
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಗುಳ್ಳೆನರಿ ಆಟ ಶುರುವಾಗಿದೆ. ಇಡೀ ಮನೆಯಲ್ಲಿ ಒಬ್ಬರು ಗುಳ್ಳೆನರಿ ಆಗಿದ್ದಾರೆ. ಅದು ಯಶಸ್. ಆದರೆ ಇನ್ನುಳಿದ ಸ್ಪರ್ಧಿಗಳಿಗೆ ಈ ಸತ್ಯ ತಿಳಿದಿಲ್ಲ. ಯಾರು ಗುಳ್ಳೆನರಿ ಎಂಬುದನ್ನು ಅವರು ಕಂಡುಹಿಡಿಯಬೇಕಿದೆ. ತಂಡದ ಒಳಗೇ ಇದ್ದುಕೊಂಡು ಆಟವನ್ನು ಕೆಡಿಸುವ ಟಾಸ್ಕ್ ಅನ್ನು ಗುಳ್ಳೆನರಿಗೆ ನೀಡಲಾಗಿದೆ. ಒಬ್ಬರಿಗೆ ಮತ್ತೊಬ್ಬರ ಮೇಲೆ ಅನುಮಾನ ಮೂಡುತ್ತಿದೆ. ಗಗನ್ ಅವರಿಗೆ ಗಾನವಿ ಮೇಲೆ ಅನುಮಾನ ಬಂದಿದೆ.
ಗಾನವಿ ಹಾಗೂ ಗಗನ್ ಚಿನ್ನಪ್ಪ ನಡುವೆ ಮೊದಲಿನಿಂದಲೂ ಕಿರಿಕ್ ಆಗುತ್ತಲೇ ಇದೆ. ಈ ಮೊದಲು ಅವರು ತೀರಾ ಹೀನಾಯ ಮಾತುಗಳಿಂದ ಪರಸ್ಪರ ನಿಂದಿಸಿಕೊಂಡಿದ್ದರು. ಬಳಿಕ ರಾಜಿ ಮಾಡಿಕೊಳ್ಳುವ ಪ್ರಯತ್ನ ನಡೆದಿದ್ದರೂ ಕೂಡ ನಂತರ ದಿನಗಳಲ್ಲಿ ಕಿರಿಕ್ ಮುಂದುವರಿಯುತ್ತಲೇ ಇದೆ. ಹಾಗಾಗಿ ಅವರಿಗೆ ಪರಸ್ಪರರ ಮೇಲೆ ಅನುಮಾನ ಇದೆ.
ಗಗನ್ ಚಿನ್ನಪ್ಪ ಪ್ರಕಾರ, ಗಾನವಿ ಅವರು ಮಾತನಾಡುವ ಶೈಲಿ ಬದಲಾಗಿದೆ. ಆದ್ದರಿಂದ ಗಾನವಿ ಅವರೇ ಗುಳ್ಳೆನರಿ ಎಂದು ಗಗನ್ ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಗಾನವಿ ಅವರು ಗುಳ್ಳೆನರಿ ಅಲ್ಲ. ಹಾಗಿದ್ದರೂ ಕೂಡ ಗಗನ್ ಪಾಲಿಗೆ ಗಾನವಿ ಅವರು ನಂಬಿಕೆದ್ರೋಹ ಮಾಡಿದರು. ತಮ್ಮ ವಿಶೇಷ ಅಧಿಕಾರ ಬಳಸಿ ಗಾನವಿ ಅವರು ಗಗನ್ ಅವರ ಗುಟ್ಟನ್ನು ರಟ್ಟು ಮಾಡಿದರು.
ಈ ಘಟನೆ ಬಳಿಕ ಗಗನ್ ಅವರಿಗೆ ಕೋಪ ಬಂತು. ‘ಈಗ ನನ್ನ ಗೇಮ್ ಶುರು. ಇನ್ಮೇಲೆ ನಿನ್ನನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇನೆ’ ಎಂದು ಗಗನ್ ಅವರು ತಿರುಗೇಟು ನೀಡಿದ್ದಾರೆ. ‘ಸಿಕ್ಕ ಸಿಕ್ಕ ಕಡೆಯಲ್ಲಿ ನನ್ನನ್ನು ಎಕ್ಸ್ಪೋಸ್ ಮಾಡಬೇಕು ಎಂಬುದು ಅವಳ ಉದ್ದೇಶ’ ಎಂದು ಗಾನವಿ ಬಗ್ಗೆ ತಾಂಡವ್ ಬಳಿ ಗಗನ್ ಅವರು ಹೇಳಿದ್ದಾರೆ. ಗಾನವಿ-ಗಗನ್ ನಡುವೆ ಇನ್ನಷ್ಟು ಬಿರುಕು ದೊಡ್ಡದಾಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 13’ ಫಿನಾಲೆ ಸಮೀಪಿಸುವಾಗ ಯಶಸ್ ಆಟಕ್ಕೆ ಆಘಾತ; ಸೌಂದರ್ಯಾಗೆ ಬೇಸರ
ಗಾನವಿ ಮತ್ತು ಆಸಿಯಾ ಅವರು ಬಿಗ್ ಬಾಸ್ ಮನೆಯಲ್ಲಿ ಯಾರಿಂದಲೂ ನಂಬಿಕಸ್ಥರ ಸ್ಥಾನ ಪಡೆದಿಲ್ಲ. ಅಲ್ಲದೇ ಆಸಿಯಾ ಅವರೇ ಗುಳ್ಳೆನರಿ ಎಂದು ಯಶಸ್ ಅವರು ಪದೇ ಪದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಆಸಿಯಾ ಅವರಿಗೆ ತೀವ್ರವಾಗಿ ನೋವಾಗಿದೆ. ಹಾಗಾಗಿ ಅವರು ಕಣ್ಣೀರು ಹಾಕಿದ್ದಾರೆ. ಆಟವನ್ನು ಅರ್ಧಕ್ಕೆ ತೊರೆಯಲು ಕೂಡ ತಾವು ಸಿದ್ಧ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.