ಈ ವಾರ ಬಿಗ್ಬಾಸ್ ಮನೆಯಲ್ಲಿ ಹೆಚ್ಚಿನ ಟಾಸ್ಕ್ಗಳೇನೂ ಇರಲಿಲ್ಲ. ಸ್ಪರ್ಧಿಗಳ ಮನೆಯ ಸದಸ್ಯರು ಬಂದಿದ್ದರು, ಅವರೊಟ್ಟಿಗೆ ಮಾತನಾಡುತ್ತಾ ಸ್ಪರ್ಧಿಗಳು ಆರಾಮದಿಂದ ಇದ್ದರು. ಮನೆಯವರು ತಂದ ರುಚಿ-ರುಚಿಯಾದ ಊಟ ಮಾಡಿ ಖುಷಿಯಿಂದ ಇದ್ದರು. ಇದರ ಮಧ್ಯೆ ಸುದೀಪ್ ಸಹ ಸ್ಪರ್ಧಿಗಳಿಗೆ ಊಟ ಕಳಿಸಿದ್ದರು. ಟಾಸ್ಕ್, ನಾಮಿನೇಷನ್, ಉತ್ತಮ-ಕಳಪೆಗಳು ಇದ್ದಾಗ ಮನೆಯವರು ತೋರಿದ ಪ್ರದರ್ಶನ, ನೀಡಿದ ಕಾರಣ ಇಟ್ಟುಕೊಂಡು ಶನಿವಾರ, ಸುದೀಪ್ ಅವರು ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ಈ ವಾರ ಅದ್ಯಾವುದೂ ಇರಲಿಲ್ಲ. ಹಾಗಿದ್ದರೂ ಸಹ ಸುದೀಪ್ ಅವರು ಮನೆಯ ಕೆಲ ಸ್ಪರ್ಧಿಗಳ ಬೆವರು ಇಳಿಸಿದ್ದಾರೆ.
ಮೊದಲಿಗೆ ತ್ರಿವಿಕ್ರಮ್, ಉಗ್ರಂ ಮಂಜು ಮತ್ತು ಹನುಮಂತನ ಬಗ್ಗೆ ಸುದೀಪ್ ಮಾತನಾಡಿದರು. ವಿಶೇಷವಾಗಿ ಮನೆಯಲ್ಲಿ ದುರಹಂಕಾರದ ಮಾತುಗಳನ್ನಾಡಿದ ತ್ರಿವಿಕ್ರಮ್ ಅವರಿಗೆ ಬುದ್ಧಿವಾದ ಹೇಳಿದರು. ದಿನಸಿ ಟಾಸ್ಕ್ನಲ್ಲಿ ಆಡಲು ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಬಿಗ್ಬಾಸ್ ಹೇಳಿದಾಗ ತ್ರಿವಿಕ್ರಮ್, ರಜತ್ ಮತ್ತು ಭವ್ಯಾ ತಾವೇ ಅತ್ಯುತ್ತಮ ಎಂಬ ವರಸೆ ಮನೆಯಲ್ಲಿ ತೋರಿಸಿದ್ದರು. ತ್ರಿವಿಕ್ರಮ್ ಅಂತೂ ಹನುಮಂತನ ಮುಂದೆ, ‘ಇಷ್ಟುದಿನ ಮನೆಗೆ ಊಟ ತಂದು ಹಾಕಿದ್ದೀವಿ, ಈ ಬಾರಿ ನೀವು ನಮಗೆ ಊಟ ಹಾಕಿ’ ಎಂದಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ವೆಕೇಶನ್ ಮುಗಿಸಿದವರಿಗೆ ಸುದೀಪ್ ಕ್ಲಾಸ್; ಈ ವಾರವೂ ಕಿಚ್ಚನ ಪಾಠ
ಈ ವಿಷಯವಾಗಿ ಮಾತನಾಡಿದ ಸುದೀಪ್ ಪರೋಕ್ಷವಾಗಿ ತ್ರಿವಿಕ್ರಮ್ ಅವರ ಈ ದುರಹಂಕಾರದ ಮಾತನ್ನು ಟೀಕೆ ಮಾಡಿದರು. ನಿಮ್ಮ ವ್ಯಕ್ತಿತ್ವ ಅಹಂಕಾರದ ವ್ಯಕ್ತಿತ್ವ ಅಲ್ಲದೇ ಇರಬಹುದು ಆದರೆ ಆಡುವ ಮಾತಿನ ಬಗ್ಗೆ ಎಚ್ಚರಿಕೆ ಇರಲಿ. ಇದೇ ಮಾತನ್ನು ಬೇರೆ ಸ್ಪರ್ಧಿ ನಿಮಗೆ ಹೇಳಿದ್ದರೆ ನಿಮಗೆ ಹೇಗೆ ಅನ್ನಿಸಿರುತ್ತಿತ್ತು ಎಂದು ಸುದೀಪ್ ಪ್ರಶ್ನೆ ಮಾಡಿದರು. ಭವ್ಯಾ ಅವರು, ಹನುಮಂತನನ್ನು ಟಾಸ್ಕ್ಗೆ ಆಯ್ಕೆ ಮಾಡಲು ನೀಡಿದ ಕಾರಣವನ್ನು ಸಹ ಸುದೀಪ್ ಕಟುವಾಗಿ ಟೀಕೆ ಮಾಡಿದರು.
ಹನುಮಂತನನ್ನು ಸಹ ಪ್ರಶ್ನೆ ಮಾಡಿದ ಸುದೀಪ್, ‘ತ್ರಿವಿಕ್ರಮ್ ಅಂಥಹಾ ಒಂದು ಮಾತನ್ನಾಡಿದಾಗ ನೀವೇಕೆ ಪ್ರತ್ಯುತ್ತರ ನೀಡಲಿಲ್ಲ ಎಂದು ಕೇಳಿದರು. ಅಲ್ಲದೆ ಅದೇ ವಿಷಯವನ್ನು ನೀವು ಹೋಗಿ ಮಂಜು ಬಳಿ ಹೇಳಿಕೊಳ್ಳುತ್ತೀರಿ. ಆದರೆ ನೀವೇಕೆ ನೇರವಾಗಿ ತ್ರಿವಿಕ್ರಮ್ ಅನ್ನು ಪ್ರಶ್ನೆ ಮಾಡಲಿಲ್ಲ’ ಎಂದು ಸುದೀಪ್ ಪ್ರಶ್ನಿಸಿದರು. ಆದರೆ ಅದಕ್ಕೆ ಹನುಮಂತು ಯಾವುದೇ ಉತ್ತರ ನೀಡಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