ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ 50 ಕ್ಕೂ ಹೆಚ್ಚು ದಿನಗಳಾಗಿವೆ. ಸ್ಪರ್ಧಿಗಳೆಲ್ಲ ಮನೆಗೆ ಸೆಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಇತ್ತೀಚೆತೆ ಇಬ್ಬರು ಸ್ಪರ್ಧಿಗಳು ಮನೆಗೆ ಬಂದಿದ್ದು, ರಜತ್ ಮನೆಗೆ ಚೆನ್ನಾಗಿ ಹೊಂದಾಣಿಕೆ ಆಗಿದ್ದಾರೆ, ಈ ಸೀಸನ್ ಗೆಲ್ಲುವ ಸ್ಪರ್ಧಿ ರಜತ್ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ರಜತ್ ಜೊತೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಗೆ ಮನೆಗೆ ಹೊಂದಿಕೊಳ್ಳಲು ಆಗುತ್ತಿಲ್ಲ. ಮನೆಗೆ ಬಂದ ಆರಂಭದಲ್ಲಿ ಜೋಶ್ನಲ್ಲಿದ್ದ ಶೋಭಾ ಶೆಟ್ಟಿ ಕೆಲವೇ ದಿನಕ್ಕೆ ಮಂಕಾಗಿದ್ದರು. ಈಗಂತೂ ಮನೆಯಿಂದ ಹೊರಗೆ ಹೋಗುವ ಮಾತಾಡುತ್ತಿದ್ದಾರೆ.
ಈ ವಾರ ಶೋಭಾ ಶೆಟ್ಟಿ ನಾಮಿನೇಟ್ ಆಗಿದ್ದರು. ಆದರೆ ಜನ ವೋಟ್ ಮಾಡಿ ಅವರನ್ನು ಉಳಿಸಿದ್ದಾರೆ. ಆದರೆ ಶೋಭಾ ಶೆಟ್ಟಿಗೆ ಮನೆಯಲ್ಲಿ ಉಳಿದು ಕೊಳ್ಳಲು ಇಷ್ಟವಿಲ್ಲ. ಹೀಗೆಂದು ಸುದೀಪ್ ಮುಂದೆ ಹೇಳಿಕೊಂಡಿರುವ ಶೋಭಾ ಶೆಟ್ಟಿ, ಕೈ ಮುಗಿದು ಸುದೀಪ್ ಎದುರು ಅಂಗಲಾಚಿದ್ದು, ತಾನು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿಕೊಂಡಿದ್ದಾರೆ.
ಆರಂಭದಲ್ಲಿ ಶೋಭಾ ಶೆಟ್ಟಿಗೆ ಬುದ್ಧಿವಾದ ಹೇಳಿದ ಸುದೀಪ್, ‘ನೀವು ಯಾವ ಉದ್ದೇಶ ಇಟ್ಟುಕೊಂಡು ಈ ಮನೆಗೆ ಬಂದಿರಿ ಎಂಬುದನ್ನು ಒಮ್ಮೆ ಯೋಚನೆ ಮಾಡಿ’ ಎಂದರು. ಆ ಬಳಿಕ, ‘ನಿಮಗೆ ಮತ ಹಾಕಿ ಉಳಿಸಿಕೊಂಡ ಮತದಾರರಿಗೆ ಏನು ಹೇಳುತ್ತೀರಿ, ಅವರಿಗೆ ನೀವು ಅನ್ಯಾಯ ಮಾಡುತ್ತಿದ್ದೀರಿ’ ಎಂದು ಸಹ ಸುದೀಪ್ ಹೇಳಿದರು. ಏನೇ ಆದರೂ ಸಹ ಶೋಭಾ ಶೆಟ್ಟಿ, ತಾನು ಮನೆಗೆ ಹೋಗಲೇ ಬೇಕು ಎಂದು ಒತ್ತಾಯ ಮಾಡಿದರು. ಕೊನೆಗೆ ಶೋಭಾ ಶೆಟ್ಟಿ ಮಾತುಗಳಿಗೆ ರೋಸಿ ಹೋದ ಸುದೀಪ್ ಬಿಗ್ಬಾಸ್ ಮನೆ ಬಾಗಿಲು ತೆಗೆಸಿದ್ದಾರೆ. ಶೋಭಾ ಶೆಟ್ಟಿ ಮನೆಗೆ ಹೋಗಿದ್ದಾರೋ ಇಲ್ಲವೋ ಎಂಬುದು ಭಾನುವಾರ ರಾತ್ರಿ ಎಪಿಸೋಡ್ ಪ್ರಸಾರವಾದಾಗ ತಿಳಿದು ಬರಲಿದೆ.
ಇದನ್ನೂ ಓದಿ: ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ
ಭಾನುವಾರದ ಎಪಿಸೋಡ್ನಲ್ಲಿ ಶೋಭಾ ಶೆಟ್ಟಿ, ತಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಸುದೀಪ್ ಮುಂದೆ ಹಠ ಹಿಡಿದಿದ್ದಾರೆ. ಸುದೀಪ್ ಸಹ ಬೇಸರಗೊಂಡು ಗೇಟ್ ಓಪನ್ ಮಾಡಿದ್ದಾರೆ. ಅಷ್ಟಕ್ಕೂ ಶೋಭಾ ಶೆಟ್ಟಿ ಮನೆಯಿಂದ ಹೊರಗೆ ಹೋದರಾ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:15 am, Sun, 1 December 24