ಎಲ್ಲರ ಎದುರೇ ಸುಳ್ಳು ಹೇಳಿದ ಜಾನ್ವಿಗೆ ಬುದ್ಧಿ ಕಲಿಸಿದ ಸುದೀಪ್

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿ ಜಾನ್ವಿ ಮತ್ತು ಅಶ್ವಿನಿ ಆಪ್ತರಾಗಿದ್ದು ಮನೆಯ ಇತರೆ ಸ್ಪರ್ಧಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ತಮ್ಮನ್ನು ತಾವು ಮೆಚ್ಯೂರ್ಡ್, ಗಟ್ಟಿ ಸ್ಪರ್ಧಿಗಳು ಎಂದುಕೊಂಡಿದ್ದಾರೆ. ಆದರೆ ಶನಿವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್, ಈ ಇಬ್ಬರ ನಕಲಿ ಮುಖವಾಡವನ್ನು ಕಿತ್ತೆಸದರು. ಅದರಲ್ಲೂ ಜಾನ್ವಿಗೆ ಸರಿಯಾಗಿಯೇ ಬುದ್ಧಿ ಹೇಳಿದರು.

ಎಲ್ಲರ ಎದುರೇ ಸುಳ್ಳು ಹೇಳಿದ ಜಾನ್ವಿಗೆ ಬುದ್ಧಿ ಕಲಿಸಿದ ಸುದೀಪ್
Bigg Boss Kannada 12

Updated on: Oct 18, 2025 | 11:02 PM

ಅಶ್ವಿನಿ ಮತ್ತು ಜಾನ್ವಿ ಅವರುಗಳು ಬಿಗ್​​ಬಾಸ್ (Bigg Boss) ಮನೆಯ ಪ್ರಮುಖ ಸ್ಪರ್ಧಿಗಳು, ಮೊದಲ ಫಿನಾಲೆಗೆ ಅರ್ಹತೆಯನ್ನೂ ಪಡೆದಿದ್ದಾರೆ. ಮನೆಯಲ್ಲಿ ಇತರೆ ಸ್ಪರ್ಧಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಸಹ ಬೀರಿದ್ದಾರೆ. ಜಾನ್ವಿ ಹಾಗೂ ಅಶ್ವಿನಿ ಅವರು ಗೆಳೆಯರಾಗಿದ್ದು ಮನೆಯಲ್ಲಿ ತಮ್ಮನ್ನು ತಾವು ಬಹಳ ಮೆಚ್ಯೂರ್ಡ್ ಮತ್ತು ಟಫ್ ಸ್ಪರ್ಧಿಗಳೆಂದು ಬಿಂಬಿಸಿಕೊಂಡಿದ್ದಾರೆ. ಆದರೆ ಇಂದು ನಡೆದ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಈ ಇಬ್ಬರ ನಕಲಿ ಮುಖವಾಡವನ್ನು ಕಳಚಿ ಕಿತ್ತೆಸೆದರು.

ಬಿಗ್​​ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು ಕೇಳಿ ಬಂದಿದ್ದು ಗಿಲ್ಲಿ, ಚಂದ್ರಪ್ರಭಾ, ಮಲ್ಲಮ್ಮ, ಕಾವ್ಯಾ ಸೇರಿದಂತೆ ಇನ್ನೂ ಕೆಲವರು ಬಹಳ ಭಯ ಬಿದ್ದಿದ್ದರು. ಆದರೆ ಈ ಗೆಜ್ಜೆ ಸದ್ದಿಗೆ ರಕ್ಷಿತಾ ಕಾರಣ ಎಂದು ಅಶ್ವಿನಿ ಮತ್ತು ಕಾವ್ಯಾ ಅವರುಗಳು ಇಡೀ ಮನೆಯನ್ನು ನಂಬಿಸಿದ್ದರು. ರಕ್ಷಿತಾ, ಬಾತ್​​ರೂಂನಲ್ಲಿ ದೆವ್ವದ ಹಾಡು ಹಾಡುತ್ತಾಳೆ ಎಂದೆಲ್ಲ ಹೇಳಿದ್ದರು. ಇತರೆ ಸ್ಪರ್ಧಿಗಳು ಅದನ್ನು ನಂಬಿ, ರಕ್ಷಿತಾರನ್ನು ಪ್ರಶ್ನೆ ಮಾಡಿ, ರಕ್ಷಿತಾ ಅದರಿಂದ ಬಹಳ ಬೇಸರ ಪಟ್ಟುಕೊಂಡಿದ್ದರು. ಆದರೆ ಕೆಲವರಿಗೆ ಜಾನ್ವಿ ಅವರೇ ಮಾಡಿದ್ದರು ಎಂಬ ಅನುಮಾನ ಕೆಲವರಿಗೆ ಇತ್ತು. ಈ ಬಗ್ಗೆ ಜಾನ್ವಿಯನ್ನು ಕೆಲವರು ಪ್ರಶ್ನೆ ಮಾಡಿದ್ದರು. ಆಗ ಜಾನ್ವಿ ಆ ಆರೋಪವನ್ನು ನಿರಾಕರಿಸಿದ್ದರು.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್​​: ಮನೆಮಂದಿಗೆ ಸಂಜನಾ ಮೇಲೆ ಸಿಟ್ಟು, ಪ್ರೇಕ್ಷಕರಿಗೆ ಇಷ್ಟ

