ಕಾಮಿಡಿ ನಟ ತುಕಾಲಿ ಸಂತೋಷ್ (Tukali Santhosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಈ ರೀತಿ ಹೆಸರು ಇಟ್ಟುಕೊಂಡಿದ್ದರ ಬಗ್ಗೆ ಅನೇಕರಿಗೆ ಕೌತುಕ ಇದೆ. ಆ ಬಗ್ಗೆ ಅವರು ಓಪನಿಂಗ್ ಸಂಚಿಕೆಯಲ್ಲೇ ಮಾಹಿತಿ ನೀಡಿದರು. ಒಂದು ಸ್ಕಿಟ್ನಲ್ಲಿ ತುಕಾಲಿ ಎಂಬ ಪಾತ್ರ ಮಾಡಿದ ಬಳಿಕ ಅವರ ಹೆಸರಿನ ಜೊತೆ ಆ ವಿಶೇಷಣ ಸೇರಿಕೊಂಡಿತು. ಈಗ ಬಿಗ್ ಬಾಸ್ (Bigg Boss) ಕೂಡ ಈ ಹೆಸರಿನ ಬಗ್ಗೆ ತಕರಾರು ತೆಗೆದಿದ್ದಾರೆ. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟೊಂದು ಸರಿ ಎನಿಸುತ್ತಿಲ್ಲ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆ ಘಟನೆ ಸಖತ್ ಫನ್ನಿ ಆಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಒಂದೇ ಹೆಸರಿನ ಒಬ್ಬರು ವ್ಯಕ್ತಿಗಳು ಬಂದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದಿನ ಸೀಸನ್ನಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಇದ್ದರು. ಈಗ 10ನೇ ಸೀಸನ್ನಲ್ಲಿ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರು ಬಂದಿದ್ದಾರೆ. ಸಂತೋಷ್ ಅಂತ ಕರೆದಾಗ ಇಬ್ಬರಿಗೂ ಗೊಂದಲ ಆಗಬಹುದು. ಬಿಗ್ ಬಾಸ್ ಆದೇಶ ನೀಡಿದಾಗ ಅದು ಯಾವ ಸಂತೋಷ್ಗೆ ಸಂಬಂಧಿಸಿದ್ದು ಎಂಬ ಪ್ರಶ್ನೆ ಮೂಡಬಹುದು. ಆ ಕಾರಣಕ್ಕಾಗಿ ಬಿಗ್ ಬಾಸ್ ತಕರಾರು ತೆಗೆದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್ ಅಜಯ್; ಏನು ಇವರ ಹಿನ್ನೆಲೆ?
‘ಮನೆಯಲ್ಲಿ ಒಂದು ಸಮಸ್ಯೆ ಎದುರಾಗಿದೆ. ಈ ಮನೆಯಲ್ಲಿ ಇಬ್ಬರು ಸಂತೋಷ್ ಕುಮಾರ್ ಇದ್ದಾರೆ. ಅದರಿಂದ ವೀಕ್ಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮನ್ನು ಏನೆಂದು ಕರೆಯಬೇಕು’ ಎಂದು ಬಿಗ್ ಬಾಸ್ ಪ್ರಶ್ನಿಸಿದರು. ‘ನನ್ನನ್ನು ತುಕಾಲಿ ಸಂತೋಷ್ ಎಂದೇ ಕರೆಯರಿ’ ಎಂದು ಹಾಸ್ಯ ನಟ ಸಂತು ಹೇಳಿದರು. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟು ಸರಿ ಅನಿಸುತ್ತಿಲ್ಲ. ಹಾಗಾಗಿ ಗೌರವಯುತವಾಗಿ ನಿಮ್ಮನ್ನು ತುಕಾಲಿ ಅವರೇ ಅಂತ ಕರೆಯುತ್ತೇವೆ’ ಎಂದು ಹೇಳುವ ಮೂಲಕ ಬಿಗ್ ಬಾಸ್ ನಗೆ ಚಟಾಕಿ ಹಾರಿಸಿದರು.
ಮೊದಲ ದಿನ ಪತ್ನಿಯ ಜೊತೆ ಸಂತೋಷ್ ಅವರು ಬಿಗ್ ಬಾಸ್ ವೇದಿಕೆ ಏರಿದ್ದರು. ‘ಹೆಂಡತಿಯನ್ನೂ ನಿಮ್ಮ ಜೊತೆ ಬಿಗ್ ಬಾಸ್ಗೆ ಕಳಿಸೋಣವೇ’ ಎಂದು ಸುದೀಪ್ ಕೇಳಿದರು. ಆಗ ‘ಖಂಡಿತಾ ಬೇಡ’ ಎಂದು ಸಂತೋಷ್ ರಾಗ ಎಳೆದಿದ್ದರು. ಕಡೆಗೂ ಪತ್ನಿಯನ್ನು ಬಿಟ್ಟು ಸಂತೋಷ್ ಒಬ್ಬರೇ ಬಿಗ್ ಬಾಸ್ಗೆ ಬಂದರು. ಎಲ್ಲರನ್ನೂ ನಗಿಸುವ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈಶಾನಿ, ನಮ್ರತಾ ಗೌಡ, ವಿನಯ್,ಸ್ನೇಹಿತ್ ಗೌಡ, ನೀತು ವನಜಾಕ್ಷಿ, ಮೈಕೆಲ್ ಅಜಯ್, ಶ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ಭಾಗ್ಯಶ್ರೀ, ಸಿರಿ ಮುಂತಾದವರು ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ‘ಜಿಯೋ ಸಿನಿಮಾ’ದಲ್ಲಿ ಈ ಶೋ ಫ್ರೀ ಆಗಿ ವೀಕ್ಷಣೆಗೆ ಲಭ್ಯವಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.