
ದಿನದಿಂದ ದಿನಕ್ಕೆ ರಾಶಿಕಾ ಶೆಟ್ಟಿ (Rashika Shetty) ಅವರು ವೀಕ್ಷಕರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ. ಅವರ ವರ್ತನೆಯಲ್ಲಿ ನೆಗೆಟಿವ್ ಅಂಶಗಳು ಎದ್ದು ಕಾಣುತ್ತಿವೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆರಂಭ ಆದಾಗ ಅವರಲ್ಲಿ ಇದ್ದ ವರ್ತನೆಗೂ ಪ್ರಸ್ತುತ ಇರುವ ವರ್ತನೆಗೂ ಭಾರಿ ವ್ಯತ್ಯಾಸ ಇದೆ. ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ರಾಶಿಕಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ‘ಈ ವಾರ ಕಿಚ್ಚ ಮಾತಾಡಬೇಕಾದ ಬಿಸಿ ಬಿಸಿ ಸಮಾಚಾರ ಯಾವುದು’ ಎಂದು ‘ಕಲರ್ಸ್ ಕನ್ನಡ’ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಕೇಳಿದೆ. ಅದಕ್ಕೆ ಕಮೆಂಟ್ ಮಾಡಿರುವ ವೀಕ್ಷಕರು ರಾಶಿಕಾ ವಿಷಯ ತೆಗೆದಿದ್ದಾರೆ.
ಈ ವಾರ ರಾಶಿಕಾ ಶೆಟ್ಟಿ ಅವರು ರಕ್ಷಿತಾ ಶೆಟ್ಟಿ ಮೇಲೆ ರೇಗಾಡಿದರು. ಅನಗತ್ಯವಾಗಿ ಜಗಳ ಮಾಡಿದರು. ಕೈ ನೋವಾಗಿದೆ ಎಂದು ನೆಪ ಹೇಳಿ ಅಡುಗೆ ಕೆಲಸದಿಂದ ತಪ್ಪಿಸಿಕೊಂಡರು. ಅಷ್ಟೇ ಅಲ್ಲದೇ ಟಾಸ್ಕ್ ಆಡುವಾಗ ರಕ್ಷಿತಾ ಶೆಟ್ಟಿಯ ಬಟ್ಟೆ ವಿಚಾರದಲ್ಲಿ ಸೂಕ್ಷ್ಮತೆ ಇಲ್ಲದಂತೆ ನಡೆದುಕೊಂಡರು. ಇದೆಲ್ಲವನ್ನೂ ನೋಡಿದ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಮೇಲೆ ಅಸಮಾಧಾನ ಉಂಟಾಗಿದೆ.
ಸೂರಜ್ ಬರುವುದಕ್ಕೂ ಮುನ್ನ ರಾಶಿಕಾ ಶೆಟ್ಟಿ ಅವರು ಮಂಜು ಭಾಷಿಣಿ ಜೊತೆ ಇದ್ದರು. ಸೂರಜ್ ಬಂದ ಬಳಿಕ ಹೆಚ್ಚಾಗಿ ಸೂರಜ್ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಮೂಡಿದ ಪ್ರೀತಿ-ಪ್ರೇಮವನ್ನು ಕಂಡು ವೀಕ್ಷಕರಿಗೆ ಸಖತ್ ನಾಟಕೀಯ ಎನಿಸಿದೆ. ಆ ಕಾರಣದಿಂದಲೂ ರಾಶಿಕಾ ಶೆಟ್ಟಿ ಅವರ ಇಮೇಜ್ ನೆಗೆಟಿವ್ ಆಗುತ್ತಿದೆ.
‘ರಾಶಿಕಾ ಎಲಿಮಿನೇಟ್ ಆಗಬೇಕು. ರಾಶಿಕಾಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು. ರಾಶಿಕಾ ಮತ್ತು ಸೂರಜ್ ನಡೆದುಕೊಳ್ಳುವ ರೀತಿ ತುಂಬಾ ಮುಜುಗರ ತರಿಸುತ್ತೆ. ಬಕೆಟ್ ಗ್ಯಾಂಗ್ ಸೇರಿಕೊಂಡು ಮತ್ತೆ ರಕ್ಷಿತಾನ ಟಾರ್ಗೆಟ್ ಮಾಡಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸುದೀಪ್ ಅವರು ಈ ವಾರ ಮಾತನಾಡಬೇಕು’ ಎಂಬಿತ್ಯಾದಿ ಕಮೆಂಟ್ಗಳು ವೀಕ್ಷಕರಿಂದ ಬಂದಿವೆ.
ಇದನ್ನೂ ಓದಿ: ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಈ ವಾರ ಖಂಡಿತವಾಗಿಯೂ ಎಲಿಮಿನೇಷನ್ ಇರಲಿದೆ. ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ದೋಸ್ತಿ ಕಟ್ ಆಗಿದೆ. ರಘು ಗೌಡ ಅವರು ಕ್ಯಾಪ್ಟನ್ ಆಗಿ ತಮ್ಮ ಕೆಲಸ ನಿಭಾಯಿಸಿದ್ದಾರೆ. ಗಿಲ್ಲಿ ಎಂದಿನಂತೆ ಆಟ ಮುಂದುವರಿಸಿದ್ದಾರೆ. ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬಹುದು ಎಂಬ ಕುತೂಹಲ ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Fri, 31 October 25