ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

|

Updated on: Oct 21, 2023 | 11:27 PM

Bigg Boss 10: ಕಳೆದ ಒಂಬತ್ತು ಬಿಗ್​ಬಾಸ್ ಸೀಸನ್​​ಗಳನ್ನು ನಿರೂಪಣೆ ಮಾಡುತ್ತಾ ಬಂದಿರುವ ನಟ ಸುದೀಪ್, ಇಷ್ಟು ವರ್ಷಗಳಲ್ಲಿ ಎಂದೂ ಬಳಸದ ವಿಶೇಷ ಅಧಿಕಾರವನ್ನು ಈ ಸೀಸನ್​ನ ವಾರಾಂತ್ಯದ ಎಪಿಸೋಡ್​ನಲ್ಲಿ ಬಳಸಿದ್ದಾರೆ. ಏನದು ಅಧಿಕಾರ?

ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್
ಕಿಚ್ಚ ಸುದೀಪ್
Follow us on

ಈಗ ಬಿಗ್​ಬಾಸ್ 10ನೆ ಸೀಸನ್ (Bigg Boss Kannada Season 10) ನಡೆಯುತ್ತಿದೆ. ಕಳೆದ ಒಂಬತ್ತು ಸೀಸನ್ ಅನ್ನು ನಟ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಜೊತೆಗೆ ಒಂದು ಒಟಿಟಿ ಸೀಸನ್ ಅನ್ನೂ ಸಹ ನಿರೂಪಣೆ ಮಾಡಿದ್ದಾರೆ. ಆದರೆ ಇಷ್ಟು ವರ್ಷ, ಇಷ್ಟು ಸೀಸನ್​ನಲ್ಲಿ ಬಳಸದ ಅಧಿಕಾರವೊಂದನ್ನು ಸುದೀಪ್ 10ನೇ ಸೀಸನ್​ನ ಇಂದಿನ (ಅಕ್ಟೋಬರ್ 21) ಎಪಿಸೋಡ್​ನಲ್ಲಿ ಬಳಸಿದರು. ಸ್ಪರ್ಧಿಗಳ ಮೇಲೆ ತೀವ್ರ ಅಸಮಾಧಾನ, ಅಸಂತೃಪ್ತಿ ವ್ಯಕ್ತಪಡಿಸಿದ ಸುದೀಪ್, ಇಂದಿನ ಎಪಿಸೋಡ್​ನಲ್ಲಿ ಮನೆಯ ಸ್ಪರ್ಧಿಗಳಿಗೆ ತುಸು ಖಾರವಾಗಿಯೇ ಪ್ರಶ್ನೆಗಳನ್ನು ಕೇಳಿದರು, ಟೀಕೆಗಳನ್ನು ಮಾಡಿದರು.

ಎಪಿಸೋಡ್ ಆರಂಭವಾದಾಗ ಮೊದಲಿಗೆ ತಮಾಷೆ ಮಾಡುತ್ತಾ ಸ್ಪರ್ಧಿಗಳನ್ನು ಮಾತನಾಡಿಸುತ್ತಿದ್ದ ನಟ ಸುದೀಪ್ ಈ ಬಾರಿ ಎಪಿಸೋಡ್​ನ ಆರಂಭದಲ್ಲಿ ಸ್ಪರ್ಧಿಗಳ ಮೇಲಿನ ತಮ್ಮ ಅಸಮಾಧಾನ ಪ್ರದರ್ಶಿಸಿದರು. ಕಳೆದ ವಾರ ಎರಡು ತಂಡಗಳಿಗೆ ಕ್ಯಾಪ್ಟನ್ ಆಗಿದ್ದ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನು ಮಾತ್ರವೇ ಸೋಫಾ ಮೇಲೆ ಕೂರಿಸಿ, ಉಳಿದ ಎಲ್ಲರನ್ನೂ ಹಿಂದೆ ನಿಲ್ಲಿಸಿದ ಸುದೀಪ್, ಇಬ್ಬರು ನಾಯಕರನ್ನು ಆಯ್ಕೆ ಮಾಡಿ ಎಂದಾಗ ಎಲ್ಲರೂ ಒಟ್ಟಿಗೆ ಕಾರ್ತಿಕ್ ಹಾಗೂ ವಿನಯ್ ಹೆಸರು ಹೇಳಿದರಲ್ಲ, ನಾನು ಕ್ಯಾಪ್ಟನ್ ಆಗಬಲ್ಲೆ ಎಂದು ನಿಮಗೆ ಅನ್ನಿಸಲೇ ಇಲ್ಲವೇ ಎಂದು ಪ್ರಶ್ನಿಸಿದರು.

