
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಭಾನುವಾರದ ಎಪಿಸೋಡ್ನಲ್ಲಿ ಮತ್ತೊಂದು ಎಲಿಮಿನೇಷನ್ ನಡೆದಿದೆ. ಆದರೆ ಈ ಎಲಿಮಿನೇಷನ್ ಬಹಳ ನಾಟಕೀಯವಾಗಿ ಆಗಿದೆ. ಸೇಫ್ ಆಗಿದ್ದವರು ಇನ್ಯಾರದ್ದೊ ಹಠಕ್ಕೆ ನಾಮಿನೇಟ್ ಆಗಿ ಈಗ ನೇರವಾಗಿ ಮನೆಯಿಂದಲೇ ಹೊರಗೆ ಹೋಗಿದ್ದಾರೆ. ಈ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಮನೆಯಿಂದ ಹೊರ ಹೋಗಿದ್ದು ಯಾರು?
ಬಿಗ್ಬಾಸ್ ಮನೆಯ ಎಂಟರ್ಟೈನರ್ಗಳಲ್ಲಿ ಒಬ್ಬರಾಗಿದ್ದ ಕಾಕ್ರೂಚ್ ಸುಧಿ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಸಲಿಗೆ ಅವರಿಗಿಂತಲೂ ಕಳಪೆಯಾಗಿ ಆಡುತ್ತಿದ್ದ ಕೆಲವರು ಈಗಲೂ ಮನೆಯಲ್ಲಿದ್ದಾರೆ. ಆದರೆ ಸುಧಿ ಅವರ ದುರಾದೃಷ್ಟದಿಂದಾಗಿ ಅವರು ಈ ವಾರ ಮನೆಯಿಂದ ಹೊರ ಹೋಗಿದ್ದಾರೆ.
ಅಸಲಿಗೆ ವಾರದ ಆರಂಭದಲ್ಲಿ ಅವರು ಸೇಫ್ ಆಗಿದ್ದರು. ಈ ಮೂಲಕ ಸೇಫ್ ತಂಡ ಸೇರಿಕೊಂಡರು. ಆ ಬಳಿಕ ಸೇಫ್ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಬಂತು. ಅವರ ತಂಡದವರು ಸುಧಿ ಹೆಸರು ತೆಗೆದುಕೊಂಡರು. ಇದಕ್ಕೆ ಸುಧಿ ಒಪ್ಪಲಿಲ್ಲ. ಆ ಬಳಿಕ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಆಗಿಲ್ಲ. ಹೀಗಾಗಿ, ನಾಮಿನೇಟ್ ಮಾಡುವ ಅಧಿಕಾರವನ್ನು ಕ್ಯಾಪ್ಟನ್ ಮಾಳು ಅವರಿಗೆ ಬಿಗ್ ಬಾಸ್ ನೀಡಿದರು. ಈ ವೇಳೆ ಮಾಳು ಅವರು ಸುಧಿ ಹೆಸರು ಸೂಚಿಸಿದರು. ಇದರಿಂದ ಅವರು ನಾಮಿನೇಟ್ ಆದರು. ಆದರೆ ವೀಕ್ಷಕರು ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ಆಸೆ ಸುಧಿ ಅವರಿಗೆ ಇದ್ದಂತಿತ್ತು. ಆದರೆ ಅದು ಸಹ ಸುಳ್ಳಾಗಿದ್ದು, ಸುಧಿ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಶನಿವಾರವೇ ಕೆಲವರು ನಾಮಿನೇಷನ್ ಇಂದ ಪಾರಾಗಿದ್ದರು. ಭಾನುವಾರದ ಎಪಿಸೋಡ್ನಲ್ಲಿ ರಾಶಿಕಾ, ಧ್ರುವಂತ್ ಮೊದಲು ಸೇಫ್ ಆದರು. ಅಂತಿಮವಾಗಿ ಜಾನ್ವಿ, ರಿಶಾ, ರಘು ಮತ್ತು ಕಾಕ್ರೂಚ್ ಸುಧಿ ಉಳಿದುಕೊಂಡಿದ್ದರು. ಎಲ್ಲರೂ ಸಹ ರಿಶಾ ಅಥವಾ ಜಾನ್ವಿ ಈ ಬಾರಿ ಮನೆಯಿಂದ ಹೊರಗೆ ಹೋಗುತ್ತಾರೆ ಎಂದುಕೊಂಡಿದ್ದರು. ಅದರಂತೆ ಸುದೀಪ್ ಅವರು, ನಾಲ್ಕೂ ಜನರು ಬಿಗ್ಬಾಸ್ನ ಮುಖ್ಯ ದ್ವಾರದ ಹೊರಗೆ ಸಾಲಾಗಿ ನಿಲ್ಲುವಂತೆ ಹೇಳಿದರು. ನಾಲ್ವರಿಗೂ ಕಣ್ಣಿಗೆ ಬಟ್ಟೆ ಸಹ ಕಟ್ಟಲಾಯ್ತು. ಮೂರು ಬಾರಿ ಬಾಗಿಲು ಹಾಕಿ ತೆಗೆಯಲಾಯ್ತು. ಮೂರನೇ ಬಾರಿ ಬಾಗಿಲು ತೆರೆದಾಗ ಕಾಕ್ರೂಚ್ ಸುಧಿ ಅಲ್ಲಿರಲಿಲ್ಲ. ಅವರು ಎಲಿಮಿನೇಟ್ ಆಗಿದ್ದರು.
ಸುಧಿ ಎಲಿಮಿನೇಟ್ ಆಗಿದ್ದು ಜಾನ್ವಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವರು ಧಾರಾಕಾರವಾಗಿ ಅತ್ತರು. ‘ಯಾರದ್ದೋ ಹಠದಿಂದಾಗಿ ಸುಧಿ ಇಂದು ಹೊರಗೆ ಹೋಗುವಂತಾಯ್ತು ಎಂದು ಅವರು ಕಣ್ಣೀರು ಹಾಕಿದರು. ಅಶ್ವಿನಿ, ರಿಶಾ ಅವರುಗಳು ಸಹ ಕಣ್ಣೀರು ಹಾಕಿದರು. ಹೊರಗೆ ಬಂದ ಬಳಿಕ ಸುದೀಪ್ ಜೊತೆ ಮಾತನಾಡಿದ ಸುಧಿ, ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು, ಆದರೆ ಈ ವರೆಗೆ ಆಡಿದ್ದೂ ಸಹ ಖುಷಿ ಇದೆ ಎಂದರು. ಸುದೀಪ್ ಸಹ, ‘ನೀವು ಒಳ್ಳೆಯ ವ್ಯಕ್ತಿ, ನೀವು ಒಳ್ಳೆಯ ಸ್ಪರ್ಧಿ, ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿ ಅವರನ್ನು ಬೀಳ್ಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Sun, 16 November 25