ಬಿಗ್ಬಾಸ್ (Bigg Boss) ಗುರುವಾರದ ಮನೆಗೆ ಹಠಾತ್ತಾಗಿ ಮಾಜಿ ಬಿಗ್ಬಾಸ್ ವಿಜೇತ ಪ್ರಥಮ್ (Pratham) ಎಂಟ್ರಿ ಆಯಿತು. ಕಳೆದ ಬಾರಿ ‘ಒಳ್ಳೆ ಹುಡುಗ’ ಬಂದಿದ್ದ ಪ್ರಥಮ್ ಈ ಬಾರಿ ‘ಲಾರ್ಡ್ ಪ್ರಥಮ್’ ಆಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟರು. ‘ಐ ಆಮ್ ವಿಲನ್’ ಎಂದು ಸರ್ವಾಧಿಕಾರಿಯಂತೆ ಸಮವಸ್ತ್ರ ತೊಟ್ಟು ಖಡಕ್ ಆಗಿ ಎಂಟ್ರಿ ಕೊಟ್ಟ ಪ್ರಥಮ್, ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಪ್ರಥಮ್ ಆಟಾಟೋಪಕ್ಕೆ ಸ್ಪರ್ಧಿಗಳು ಅಲ್ಲಾಡಿ ಹೋದರು.
ಪ್ರಥಮ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ತಮ್ಮ ಶಿಸ್ತಿನ ಕಠು ಮಾತುಗಳಿಂದ ಎಲ್ಲರಿಗೂ ಭಯ ಮೂಡಿಸಿದರು. ಎಲ್ಲರೂ ತಮಗೆ ಗೌರವ ನೀಡುವಂತೆಯೂ, ಲಾರ್ಡ್ ಪ್ರಥಮ್ ಎಂದೇ ಸಂಭೋದಿಸುವಂತೆಯೂ ಆದೇಶ ಮಾಡಿದರು. ಕೆಲವರನ್ನಂತೂ ಸಖತ್ ಆಗಿ ಆಟ ಆಡಿಸಿದರು. ತಮ್ಮ ಅನುಮತಿ ಇಲ್ಲದೆ ತುಟಿ ಬಿಚ್ಚಿದವರಿಗೆ ಮಾತಿನ ಛಾಟಿ ಬೀಸಿದ ಪ್ರಥಮ್, ಥೇಟ್ ಸರ್ವಾಧಿಕಾರಿಯಂತೆ, ಕೈ ಒತ್ತಲು ಕೆಲವರನ್ನು, ಊಟ ತಿನ್ನಿಸಲು ಕೆಲವರನ್ನು ನೇಮಿಸಿಕೊಂಡರು. ತಮ್ಮ ಆದೇಶ ಮೀರಿದವರನ್ನು, ತಮಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದರು.
ಜೊತೆಗೆ ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಸೂಕ್ತ ಸಲಹೆಗಳನ್ನು ನೀಡಿದರು, ಅವರು ಮನೆಯಲ್ಲಿ ಮಾಡುತ್ತಿರುವ ತಪ್ಪುಗಳು, ಸುಧಾರಿಸಿಕೊಳ್ಳಬೇಕಾದ ವಿಧಾನ ಎಲ್ಲವನ್ನೂ ತಮ್ಮದೇ ಶೈಲಿಯಲ್ಲಿ ವಿವರಿಸಿದರು. ಗೌರೀಶ್ ಅಕ್ಕಿಯವರು ಹೆಚ್ಚು ಮಾತನಾಡಬೇಕೆಂದು, ಸಂತೋಶ್ ಹಳ್ಳಿಕಾರ್ ಸಹ ಸರಿಯಾಗಿ ಎಲ್ಲರೊಟ್ಟಿಗೆ ಬೆರೆಯಬೇಕೆಂದು, ಮೈಖಲ್ ಮನೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳಬೇಕೆಂದು ಹೀಗೆ ಎಲ್ಲರಿಗೂ ವಿವಿಧ ಸಲಹೆಗಳನ್ನು ಪ್ರಥಮ್ ನೀಡಿದರು. ಡ್ರೋನ್ ಪ್ರತಾಪ್ಗೆ ವಿಶೇಷ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಜೊತೆಗೆ ಮನೆಯ ಇತರೆ ಸದಸ್ಯರಿಗೆ ಡ್ರೋನ್ ಪ್ರತಾಪ್ ಅವರ ಹೊರಗಿನ ವಿಷಯಕ್ಕೆ ಇಲ್ಲಿ ಅವರನ್ನು ಹೀಗಳೆಯುವುದು ಬೇಡ, ಬದಲಿಗೆ ಮನೆಯ ಒಳಗಿನ ಅವರ ವರ್ತನೆ ಬಗ್ಗೆ ಟೀಕೆ ಮಾಡಿ ಶಿಕ್ಷೆ ನೀಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್ಬಾಸ್ ಮನೆಯಲ್ಲಿ ಶುರು ಅಸಲಿ ಆಟ
ಪ್ರಥಮ್ರ ಸರ್ವಾಧಿಕಾರಿತನ ಬಿಗ್ಬಾಸ್ ಮನೆಯೊಳಗಿನವರಿಗೆ ಪೀಕಲಾಟ ತಂದರೆ ನೋಡುಗರಿಗೆ ಸಖತ್ ಮಜಾ ಕೊಟ್ಟಿರದೇ ಇರದು. ಅದರಲ್ಲಿಯೂ ಕಾರ್ತಿಕ್ ಅವರನ್ನು ಎದುರಿಗೆ ನಿಲ್ಲಿಸಿಕೊಂಡು, ಸಂಗೀತಾ ಅವರು ತಮಗೆ ಊಟ ತಿನ್ನಿಸುವಂತೆ ಹೇಳಿದ್ದು, ಬಾತ್ರೂಂ ಬಳಸುತ್ತೇನೆ ಎಂದು ಕ್ಯಾಪ್ಟನ್ ಸ್ನೇಹಿತ್ ಅಂದಾಗ ಹೇಳಿದ ಡೈಲಾಗ್ಗಳು ನೋಡುಗರಿಗೆ ಮಾತ್ರವಲ್ಲ ಮನೆಯ ಸದಸ್ಯರೂ ನಗುವಂತೆ ಮಾಡಿತು.
ಕೊನೆಗೆ ಸಮರ್ಥರು ಹಾಗೂ ಅಸಮರ್ಥರಿಗೆ ಟಾಸ್ಕ್ ಅನ್ನು ಸಹ ಮಾಡಿಸಿದ ಪ್ರಥಮ್, ಎಲ್ಲರಿಗೂ ಶುಭಾಶಯ ತಿಳಿಸಿ ಮನೆಯಿಂದ ಹೊರನಡೆದರು. ಪ್ರಥಮ್ ಆಗಮನದಿಂದ ಮನೆಯ ಕೆಲ ಸದಸ್ಯರು ಉತ್ಸಾಹಿತರಾದರೆ, ಪ್ರಥಮ್ ರ ಕಡು ಮಾತುಗಳಿಂದ ಕೆಲವರಿಗೆ ಇರಿಸು ಮುರುಸು ಸಹ ಆಯಿತು. ಬಿಗ್ಬಾಸ್ ಕನ್ನಡ ಸೀಸನ್ 10 ಜಿಯೋ ಸಿನಿಮಾಸ್ ಹಾಗೂ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 pm, Thu, 12 October 23