ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ದಾರೆ, ತೇಜೋವಧೆ ಸಹಿಸಲ್ಲ: ಜಾಹ್ನವಿಯ ಮಾಜಿ ಪತಿ ಆಕ್ರೋಶ

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ನಿರೂಪಕಿಯಲ್ಲಿ ಜಾಹ್ನವಿ ಸ್ಪರ್ಧಿಯಾಗಿದ್ದಾರೆ. ಜಾಹ್ನವಿ ತಮ್ಮ ವಿಚ್ಛೇದನದ ಬಗ್ಗೆ ಕೆಲವು ವಿಷಯಗಳನ್ನು ಬಿಗ್​​ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು. ತಮ್ಮ ಪತಿಗೆ ಅಕ್ರಮ ಸಂಬಂಧ ಇತ್ತು ಹಾಗಾಗಿ ತಾವು ವಿಚ್ಛೇದನ ನೀಡಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ದಾರೆ, ತೇಜೋವಧೆ ಸಹಿಸಲ್ಲ: ಜಾಹ್ನವಿಯ ಮಾಜಿ ಪತಿ ಆಕ್ರೋಶ
Bigg Boss Janhvi

Updated on: Oct 05, 2025 | 6:04 PM

ಕಾರ್ಯಕ್ರಮ ನಿರೂಪಕಿ ಜಾಹ್ನವಿ ಅವರು ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಜಾಹ್ನವಿ ಅವರು ಬಿಗ್​​ಬಾಸ್​​ಗೆ ಪ್ರವೇಶಿಸುವ ಮೊದಲು ಗ್ರ್ಯಾಂಡ್ ಓಪನಿಂಗ್​​ನಲ್ಲಿ ತಮ್ಮ ಸಂಸಾರದ ಬಗ್ಗೆ ಹೇಳಿಕೊಂಡಿದ್ದರು. ತಮಗೆ ವಿಚ್ಛೇದನ ಆಗಿದ್ದ ಕುರಿತು ಹೇಳಿಕೊಂಡಿದ್ದರು. ತಮ್ಮ ಪತಿಗೆ ಎರಡನೇ ಸಂಬಂಧ ಇತ್ತು, ನನ್ನ ಜೊತೆಗಿದ್ದಾಗಲೇ ಅವರಿಗೆ ಮದುವೆ ಆಗಿ ಮಗು ಇತ್ತು ಎಂದು ಹೇಳಿದ್ದರು. ಇದೇ ಕಾರಣಕ್ಕೆ ತಾವು ವಿಚ್ಛೇದನ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರು ಜಾಹ್ನವಿ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದು, ಜಾಹ್ನವಿ ನನ್ನ ತೇಜೋವಧೆ ಮಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಮಾತ್ರವೇ ಅಲ್ಲದೆ ಕಾರ್ತಿಕ್ ಅವರ ಹಾಲಿ ಪತ್ನಿ ಸಹ ಜಾಹ್ನವಿ ಮಾಡಿರುವ ಆರೋಪಗಳ ಬಗ್ಗೆ ಗರಂ ಆಗಿದ್ದಾರೆ. ಜಾಹ್ನವಿ ಹಾಗೂ ಕಾರ್ತಿಕ್ ಮದುವೆ ಮುರಿಯಲು ತಾವು ಕಾರಣ ಅಲ್ಲ ಎಂದು ಕಾರ್ತಿಕ್ ಅವರ ಹಾಲಿ ಪತ್ನಿ ಹೇಳಿದ್ದಾರೆ. ಅಲ್ಲದೆ ಜಾಹ್ನವಿ ಸುಳ್ಳುಗಳನ್ನು ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಾಧ್ಯಮ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿಯ ಮಾಜಿ ಪತಿ ಕಾರ್ತಿಕ್, ‘ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು, ಚಿತ್ರದುರ್ಗದಲ್ಲಿ ನಮ್ಮ ಉದ್ಯಮ ಇತ್ತು, ಬೆಂಗಳೂರಿನಲ್ಲಿ ನಾನು ಐಟಿ ಕೆಲಸದಲ್ಲಿದ್ದೆ. ಆದರೆ ಮದುವೆ ಆಗಿ ಕೆಲ ಸಮಯದ ಬಳಿಕ ನನ್ನ ತಾಯಿಯೊಟ್ಟಿಗೆ ಜಾಹ್ನವಿಗೆ ಹೊಂದಾಣಿಕೆ ಆಗದ ಕಾರಣ ಜಾಹ್ನವಿ ಬಲವಂತದಿಂದ ಬೇರೆ ಮನೆ ಮಾಡಿಸಿದರು. ಬಳಿಕ ಸ್ವಂತ ಮನೆ ಬೇಕೆಂದು ಪಟ್ಟು ಹಿಡಿದ ಕಾರಣ ನಾನು ಅಪಾರ್ಟ್​​ಮೆಂಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡೆ’ ಎಂದಿದ್ದಾರೆ.

