
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮತ್ತೊಂದು ವೀಕೆಂಡ್ ಪಂಚಾಯ್ತಿ ನಡೆಸಿಕೊಡಲು ಬಂದಿದ್ದಾರೆ ಸುದೀಪ್. ವೈಲ್ಡ್ ಕಾರ್ಡ್ ಎಂಟ್ರಿಗಳು ಮನೆಗೆ ಬಂದ ಬಳಿಕ ಸುದೀಪ್ ನಡೆಸಿಕೊಡುತ್ತಿರುವ ಮೊದಲ ವೀಕೆಂಡ್ ಪಂಚಾಯಿತಿ. ಆದರೆ ವೀಕೆಂಡ್ ಪಂಚಾಯಿತಿ ನಡೆಯುತ್ತಿರುವಾಗಲೇ ಇಬ್ಬರು ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ಜಗಳವೇ ನಡೆದಿದೆ. ಒಬ್ಬರು ಇನ್ನೊಬ್ಬರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರೆ ಇನ್ನೊಬ್ಬರು ಬೆದರಿಕೆಯನ್ನೇ ಹಾಕಿದ್ದಾರೆ.
ಆಗಿದ್ದಿಷ್ಟು, ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಸುದೀಪ್ ಅವರು ಸ್ಪರ್ಧಿಗಳಿಗೆ ಸೂಚಿಸಿದರು. ಎಲ್ಲ ಸ್ಪರ್ಧಿಗಳೂ ಸಹ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ತಮ್ಮ-ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಟಿ ಜಾನ್ವಿ ಮಾತನಾಡುತ್ತಾ, ರಿಶಾ ಅವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡರು. ರಿಶಾ, ಬಿಗ್ಬಾಸ್ ಮನೆಯಲ್ಲಿ ಚಂದ್ರಪ್ರಭಾ ಮತ್ತು ಇನ್ನೂ ಕೆಲವರೊಡನೆ ಹೆಚ್ಚು ಆತ್ಮೀಯವಾಗಿ, ತಮಾಷೆಯಾಗಿ ವರ್ತಿಸುತ್ತಿರುತ್ತಾರೆ. ಪಕ್ಕಕ್ಕೆ ಕರೆದುಕೊಂಡು ಹೋಗಿ ಅದನ್ನೆಲ್ಲ ಮಾಡಿಕೊಳ್ಳಲಿ, ಅದು ನನಗೆ ಮುಜುಗರ ತರುತ್ತದೆ’ ಎಂದರು. ಆದರೆ ಜಾನ್ವಿ ಹೇಳಿದ ಮಾತು ರಿಶಾಗೆ ಇಷ್ಟವಾಗಲಿಲ್ಲ.
ಸುದೀಪ್ ಅವರು ಬ್ರೇಕ್ ನೀಡುತ್ತಿದ್ದಂತೆ, ರಿಶಾ, ಜಾನ್ವಿ ವಿರುದ್ಧ ಮಾತನಾಡಲು ಆರಂಭಿಸಿದರು. ಜಾನ್ವಿಯೊಟ್ಟಿಗೆ ಜಗಳ ಆರಂಭಿಸುತ್ತಿದ್ದಂತೆ ‘ನಿಮ್ಮ ಆಟ ನೋಡಿದರೆ ಅಸಹ್ಯ ಆಗುತ್ತೆ, ಥೂ’ ಎಂದು ಉಗಿದರು ರಿಶಾ. ಇದು ಜಾನ್ವಿಯನ್ನು ಕೆರಳಿಸಿತು. ಅಷ್ಟಕ್ಕೆ ಸುಮ್ಮನಾಗದ ರಿಶಾ, ‘ಈ ಎಪಿಸೋಡ್ ಮುಗಿಯಲಿ ನಿನ್ನನ್ನು ನೋಡಿಕೊಳ್ತೀನಿ. ಈ ಶೋ ಮುಗಿಯಲಿ’ ಎನ್ನುತ್ತಾ ಬೆದರಿಕೆ ಹಾಕಿದರು.
