
ಬಿಗ್ಬಾಸ್ ಮನೆಯಲ್ಲಿ ಬೇರೆ ಬೇರೆ ರೀತಿಯ ಹಿನ್ನೆಲೆ ಉಳ್ಳವರು ಒಟ್ಟಿಗೆ ಬದುಕುತ್ತಾರೆ. ಬಹಳ ಸುಖವಾಗಿ ಬಂದವರು, ಪ್ರತಿ ಕ್ಷಣವೂ ಹೋರಾಡಿ ಸರ್ವೈವ್ ಆದವರು, ಭವಿಷ್ಯದ ಬಗ್ಗೆ ಭಯ ಇರುವವರು, ಭೂತಕಾಲದಲ್ಲಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಬಂದವರು ಹೀಗೆ ಹಲವು ರೀತಿಯ ವ್ಯಕ್ತಿತ್ವದವರು ಬಂದಿದ್ದಾರೆ. ಬಿಗ್ಬಾಸ್ ಮನೆಗೆ ಈಗ ಪಕ್ಕಾ ಹೋರಾಟಗಾರ್ತಿ ಬಂದಿದ್ದಾರೆ. ಇವರು ಜೀವನದ ಜೊತೆಗೆಹೋರಾಡಿ ಗೆದ್ದವರು.
ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿ’ಯ ನಟಿ ಅಶ್ವಿನಿ ಅವರು ಇದೀಗ ಬಿಗ್ಬಾಸ್ಗೆ ಬಂದಿದ್ದಾರೆ. ಅಶ್ವಿನಿ ಅವರ ಜೀವನ ಹೋರಾಟದಿಂದಲೇ ತುಂಬಿತ್ತು. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಅವರೇ ಹೇಳಿಕೊಂಡಿರುವಂತೆ, ಎಲ್ಲರಿಗೂ ಪೋಷಕರೆಂದರೆ ಪ್ರೀತಿ, ಭಯವಾದರೆ ಪೋಷಕರ ಬಳಿ ಹೋಗುತ್ತಾರೆ. ಆದರೆ ಪೋಷಕರಿಂದಲೇ ಭಯವಾದರೆ? ಹಾಗಾಗಿ ನಾನು ಪೋಷಕರನ್ನು ಬಿಟ್ಟು ಬಂದಿದ್ದೆ’ ಎಂದಿದ್ದಾರೆ.
ಸಣ್ಣ ವಯಸ್ಸಿಗೆ ಬೆಂಗಳೂರಿಗೆ ಬಂದ ಅಶ್ವಿನಿ, ನಿರೂಪಕಿ ಆಗಿ ಸೇರಿಕೊಂಡರಂತೆ. ಆದರೆ ಅದರಲ್ಲಿ ಅವರಿಗೆ ನಿರಾಕರಣೆ ಎದುರಾಯ್ತಂತೆ. ಮತ್ತೆ ಹೋರಾಟಕ್ಕೆ ನಿಂತ ಅಶ್ವಿನಿ, ನಟಿಯಾಗಿ ಗುರುತಿಸಿಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಹಲವು ಸಣ್ಣ-ಪುಟ್ಟ ಧಾರಾವಾಹಿಗಳಲ್ಲಿ ನಟಿಸಿ ಕೊನೆಗೆ ‘ಮುದ್ದುಲಕ್ಷ್ಮಿ’ ಯಿಂದ ರಾಜ್ಯದ ಜನರಿಗೆ ಹತ್ತಿರವಾಗಿದ್ದಾರೆ. ಮೈಸೂರು ಮೂಲದ ಅಶ್ವಿನಿ, ಈಗ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
‘ಮುದ್ದುಲಕ್ಷ್ಮಿ’ಯಲ್ಲಿ ಬಲು ತಾಳ್ಮೆಯ, ಸಹಿಷ್ಣುವಾದ, ಎಲ್ಲರಿಂದಲೂ ಕಡೆಗಣೆಗೆ ಒಳಗಾಗುವ ಯುವತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಆ ಪಾತ್ರಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನ ವ್ಯಕ್ತಿತ್ವವಂತೆ ಅಶ್ವಿನಿ ಅವರದ್ದು.
ಬಿಗ್ಬಾಸ್ ವೇದಿಕೆ ಮೇಲೆ ಸಹ ಸುದೀಪ್ ಅವರು, ಅಶ್ವಿನಿ ಅವರನ್ನು ಪೋಷಕರ ಬಗ್ಗೆ ಕೇಳಿದರು. ನಿಮ್ಮ ಪೋಷಕರು ಈ ವರೆಗೆ ನಿಮ್ಮನ್ನು ಸಂಪರ್ಕಿಸಿ ವಾಪಸ್ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರಾ? ಎಂದು ಕೇಳಿದರು. ಹೌದು, ಕಳೆದ ಆರು ತಿಂಗಳ ಹಿಂದೆ ಕರೆ ಮಾಡಿದ್ದರು, ಆದರೆ ನಾನು ಹೋಗಲಿಲ್ಲ. ಅವರು ನನ್ನ ಕುಟುಂಬದವರಲ್ಲ. ನನ್ನ ಕುಟುಂಬದವರು ಎಂದಿಗೂ ನನ್ನನ್ನು ಪ್ರೀತಿಸಲಿಲ್ಲ, ನನ್ನನ್ನವರಲ್ಲದೇ ಇರುವವರೇ ನನ್ನ ಬೆಳವಣಿಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Sun, 28 September 25