ಈ ಮನೆಗೆ ಸುಮ್ಮನೆ ಬಂದಿದ್ದರೆ, ಸಿಕ್ಕ ಅವಕಾಶವನ್ನು ಬೇರೆಯವರಿಗಾಗಿ ತ್ಯಾಗ ಮಾಡಲು ಬಂದಿದ್ದರೆ, ಆರಾಮವಾಗಿ ಇದ್ದು ಹೋಗಲು ಬಂದಿದ್ದರೆ ಈಗಲೇ ಮನೆಗೆ ಹೊರಟು ಹೋಗಿ ಎಂದು ಖಾರವಾಗಿ ನುಡಿದ ಸುದೀಪ್, ಇಷ್ಟು ವರ್ಷಗಳಲ್ಲಿ ಎಂದೂ ಬಳಸದ ಅಧಿಕಾರವನ್ನು ಇಂದು ಬಳಸುತ್ತೇನೆ ಎಂದು ಹೇಳಿ, ಬಿಗ್​ಬಾಸ್ ಮನೆಯ ಗೇಟ್ ಓಪನ್ ಮಾಡಿಸಿದರು. ಯಾರು ಸುಮ್ಮದೆ ಇದ್ದು ಬರಲು, ತ್ಯಾಗ ಮಾಡಲು ಬಂದಿದ್ದೀರೋ ಅವರು ಈ ಕೂಡಲೇ ಮನೆ ಬಿಟ್ಟು ಹೊರಡಿ ಎಂದರು. ಆದರೆ ಯಾರೂ ಮನೆ ಬಿಟ್ಟು ಹೋಗಲಿಲ್ಲ.

ಇದನ್ನೂ ಓದಿ:ಹಾಲಿ ಕ್ಯಾಪ್ಟನ್​ಗೆ ಸೋಲುಣಿಸಿ ಬಿಗ್​ಬಾಸ್ ಮನೆಗೆ ಕ್ಯಾಪ್ಟನ್ ಆದ ಬುಲೆಟ್ ರಕ್ಷಕ್: ಮುಂದಿದೆ ದೊಡ್ಡ ಸವಾಲು

ವಿಶೇಷವಾಗಿ ಈ ಬಾರಿಯ ಮಹಿಳಾ ಸ್ಪರ್ಧಿಗಳ ಮೇಲೆ ಬೇಸರ ವ್ಯಕ್ತಪಡಿಸಿದ ಸುದೀಪ್, ಈ ವರೆಗಿನ ಒಂಬತ್ತು ಸೀಸನ್​ನಲ್ಲಿ ಗೆದ್ದರುವುದು ಒಬ್ಬ ಮಹಿಳಾ ಸ್ಪರ್ಧಿ ಮಾತ್ರ. ನೀವು ಹೀಗೆ ಅವಕಾಶ ಸಿಕ್ಕಾಗ ಪುರುಷನನ್ನು ಕ್ಯಾಪ್ಟನ್ ಅಥವಾ ಇತರೆಯನ್ನಾಗಿ ಆಯ್ಕೆ ಮಾಡುತ್ತಾ ಹೋಗುತ್ತಾ, ನಿಮಗೆ ನೀವೆ ನಿಮ್ಮನ್ನು ವೀಕ್ ಎಂದು ಪ್ರೂವ್ ಮಾಡಿಕೊಳ್ಳುತ್ತಿದ್ದೀರಿ ಎಂದು ಬುದ್ಧಿವಾದ ಹೇಳಿದರು.

ಇದರ ಜೊತೆಗೆ ವಿನಯ್ ಹಾಗೂ ಸಂಗೀತಾ ನಡುವಿನ ವಿವಾದ, ಭಾಗ್ಯಶ್ರೀ ಹಾಗೂ ವಿನಯ್ ನಡುವಿನ ಜಗಳ, ತುಕಾಲಿ ಸಂತು ಹಾಗೂ ಇಶಾನಿ ನಡುವಿನ ವಿವಾದ ಇನ್ನೂ ಹಲವು ವಿಷಯಗಳ ಬಗ್ಗೆ ಸುದೀಪ್ ಮಾತನಾಡಿದರು. ಪ್ರತಿಯೊಬ್ಬ ಸ್ಪರ್ಧಿಯ ಜೊತೆಗೂ ಮಾತನಾಡಿ ಅವರು ಈ ವಾರ ಹೇಗೆ ಆಡಿದರು, ಮುಂದೆ ಹೇಗಿರಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದರು. ಸುದೀಪ್ ಅವರ ಮಾತುಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿರುವುದಾಗಿ ಮನೆಯ ಸ್ಪರ್ಧಿಗಳು ಹೇಳಿದರು. ಹಾಗಾಗಿ ಮುಂದಕ್ಕೆ ಆಟ ಇನ್ನೂ ಗಂಭೀರವಾಗುವ ಸಾಧ್ಯತೆ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 pm, Sat, 21 October 23