ಇದನ್ನೂ ಓದಿ:‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ
ರಿಶಾ ಮಾತಿನಿಂದ ಕೆರಳಿದ ಜಾನ್ವಿ, ‘ನನಗೇ ಬೆದರಿಕೆ ಹಾಕುತ್ತೀರ, ನೀವು ಯಾರು ನನಗೆ ಬೆದರಿಕೆ ಹಾಕಲು, ಇದೆಲ್ಲ ಇಲ್ಲಿ ನಡೆಯೋದಿಲ್ಲ. ನಿಮ್ಮ ವರ್ತನೆ ನನಗೆ ಇಷ್ಟವಾಗಲಿಲ್ಲ ಅದನ್ನೇ ನಾನು ಹೇಳಿದ್ದೀನಿ. ಬೆದರಿಕೆ ಎಲ್ಲ ನನ್ನ ಎದುರು ಬೇಡ’ ಎಂದು ಜಗಳಕ್ಕೆ ನಿಂತರು. ಕ್ಯಾಪ್ಟನ್ ರಘು ಮತ್ತು ಚಂದ್ರಪ್ರಭಾ ಇಬ್ಬರ ನಡುವೆ ಬಂದು ಜಗಳ ಬಿಡಿಸಿದರು. ಇಬ್ಬರೂ ಸಹ ದೊಡ್ಡ ದನಿಯಲ್ಲೇ ಜಗಳ ಮಾಡಿದರು.
ಸುದೀಪ್ ಅವರು ಬ್ರೇಕ್ನಿಂದ ಬಂದ ಬಳಿಕವೂ ಇದೇ ಚರ್ಚೆ ನಡೆಯಿತು. ‘ನಾನು ಮುಜುಗರ ಆಗುತ್ತದೆ ಎಂದೆ, ನಿಮ್ಮ ಎದುರು ಮಾತ್ರವಲ್ಲ ಅವರಿಗೇ ಅದನ್ನು ಮೊದಲಿಗೆ ಹೇಳಿದ್ದೇನೆ. ಆದರೆ ಅವರು ನನಗೆ ಬೆದರಿಕೆ ಹಾಕಿದರು’ ಎಂದು ದೂರು ಹೇಳಿದರು. ರಿಶಾ ಮಾತನಾಡಿ, ‘ನಾನು ಕಲಾವಿದೆ, ಚಂದ್ರಪ್ರಭಾ ಅವರೂ ಸಹ ಕಲಾವಿದರು, ನಮಗೆ ನಮ್ಮ ಲಿಮಿಟ್ ಗೊತ್ತಿದೆ, ನಾವು ತಮಾಷೆಗಾಗಿ, ಮಿತಿಯಲ್ಲಿಯೇ ಮಾಡಿದ್ದೇವೆ’ ಎಂದರು.
‘ನಾನು ಥೂ ಎಂದಿದ್ದು ತಪ್ಪು ಬೇಕಿದ್ದರೆ ಅದಕ್ಕೆ ಕ್ಷಮೆ ಕೇಳುತ್ತೇನೆ ಎಂದರು. ಆದರೆ ಸುದೀಪ್, ನಿಮಗೆ ಕ್ಷಮೆ ಕೇಳಲು ಯಾರು ಹೇಳಲಿಲ್ಲ. ನೀವು ನನ್ನ ಎದುರು ಕ್ಷಮೆ ಕೇಳುತ್ತೀರಿ ಆ ನಂತರ ವಾರವೆಲ್ಲ ಅದೇ ದ್ವೇಷ, ಅಸಹನೆ ಮುಂದುವರೆಸುತ್ತೀರಿ ಎಂದರು. ಆದರೆ ಇಬ್ಬರ ನಡುವೆ ನಡೆದಿರುವ ಈ ಜಗಳ ಇಬ್ಬರ ಮುಂದಿನ ಆಟದ ಮೇಲೆ ಪರಿಣಾಮ ಬೀರುವುದು ಖಾತ್ರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