ಕಿಚ್ಚ ಸುದೀಪ್ (Sudeep) ನಟನೆಗೆ ಅಭಿಮಾನಿಗಳಿರುವಂತೆಯೇ ಅವರ ಬಿಗ್ಬಾಸ್ ನಿರೂಪಣೆಗೂ ಅಭಿಮಾನಿಗಳಿದ್ದಾರೆ. ಬಿಗ್ಬಾಸ್ ನಿರೂಪಣೆಯಲ್ಲಿ ಅವರದ್ದೇ ಒಂದು ಶೈಲಿ ಕಂಡು ಕೊಂಡಿರುವ ಸುದೀಪ್, ಮನೆಯಲ್ಲಿನ ಭಿನ್ನ-ಭಿನ್ನ ವ್ಯಕ್ತಿತ್ವದ ಹಿನ್ನೆಲೆಯ ಜನರನ್ನು ಹ್ಯಾಂಡಲ್ ಮಾಡುವ ರೀತಿ, ಸರಿ-ತಪ್ಪುಗಳನ್ನು ಹೇಳುವ ರೀತಿ, ಸ್ಪರ್ಧಿಗಳಲ್ಲಿ ಸ್ಪೂರ್ತಿ ತುಂಬುವ ರೀತಿ ಅತ್ಯುತ್ತಮ. ಇದೇ ಕಾರಣಕ್ಕೆ ಕಳೆದ ಹತ್ತು ಸೀಸನ್ ಹಾಗೂ ಒಂದು ಒಟಿಟಿ ಸೀಸನ್ಗೆ ಸುದೀಪ್ ಅವರೇ ನಿರೂಪಕರಾಗಿದ್ದಾರೆ. ನೂರಕ್ಕೂ ಹೆಚ್ಚು ಸ್ಪರ್ಧಿಗಳು ಮನೆಗೆ ಬಂದು ಹೋಗಿದ್ದಾರೆ ಆದರೆ ಸುದೀಪ್ ಮಾತ್ರ ಬದಲಾಗಿಲ್ಲ.
ವಾರಾಂತ್ಯದಲ್ಲಿ ಬರುವ ಸುದೀಪ್ ಹತ್ತು ಸೀಸನ್ನಿಂದಲೂ ನಿರೂಪಣೆ ಮಾಡುತ್ತಿರುವ ಸುದೀಪ್, ಹತ್ತನೇ ಸೀಸನ್ನ ಈ ಭಾನುವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ವೀಕ್ಷಕರಿಗೆ ಕ್ಷಮೆ ಕೇಳಿದರು. ತಾವು ವೈಯಕ್ತಿಕವಾಗಿ ಪ್ರೇಕ್ಷಕರ ಕ್ಷಮೆ ಕೇಳಿದ ಜೊತೆಗೆ ಬಿಗ್ಬಾಸ್ ಕಡೆಯಿಂದಲೂ ಕ್ಷಮಾಪಣೆ ಕೇಳುತ್ತಿರುವುದಾಗಿ ಹೇಳಿದರು. ಅದಕ್ಕೆ ಕಾರಣವಾಗಿದ್ದು ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್.
ನಾಮಿನೇಷನ್ ಪಟ್ಟಿಯಲ್ಲಿದ್ದ ವರ್ತೂರು ಸಂತೋಷ್ ಹೆಚ್ಚು ಮತಗಳನ್ನು ಪಡೆದುಕೊಂಡು ಸೇಫ್ ಆದರು. ಆದರೆ ವರ್ತೂರು ಸಂತೋಷ್ ಮಾತ್ರ ತಮಗೆ ಇಲ್ಲಿರುವುದು ಇಷ್ಟವಿಲ್ಲ ನಾನು ಹೊರಗೆ ಹೋಗಬೇಕು ಎಂದರು. ಸುದೀಪ್ ಸಾಕಷ್ಟು ಬಾರಿ ವರ್ತೂರು ಸಂತೋಷ್ ಅವರ ಮನವೊಲಿಕೆಗೆ ಯತ್ನಿಸಿದರು. ಸುಮಾರು 20 ನಿಮಿಷಗಳ ಕಾಲ ವರ್ತೂರು ಸಂತೋಷ್ ಬಳಿ ಸುದೀಪ್ ಮಾತನಾಡಿದರು. ವರ್ತೂರು ಸಂತೋಷ್ಗೆ ಇರುವ ಆತಂಕಗಳನ್ನು ನಿವಾರಣೆ ಮಾಡುವ ಪ್ರಯತ್ನ ಮಾಡಿದರು. ಆದರೆ ವರ್ತೂರು ಸಂತೋಷ್ ಸುದೀಪ್ ಮಾತು ಕೇಳಲಿಲ್ಲ.
