
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈಗ ಹೊಸ ಟ್ವಿಸ್ಟ್‌ಗಳು ಶುರುವಾಗಿವೆ. ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಹಾಗೂ ರಿಯಾಲಿಟಿ ಶೋ ತಾರೆ ಗಾನವಿ ಗೌಡ (ಘಾಟಿ ಗಾನವಿ) ಅವರ ಎಂಟ್ರಿಯಾಗಿದೆ.
ಕಿರುತೆರೆ ಪ್ರೇಕ್ಷಕರಿಗೆ ‘ಘಾಟಿ ಗಾನವಿ’ ಎನ್ನುವ ಹೆಸರು ಹೊಸದೇನಲ್ಲ. ಈ ಮೊದಲು ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಇವರು, ತಮ್ಮ ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದಿಂದ ಅಪಾರ ಪ್ರೇಕ್ಷಕರ ಗಮನ ಸೆಳೆದಿದ್ದರು. ಶೋನಲ್ಲಿ ನೀಡುತ್ತಿದ್ದ ಕಠಿಣ ಟಾಸ್ಕ್‌ಗಳಲ್ಲಿ ಕೊಂಚವೂ ಹಿಂದೆ ಸರಿಯದೆ, ಎದುರಾಳಿಗಳಿಗೆ ಕಡಕ್ ಟಕ್ಕರ್ ನೀಡುತ್ತಾ ನಿಜವಾದ “ಘಾಟಿ” ಎನಿಸಿಕೊಂಡಿದ್ದರು. ‘ಹಳ್ಳಿ ಪವರ್’ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ಸೌಂಡ್ ಮಾಡಿದ್ದ ಗಾನವಿ, ತಮ್ಮ ಆಟದ ಶೈಲಿಯಿಂದಲೇ ‘ಘಾಟಿ ಗಾನವಿ’ ಎಂದೇ ಪ್ರಸಿದ್ಧರಾದರು.
ಈಗ ಅದೇ ಬೋಲ್ಡ್ ಹಾಗೂ ಕಾನ್ಫಿಡೆಂಟ್ ಸ್ವಭಾವದೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಗಾನವಿ ಗೌಡ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸ್ಪರ್ಧಿಗಳ ನಡುವೆ ಹಗ್ಗಜಗ್ಗಾಟ, ಮಾತುಕತೆಗಳ ಕದನ ತೀವ್ರಗೊಂಡಿರುವಾಗ, ಇವರ ಎಂಟ್ರಿಯಿಂದ ಮನೆಯ ಗೇಮ್ ಪ್ಲಾನ್ ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಯಾರ ಮಾತಿಗೂ ಬಗ್ಗದ, ಯಾವುದೇ ಸಂದರ್ಭದಲ್ಲೂ ತಮ್ಮ ಅನಿಸಿಕೆಯನ್ನು ನೇರವಾಗಿ ವ್ಯಕ್ತಪಡಿಸುವ ಗಾನವಿ, ಬಿಗ್ ಬಾಸ್ ಮನೆಯಲ್ಲಿ ಇರುವ ಹಳೆಯ ಸ್ಪರ್ಧಿಗಳಿಗೆ ಕಠಿಣ ಸವಾಲಾಗಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ‘ಹಳ್ಳಿ ಪವರ್’ನಲ್ಲಿ ತೋರಿಸಿದ ಗತ್ತು ಮತ್ತು ಗಮ್ಮತ್ತನ್ನು ಬಿಗ್ ಬಾಸ್ ಮನೆಯಲ್ಲೂ ಮುಂದುವರಿಸುತ್ತಾರಾ ಮತ್ತು ತಮ್ಮ ಆಟದಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅವರ ಆಟದಿಂದ ಬೊಗ್ ಬಾಸ್ ಜರ್ನಿ ಸಂಪೂರ್ಣವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.