ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆಯನ್ನು (Bigg Boss Finale) ಕಿಚ್ಚ ಸುದೀಪ್ ಅವರು ತುಂಬಾ ಲವಲವಿಕೆಯಿಂದ ನಡೆಸಿಕೊಟ್ಟಿದ್ದಾರೆ. ಯಾರು ವಿನ್ನರ್ ಎಂಬುದನ್ನು ತಿಳಿಸುವುದರ ಜೊತೆಗೆ ಹಲವು ವಿಚಾರಗಳು ಈ ವೇದಿಕೆಯಲ್ಲಿ ಚರ್ಚೆ ಆಗಿವೆ. ಹತ್ತು ಹಲವು ತಮಾಷೆಯ ಮಾತುಗಳ ಮೂಲಕ ಇಡೀ ವಾತಾವರಣವನ್ನು ಸುದೀಪ್ ರಂಗಾಗಿಸಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ಅರವಿಂದ್ ಕೆಪಿ ಅವರ ಮದುವೆ ಬಗ್ಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಸಂಬಂಧಪಟ್ಟಂತೆ ದಿವ್ಯಾ ಸುರೇಶ್ (Divya Suresh) ಕೂಡ ತಮ್ಮ ಅಭಿಪ್ರಾಯ ಹೇಳಿಕೊಂಡರು. ಮಂಜು (Manju Pavagada) ಮದುವೆ ಬಗ್ಗೆ ಅವರ ತಂದೆ-ತಾಯಿ ಬಳಿ ದಿವ್ಯಾ ಸುರೇಶ್ ಮಾತನಾಡಿದ್ದಾರೆ ಎಂಬುದು ಆಗಲೇ ಗೊತ್ತಾಯಿತು.
‘ಅರವಿಂದ್ಗಿಂತಲೂ ಮೊದಲು ಮಂಜು ಪಾವಗಡ ಮದುವೆ ಆಗುತ್ತಾರೆ. ಹೌದೋ ಅಲ್ಲವೋ’ ಎಂದು ಸುದೀಪ್ ಪ್ರಶ್ನೆ ಕೇಳಿದರು. ಅದಕ್ಕೆ ಹಲವು ಉತ್ತರಗಳು ಬಂದವು. ‘ಮಂಜು ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆ ಗುರಿಯನ್ನು ಮುಟ್ಟುವವರೆಗೂ ಅವರು ಮದುವೆ ಆಗುವುದಿಲ್ಲ’ ಎಂದು ಶಂಕರ್ ಅಶ್ವತ್ಥ್ ಹೇಳಿದರು. ಆ ಮಾತಿಗೆ ರಾಜೀವ್ ಕೂಡ ಧ್ವನಿಗೂಡಿಸಿದರು. ‘ಮಂಜುಗೆ ಈಗಾಗಲೇ ಅವರ ಅಪ್ಪ-ಅಮ್ಮ ಒಂದು ಹುಡುಗಿಯನ್ನು ಫಿಕ್ಸ್ ಮಾಡಿದ್ದಾರೆ ಅನಿಸುತ್ತದೆ. ಹಾಗಾಗಿ ಮಂಜು ಬೇಗ ಮದುವೆ ಆಗುತ್ತಾರೆ’ ಎಂದು ರಘು ಗೌಡ ಹೇಳಿದರು.
ಈ ವೇಳೆ ದಿವ್ಯಾ ಮಾತು ಗಮನ ಸೆಳೆಯಿತು. ‘ಆಗಲೇ ನಾನು ಮಂಜು ಅವರ ಅಪ್ಪ-ಅಮ್ಮನ ಹತ್ತಿರ ಮದುವೆ ಬಗ್ಗೆ ಮಾತನಾಡುತ್ತಿದ್ದೆ. ಮಂಜು ಮದುವೆ ಯಾವಾಗ ಮಾಡ್ತೀರ ಅಂತ ಕೇಳಿದೆ. ಅವನು ಆಡ್ತಾ ಇರೋದು ನೋಡಿದರೆ ಬಿಗ್ ಬಾಸ್ನಿಂದ ಹೊರಬಂದ ತಕ್ಷಣ ಮದುವೆ ಆಗ್ತಾನೆ ಅನಿಸುತ್ತೆ ಅಂದ್ರು. ಮದುವೆ ಆಗ್ಬೇಕು ಅಂತ ಆಗಾಗ ಹೇಳ್ತಾ ಇರೋದರಿಂದ ತಕ್ಷಣ ಮದುವೆ ಆಗಬಹುದು ಎನಿಸುತ್ತದೆ’ ಎಂದು ದಿವ್ಯಾ ಸುರೇಶ್ ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಒಂದು ರೀತಿಯ ಆತ್ಮೀಯತೆ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ಇಬ್ಬರೂ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು. ಪರಸ್ಪರ ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಅದು ಕೆಲವರಿಂದ ಟೀಕೆಗೂ ಒಳಗಾಯಿತು. ಸೆಕೆಂಡ್ ಇನ್ನಿಂಗ್ಸ್ ಮುಗಿಯುವಾಗ ದಿವ್ಯಾ ಅವರು ‘ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳಿದ್ದು ಮಾತ್ರವಲ್ಲದೇ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡು ವಿಶೇಷ ಕೇಕ್ ತರಿಸಿ ಫ್ರೆಂಡ್ಶಿಪ್ ಡೇ ಆಚರಿಸಿದ್ದರು.
ಇದನ್ನೂ ಓದಿ:
Bigg Boss Finale: ಬಿಗ್ ಬಾಸ್ನಿಂದ ದಿವ್ಯಾ ಉರುಡುಗ ಔಟ್; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್ ಕೆಪಿ
‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