ಇದನ್ನೂ ಓದಿ:ರೆಬೆಲ್ ರಕ್ಷಿತಾ ಶೆಟ್ಟಿ ಮುಂದೆ ಮಂಕಾದ ಬಿಗ್​​ಬಾಸ್ ಮಂದಿ

ಆದರೆ ನನ್ನ ಕೆಲಸ ಹೋಗಿ, ಊರಿನ ಉದ್ಯಮವೂ ಡಲ್ ಆದ ಬಳಿಕ ಜಾಹ್ನವಿ ವರ್ತನೆ ಬದಲಾಯ್ತು. ಜಾಹ್ನವಿ ಉದ್ಯೋಗಕ್ಕೆ ಹೋಗಿ ಕೆಲ ಕಾಲ ಮನೆಯ ಇಎಂಐ ಅನ್ನು ಸಹ ಕಟ್ಟಿದರು. ಆದರೆ ಇಡೀ ಮನೆಯ ಸಾಲ ಅವರೇ ತೀರಿಸಿದರು ಎಂಬುದು ಸುಳ್ಳು, 60 ಸಾವಿರ ಸಂಬಳದಲ್ಲಿ 1.50 ಕೋಟಿಯ ಫ್ಲ್ಯಾಟ್ ಖರೀದಿ ಮಾಡಲು ಸಾಧ್ಯವಾ? ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.

ಕುಡಿದು ಬಂದು ಜಾಹ್ನವಿಯ ಮೇಲೆ ಹಲ್ಲೆ ಮಾಡಿದ ವಿಷಯದ ಬಗ್ಗೆ ಮಾತನಾಡಿರುವ ಅವರು, ‘ಹೌದು, ಹಲ್ಲೆ ಮಾಡಿರುವುದು ನಿಜ. ನಾನು ಜೊತೆಗಿದ್ದಾಗಲೂ ಬೇರೊಬ್ಬ ಗಂಡಸಿನ ಜೊತೆಗೆ ಸಲುಗೆಯಿಂದ ಇರುವುದು, ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ನೋಡಿದಾಗ ನನಗೆ ಸಿಟ್ಟು ಬಂದು ಹಾಗೆ ಮಾಡಿದ್ದೇನೆ’ ಎಂದಿದ್ದಾರೆ ಕಾರ್ತಿಕ್.

ನನ್ನ ತಂದೆ, ತಾಯಿ ಮೊಮ್ಮಗನನ್ನು ನೋಡಲು ಬಂದಾಗ ಕನಿಷ್ಟ ಸೌಜನ್ಯವನ್ನೂ ಅವರು ತೋರಿಸಲಿಲ್ಲ. ವಿಚ್ಛೇದನ ಆಗಿ ವರ್ಷಗಳೇ ಆದರೂ ಸಹ ನನ್ನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಹೀಗೆ ರಿಯಾಲಿಟಿ ಶೋಗಳಲ್ಲಿ ಮಾತನಾಡುತ್ತಿರುವುದು ಗಮನಿಸಿದರೆ ಅವರದ್ದು ವಿಕೃತ ಮನಸ್ಸು ಎಂಬುದು ಅರ್ಥವಾಗುತ್ತದೆ. ಮಗನ ಶಿಕ್ಷಣಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ನ್ಯಾಯಾಲಯ ಹೇಳಿದೆ. ಅದರಂತೆ ನಾನು ಅವರ ಖಾತೆಗೆ ಹಣ ಹಾಕುತ್ತಿದ್ದೇನೆ. ಎಷ್ಟೇ ಆಗಲಿ ಅವನು ನನ್ನ ಮಗ. ಆದರೆ ಜಾಹ್ನವಿ ತಮ್ಮ ಪಾಡಿಗೆ ತಾವು ಇದ್ದರೆ ಒಳ್ಳೆಯದು. ಹೀಗೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ್ದು ಹೇಳಿದರೆ ನಮ್ಮ ಕುಟುಂಬಕ್ಕೆ ಸಮಸ್ಯೆ ಆಗುತ್ತದೆ’ ಎಂದಿದ್ದಾರೆ ಕಾರ್ತಿಕ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Sun, 5 October 25