ಇಂದು ಸುದೀಪ್ ಅವರು ಪಂಚಾಯಿತಿ ನಡೆಸುವಾಗ ಗೆಜ್ಜೆ ಸದ್ದಿಗೆ ಸಂಬಂಧಿಸಿದಂತೆ ವಿಡಿಯೋ ತೋರಿಸಿದರು. ಮೊದಲಿಗೆ ತೋರಿಸಿದ ವಿಡಿಯೋನಲ್ಲಿ ರಕ್ಷಿತಾ ಅವರು ಬಾತ್​​ರೂಂನಲ್ಲಿ ಮಾಡಿದ್ದ ಡ್ಯಾನ್ಸ್ ಇನ್ನಿತರೆ ದೃಶ್ಯಗಳನ್ನು ತೋರಿಸಿದರು. ವಿಡಿಯೋ ಮುಗಿಯುತ್ತಲೇ ಜಾನ್ವಿ, ‘ಕೆಲವರಿಗೆಲ್ಲ ಆ ಗೆಜ್ಜೆ ಸದ್ದು ನಾನು ಮಾಡಿದ್ದು ಅನಿಸಿತ್ತು, ಈಗ ಎಲ್ಲರಿಗೂ ಸತ್ಯ ಗೊತ್ತಾಯ್ತು’ ಎಂದು ಆ ಸದ್ದು ಮಾಡಿದ್ದು, ದೆವ್ವ ಬಂದಂತೆ ಆಡಿದ್ದು ರಕ್ಷಿತಾ ಎಂದು ಪರೋಕ್ಷವಾಗಿ ಹೇಳಿದರು. ಆ ಬಳಿಕ ಸುದೀಪ್ ನಿಜವಾದ ವಿಡಿಯೋ ತೋರಿಸಿದರು. ಆ ವಿಡಿಯೋನಲ್ಲಿ ಜಾನ್ವಿ ಗೆಜ್ಜೆ ಭಾರಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಮಾತ್ರವಲ್ಲದೆ ಜಾನ್ವಿ ಮತ್ತು ಅಶ್ವಿನಿ ಇಬ್ಬರೂ ಮಾತನಾಡಿಕೊಂಡು ಸಂಚು ಮಾಡಿ ರಕ್ಷಿತಾರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದನ್ನು ಸುದೀಪ್ ತೋರಿಸಿದರು. ಜಾನ್ವಿ ಹಾಗೂ ಅಶ್ವಿನಿ ಬೇಕೆಂದೇ ರಕ್ಷಿತಾರನ್ನು ಟಾರ್ಗೆಟ್ ಮೇಲೆ ದಾಳಿ ಮಾಡಿದ್ದರು.

ಜಾನ್ವಿ-ಅಶ್ವಿನಿ ವರ್ತನೆಯ ಬಗ್ಗೆ ಅಸಮಾಧಾನದಿಂದಲೇ ಮಾತನಾಡಿದ ಸುದೀಪ್, ‘ನೀವು ಮಾಡಿದ್ದು ಅಧಿಕ ಪ್ರಸಂಗ, ಈ ರೀತಿಯ ವರ್ತನೆಗೆ ಒಂದು ಲಿಮಿಟ್ ಇರುತ್ತದೆ. ಇನ್ನೊಬ್ಬರಿಗೆ ಹರ್ಟ್ ಆಗುತ್ತಿದೆ ಎಂದಾಗ ಅದನ್ನು ನಿಲ್ಲಿಸಬೇಕು. ನೀವು ಮಾಡುತ್ತಿರುವ ಕೆಲಸದಿಂದ, ಮಾತಿನಿಂದ ಎದುರಿನವರಿಗೆ ನಗು ಬಂದರೆ ಅದು ಜೋಕು, ಎದುರಿಗಿರುವವರು ಅಳುತ್ತಿದ್ದಾರೆ ಎಂದರೆ ಅದು ಜೋಕ್ ಹೇಗಾಗುತ್ತೆ? ಎಂದು ಪ್ರಶ್ನಿಸಿದ ಸುದೀಪ್, ಒಬ್ಬರ ವ್ಯಕ್ತಿತ್ವ, ಗೌರವವನ್ನು ಆಟದ ಸಾಮಾನು ಮಾಡಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಅಬ್ಬರಿಸಿದರು ಸುದೀಪ್.

ಜಾನ್ವಿಗಂತೂ ತುಸು ಖಾರವಾಗಿಯೇ ಚಾಟಿ ಬೀಸಿದರು. ಸುದೀಪ್ ಅಷ್ಟೆಲ್ಲ ಹೇಳಿದ ಬಳಿಕವೂ ಸಹ ಜಾನ್ವಿ, ರಕ್ಷಿತಾ ಬಳಿ ಕ್ಷಮೆ ಕೇಳಲಿಲ್ಲ ಮಾತ್ರವಲ್ಲದೆ ಪಶ್ಚಾತಾಪವನ್ನೂ ಸಹ ಪಡಲಿಲ್ಲ. ಅದಕ್ಕೂ ಸಹ ಸುದೀಪ್ ಅವರು ಜಾನ್ವಿಗೆ ಕ್ಲಾಸ್ ತೆಗೆದುಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Sat, 18 October 25