ಇದನ್ನೂ ಓದಿ:Bigg Boss Kannada: ಅತಿಯಾಗಿ ಕೂಗಾಡಿದವರಿಗೆ ಮತ್ತೆ ಕ್ಲಾಸ್ ತೆಗೆದುಕೊಳ್ತಾರಾ ಕಿಚ್ಚ ಸುದೀಪ್?
ವರ್ತೂರು ಸಂತೋಷ್ಗೆ ಕೇವಲ 24 ಗಂಟೆಯಲ್ಲಿ 34.15 ಲಕ್ಷ ಮತಗಳು ಬಂದಿರುವ ವಿಷಯವನ್ನು ವೇದಿಕೆ ಮೇಲೆ ಬಹಿರಂಗಗೊಳಿಸಿದರು. ಆಗಲೂ ಸಹ ವರ್ತೂರು ಸಂತೋಷ್ ಮತ್ತೆ ಹೋಗುವ ಮಾತನ್ನಾಡಿದರು. ಆಗ ಸುದೀಪ್ ಅವರು, ವರ್ತೂರು ಸಂತೋಷ್ಗೆ ಮತ ಹಾಕಿರುವ ಎಲ್ಲ ಪ್ರೇಕ್ಷಕರ ಬಳಿ ವೈಯಕ್ತಿಕವಾಗಿ ಹಾಗೂ ಬಿಗ್ಬಾಸ್ ಕಡೆಯಿಂದ ಕ್ಷಮೆ ಇರಲಿ ಎಂದು ಕೈ ಮುಗಿದರು. ಜನರ ತೀರ್ಪಿಗೆ ವಿರುದ್ಧವಾಗಿ ನಾನು ಹೋಗುವುದಿಲ್ಲ. ನಾನು ನಾಮಿನೇಷನ್ ಪ್ರಕ್ರಿಯೆ ರದ್ದು ಮಾಡುತ್ತಿದ್ದೇನೆ. ಇನ್ನುಳಿದಿದ್ದು ನಿಮ್ಮ ನಿರ್ಣಯ ಎಂದು ಹೇಳಿ ವೇದಿಕೆ ಬಿಟ್ಟು ತೆರಳಿಯೇ ಬಿಟ್ಟರು ಸುದೀಪ್.
ಕಳೆದ ಹತ್ತು ಸೀಸನ್ಗಳಿಂದಲೂ ಬಿಗ್ಬಾಸ್ ಶೋ ನಡೆಸಿಕೊಂಡು ಬರುತ್ತಿರುವ ಸುದೀಪ್ ಬಹುಷಃ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಬಳಿ ಕ್ಷಮೆ ಕೇಳಿದ್ದಾರೆ. ವರ್ತೂರು ಸಂತೋಷ್ ಮನೆಯಲ್ಲಿ ಉಳಿದರಾ ಅಥವಾ ಹೊರಟು ಬಿಟ್ಟರಾ ಎಂಬುದನ್ನು ಭಾನುವಾರದ ಎಪಿಸೋಡ್ನಲ್ಲಿ ತೋರಿಸಿಲ್ಲ. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 pm, Sun, 12 November 23