‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗತಾನೇ ಆರಂಭ ಆಗಿದೆ. ಈ ಶೋ ಒಂದು ವಾರ ಪೂರ್ಣಗೊಳಿಸಿದೆ. ಈ ಬೆನ್ನಲ್ಲೆ ‘ಬಿಗ್ ಬಾಸ್ ಹಿಂದಿ ಸೀಸನ್ 18′ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದೆ. ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡೋ ‘ಬಿಗ್ ಬಾಸ್ 18′ ಶೋ ಭಾನುವಾರ (ಅಕ್ಟೋಬರ್ 6) ಆರಂಭವಾಗಿದೆ. ಈ ಶೋಗೆ ಹಲವು ಸ್ಪರ್ಧಿಗಳು ಬಂದಿದ್ದಾರೆ. ಈಗ ದೊಡ್ಮನಗೆ ಕತ್ತೆ ಎಂಟ್ರಿ ಕೊಟ್ಟಿದ್ದು ಎಲ್ಲರ ಮನ ಗೆದ್ದಿದೆ.
ಕಲರ್ಸ್ ಚಾನೆಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕತ್ತೆಯನ್ನು ನೋಡಿ ಅಭಿಮಾನಿಗಳು ಕೂಡ ಬೆರಗಾಗಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಕತ್ತೆಯನ್ನು ನೋಡಿದ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ‘ಬಿಗ್ ಬಾಸ್ 18’ನಲ್ಲಿ ಇದರ ಪಾತ್ರವೇನು? ಈ ಪ್ರಶ್ನೆಯನ್ನು ಅಭಿಮಾನಿಗಳು ಕೂಡ ಎತ್ತುತ್ತಿದ್ದಾರೆ.
‘ಬಿಗ್ ಬಾಸ್ನ ಕೊನೆಯ ಸ್ಪರ್ಧಿಯಾಗಿ ಕತ್ತೆಯ ಆಗಮನ ಆಗಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕತ್ತೆಗೆ ಗಧರಾಜ್ ಎಂದು ಹೆಸರು ಕೊಡಲಾಗಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕತ್ತೆ ವಕೀಲ ಗುಣರತ್ನ ಸದಾವರ್ತನ್ ಅವರದ್ದು ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗುಣರತ್ನ ಸದಾವರ್ತನ್ ಅವರ ಜೊತೆಯಲ್ಲಿ ಅವರ ಕತ್ತೆಯೂ ಇರುತ್ತದೆ ಎನ್ನಲಾಗಿದೆ.
ಗುಣರತ್ನ ಸದಾವರ್ತನ್ ವೃತ್ತಿಯಲ್ಲಿ ವಕೀಲರು. ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ‘ಹಮ್ ಆತೇ ಹೈ ಡಾಕು ಕಿ ಖಂಡನ್ ಸೇ’ (‘ನಾವು ದರೋಡೆಕೋರರ ಕುಟುಂಬದಿಂದ ಬಂದವರು) ಎಂದು ಎಂಟ್ರಿ ನೀಡಿದ್ದಾರೆ. ಅವರ ಪ್ರವೇಶದ ನಂತರ ಸಲ್ಮಾನ್ ಖಾನ್ ಜೋರಾಗಿ ನಗಲು ಪ್ರಾರಂಭಿಸುತ್ತಾರೆ.
ಇದನ್ನೂ ಓದಿ: ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ
ಈ ಮೊದಲು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ‘777 ಚಾರ್ಲಿ’ ಶ್ವಾನ ಬರುತ್ತದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಅಧಿಕೃತ ಘೋಷಣೆ ಆಯಿತು. ಮೊದಲ ವಾರ ಈ ಶ್ವಾನ ಬರಲಿಲ್ಲ. ಒಪ್ಪಿಗೆ ಸಿಕ್ಕಿಲ್ಲದ ಕಾರಣಕ್ಕೆ ವಿಳಂಬ ಆಗಿದೆ ಎಂದು ವಾಹಿನಿಯವರು ಹೇಳಿದ್ದರು. ಆ ಬಳಿಕ ರಕ್ಷಿತ್ ಶೆಟ್ಟಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ‘ಚಾರ್ಲಿಯನ್ನು ಎಲ್ಲಿಯೂ ಕಳುಹಿಸೋದಿಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ಅವರು ಹೇಳಿದ್ದರು. ಹೀಗಾಗಿ, ಶ್ವಾನ ಬಿಗ್ ಬಾಸ್ಗೆ ಬಂದಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:48 am, Mon, 7 October 24