಹೆಸರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ನೀತು ಅವರನ್ನು ಒಳಗೆ ಕಳಿಸುವ ಮುಂಚೆ ನಟಿ, ಮಾಜಿ ಬಿಗ್ಬಾಸ್ ವಿನ್ನರ್ ಶ್ರುತಿ ಮಾತನಾಡಿ, ಮಹಿಳೆಯರಿಗೇ ಸವಾಲುಗಳು ಇರುತ್ತವೆ, ಅದರಲ್ಲಿ ನೀವು ಎದುರಿಸಿರುವ ಸವಾಲುಗಳನ್ನು ಊಹಿಸಬಹುದು, ನೀವು ಸಾಧ್ಯವಾದಷ್ಟು ಹೆಚ್ಚು ಸಮಯ ಆ ಮನೆಯಲ್ಲಿ ಕಳೆಯಿರಿ, ನೀವು ಅಲ್ಲಿ ಹೆಚ್ಚು ಸಮಯ ಕಳೆದಷ್ಟು ಹೆಚ್ಚು ಜನರಿಗೆ ಸ್ಪೂರ್ತಿ ತುಂಬುತ್ತೀರಿ, ನಿಮ್ಮನ್ನು ಅಲ್ಲಿನ ಜನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನೂ ಸಹ ರಾಜ್ಯದ ಜನ ನೋಡುತ್ತಿರುತ್ತಾರೆ ಎಂದು ಶುಭ ಹಾರೈಸಿದರು.
ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Sun, 8 October 23