ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ಬಾಸ್ (Bigg Boss) ಮತ್ತೆ ಬಂದಿದೆ. ಸುದೀಪ್ ಹುಟ್ಟುಹಬ್ಬದ ದಿನವೇ ಹೊಸ ಸೀಸನ್ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಆದರೆ ಪ್ರೋಮೋನಲ್ಲಿ ಸುದೀಪ್ ಇಲ್ಲ ಬದಲಿಗೆ ‘ಬಿಗ್ಬಾಸ್’ ಮಾತ್ರವೇ ಇದ್ದಾರೆ. ಈ ಹಿಂದಿನ ಬಿಗ್ಬಾಸ್ಗಳಿಗಿಂತಲೂ ಈ ಬಾರಿಯ ಬಿಗ್ಬಾಸ್ ಭಿನ್ನವಾಗಿರಲಿದೆ ಎಂದು ಪ್ರೋಮೋನಲ್ಲಿ ಹೇಳಲಾಗಿದೆ. ಈವರೆಗೆ ಒಂಬತ್ತು ಯಶಸ್ವಿ ಸೀಸನ್ ಅನ್ನು ಬಿಗ್ಬಾಸ್ ಮುಗಿಸಿದ್ದು, ಹತ್ತನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ.
ಮನೆಯಲ್ಲಿ ಕ್ಯಾಮೆರಾಗಳನ್ನಿಟ್ಟು ಅವರ ಚಲನ ವಲನ, ಮಾತುಗಳನ್ನು ಪ್ರೇಕ್ಷಕರಿಗೆ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ತೋರಿಸಲಾಗುತ್ತದೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋ ತುಸು ಭಿನ್ನವಾಗಿದ್ದು, ಈ ಬಾರಿ ರಿಯಾಲಿಟಿ ಶೋನ ಫಾರ್ಮ್ಯಾಟ್ ಸಹ ಭಿನ್ನವಾಗಿರುವ ಸುಳಿವು ನೀಡುತ್ತಿದೆ. ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೋನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋನಲ್ಲಿ ತೋರಿಸಲಾಗಿದೆ. ಪ್ರೋಮೋದ ಅಂತ್ಯದಲ್ಲಿ ಈ ಬಾರಿ ಬಿಗ್ಬಾಸ್ ‘ಸಮ್ಥಿಂಗ್ ಸ್ಪೆಷಲ್’ ಆಗಿರಲಿದೆ ಎಂದು ಹೇಳಿರುವುದು ಕುತೂಹಲವನ್ನು ದ್ವಿಗುಣಗೊಳಿಸಿದೆ.
ಈ ಬಾರಿಯ ಬಿಗ್ಬಾಸ್ something special!!!
ನಿಮಗಿಷ್ಟ ಆಗುವ ಸ್ಪೆಷಲ್ ಏನು? ಕಮೆಂಟ್ ಮಾಡಿ!#BiggBossKannada #BBK10 #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/WfORUvnKFE— Colors Kannada (@ColorsKannada) September 2, 2023
ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್ ಇಲ್ಲ. ಅಲ್ಲದೆ ಬಿಗ್ಬಾಸ್ 10 ಎಂದು ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಸಹ ಪ್ರೋಮೋನಲ್ಲಿ ನೀಡಲಾಗಿಲ್ಲ. ಅದರ ಜೊತೆಗೆ ಬಿಗ್ಬಾಸ್ 10ನೇ ಸೀಸನ್ನ ಪ್ರೋಮೋ ಜಾಹಿರಾತು ಇದಾಗಿರುವ ಕಾರಣ, ಬಿಗ್ಬಾಸ್ ಒಟಿಟಿಯನ್ನು ಈ ಬಾರಿ ಕೈಬಿಡಲಾಗಿದೆಯೇ ಎಂಬ ಅನುಮಾನ ಇನ್ನಷ್ಟು ದಟ್ಟವಾಗಿದೆ. ಕಳೆದ ಬಾರಿ ಬಿಗ್ಬಾಸ್ ಒಟಿಟಿ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು, ಹಾಗಿದ್ದಾಗಿಯೂ ಈ ಬಾರಿ ಅದನ್ನು ಕೈಬಿಟ್ಟಿದ್ದಕ್ಕೆ ಕಾರಣವೇನು? ಇನ್ನೂ ಹಲವು ಪ್ರಶ್ನೆಗಳು ಬಿಗ್ಬಾಸ್ ಹೊಸ ಸೀಸನ್ ಸುತ್ತ ಇದ್ದು, ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಆಯೋಜಕರೇ ಉತ್ತರ ನೀಡುವ ನಿರೀಕ್ಷೆ ಇದೆ.
ಹಿಂದಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಿಗ್ಬಾಸ್ ಸೀಸನ್ ಪ್ರಸಾರ ಆಗಿರುವುದು ಕನ್ನಡದಲ್ಲಿಯೇ ಆಗಿದೆ. ಮೊದಲ ಸೀಸನ್ನಿಂದಲೂ ಸುದೀಪ್ ಒಬ್ಬರೇ ಬಿಗ್ಬಾಸ್ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಸುದೀಪ್ ಅಲ್ಲದೆ ಇನ್ಯಾವ ನಟರೂ ಸಹ ಬಿಗ್ಬಾಸ್ ನಿರೂಪಣೆ ಮಾಡಲಾರರು ಎಂಬುವಂತೆ ಆಗಿದೆ. ಹಾಗಾಗಿಯೇ ಈ ಬಾರಿಯೂ ಸುದೀಪ್ ಅವರೇ ನಿರೂಪಣೆ ಮಾಡುವುದು ಬಹುತೇಕ ಪಕ್ಕಾ. ಹಲವು ವರ್ಷಗಳಿಂದ ಕಲರ್ಸ್ನ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ಬಾಸ್ ಆಯೋಜನೆ ಮಾಡುತ್ತಿದ್ದರು. ಆದರೆ ಈ ಬಾರಿ ಅವರು ಆಯೋಜಕರಾಗಿಲ್ಲ, ಬದಲಿಗೆ ಬೇರೊಬ್ಬರು ಈ ಜವಾಬ್ದಾರಿ ಹೊರಬೇಕಾಗಿದೆ. ಹಾಗಾಗಿ ಈ ಬಾರಿಯ ಬಿಗ್ಬಾಸ್ ಹೇಗೆ ಪ್ರಸಾರವಾಗಲಿದೆ, ಪರಮೇಶ್ವರ್ ಗುಂಡ್ಕಲ್ ಗೈರು ಹಾಜರಿ ಶೋನ ಗುಣಮಟ್ಟದ ಮೇಲೆ ಪ್ರಭಾವ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಗ್ಬಾಸ್ ಪ್ರಾರಂಭವಾಗುತ್ತಿದೆ. ಅಂತೆಯೇ ಕನ್ನಡದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