
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಶೋ. ಕನ್ನಡ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಬಿಗ್ಬಾಸ್ ಶೋ ಪ್ರಸಾರ ಆಗುತ್ತದೆ. ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸೆಲೆಬ್ರಿಟಿಗಳು ಈ ಶೋ ನಡೆಸಿಕೊಟ್ಟಿದ್ದಿದೆ. ಆದರೆ ಕನ್ನಡದಲ್ಲಿ ಬಿಗ್ಬಾಸ್ ಶೋ ಪ್ರಾರಂಭ ಆದಾಗಿನಿಂದಲೂ ಸುದೀಪ್ ಅವರೇ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಬಿಗ್ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ಬಾಸ ಎಂದಾಗಿದೆ. ಕಳೆದ ಸೀಸನ್ನಲ್ಲಿ ಸುದೀಪ್ ಅವರು ಇದು ನನ್ನ ಕೊನೆಯ ಸೀಸನ್ ಎಂದಿದ್ದರು. ಆದರೆ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ವ್ಯಕ್ತಿ ಇಡೀ ಕರ್ನಾಟಕದಲ್ಲಿ ಸಿಗಲಿಲ್ಲ. ಇದೀಗ ಸುದೀಪ್ ದಾಖಲೆಯ 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಈ ವೇಳೆ ಪ್ರೇಕ್ಷಕರೊಟ್ಟಿಗೆ ಕೆಲವು ವಿಷಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ.
12ನೇ ಸೀಸನ್ ಮುಗಿಯುವ ಮುಂಚೆ ಬಿಗ್ಬಾಸ್ ಮಾತನಾಡಿ, ಸುದೀಪ್ ಅವರಿಗೆ ಧನ್ಯವಾದ ಹೇಳಿದರು. ‘ಸುದೀಪ್ ಅವರೇ ಈ ಶೋಗೆ ಹೃದಯ ಕೊಟ್ಟವರು ನೀವು, ಗೋಡೆಗಳಿಗೆ ಜೀವ ತುಂಬಿದವರು ನೀವು. ಶೋಗೆ 12 ವರ್ಷಗಳು ತುಂಬಿವೆ, 12 ವರ್ಷದಿಂದಲೂ ನಿಮ್ಮ ಸಾರಥ್ಯದಲ್ಲಿ ಈ ಶೋ ನಡೆಯುತ್ತಿದೆ. ಇದು ದಾಖಲೆಯೇ ಆಗಿದೆ. ನಿಮ್ಮದು ಈಗ ಕೇವಲ ನಿರೂಪಣೆ ಮಾತ್ರವೇ ಅಲ್ಲ, ಅದೊಂದು ಪರಂಪರೆ ಆಗಿದೆ. ಸ್ಪರ್ಧಿಗಳು ನೊಂದಾಗ ಭರವಸೆ ತುಂಬಿದ್ದೀರಿ, ಸೋತಾಗ ಹುರಿದುಂಬಿಸಿದ್ದಿಈರಿ, ಖುಷಿಯಲ್ಲಿ ಸಂತಸ ಪಟ್ಟವರು, ಪ್ರೀತಿಯನ್ನು ಉಣಬಡಿಸಿದವರು ನೀವು, ಮಾತ್ರವಲ್ಲದೆ ಈ ಶೋಗೆ ಮಾರ್ಗದರ್ಶಕರಾಗಿದ್ದೀರಿ. ಈ ಶೋ ಅಲುಗಾಡಿದ ಅಡಿಪಾಯವನ್ನು ಕೈ ಹಿಡಿದು ನಿಲ್ಲಿಸಿದ್ದೀರಿ, ಈ ಶೋ ಧ್ವನಿ ಕಳೆದುಕೊಂಡಾಗ ಅದಕ್ಕೆ ಧ್ವನಿ ನೀಡಿದ್ದೀರಿ, ಈ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಯಶಸ್ವಿಗೊಳಿಸಿದ್ದೀರಿ, ಮನದಾಳದ ಧನ್ಯವಾದ. ಥ್ಯಾಂಕ್ಯೂ ಸುದೀಪ್’ ಎಂದರು.
ಬಳಿಕ ಮಾತನಾಡಿದ ಸುದೀಪ್, ‘ನಾನು ಈ ಶೋ ಅನ್ನು ಕಾನ್ಫಿಡೆಂಟ್ ಆಗಿ ನಡೆಸಿಕೊಡಲು ಮುಖ್ಯ ಕಾರಣ ಸ್ಪರ್ಧಿಗಳು ನೀಡುವ ಗೌರವ ಮತ್ತು ಪ್ರೀತಿ. ಅದಿಲ್ಲದೇ ಹೋಗಿದ್ದಿದ್ದರೆ ನಾನು ನಡೆಸಿಕೊಡಲು ಆಗುತ್ತಿರಲಿಲ್ಲ. ನಾನು ಕಲಿತಿರುವುದು ಏನೆಂದರೆ ಏನನ್ನೇ ಗಳಿಸಬೇಕು, ಸಾಧಿಸಬೇಕು ಎಂದರೆ ಭಯ, ಹೆದರಿಕೆಯಿಂದ ಆಗಲ್ಲ, ಅದು ಪ್ರೀತಿಯಿಂದ ಮಾತ್ರ ಸಾಧ್ಯ. ನಾನು ನಿಮ್ಮನ್ನು ಸಾಕಷ್ಟು ಪ್ರೀತಿಸಿದ್ದೀನಿ, ಅದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ನೀವು ನನಗೆ ನೀಡಿದ್ದೀರಿ, ನೀವು ತೋರುವ ಗೌರವ, ಪ್ರೀತಿಯಿಂದಲೇ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡಲು ಆಗುತ್ತಿದೆ’ ಎಂದರು ಸುದೀಪ್.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
ಮುಂದುವರೆದು, ಕೆಲವೊಂದು ವಿಷಯ ಪ್ರೇಕ್ಷಕರಿಗೆ ಅರ್ಥವಾಗಲ್ಲ ಆದರೆ ಹೇಳಲೇ ಬೇಕಾಗುತ್ತದೆ. ನಿನ್ನೆ ಕ್ರಿಕೆಟ್ ಮುಗಿಸಿಕೊಂಡು ನಾನು ಬಂದಿದ್ದೇ ರಾತ್ರಿ 3:30ಗೆ ಸುಸ್ತಾಗಿರುತ್ತದೆ ಏನೋ ಸಮಸ್ಯೆ ಇರುತ್ತದೆ ಆದರೆ ನಾನು ಮಾಡುವ ಕೆಲಸ ಮಾಡಲೇ ಬೇಕಾಗುತ್ತದೆ. ನನ್ನನ್ನು ನಂಬಿಕೊಂಡು ಅಷ್ಟು ಜನ ಒಳಗೆ ಕುಳಿತಿರುವಾಗ ನಾನು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿಲ್ಲ. ಅವರ ಕೈಬಿಡಲು ಸಾಧ್ಯವಿಲ್ಲ’ ಎಂದರು ಸುದೀಪ್.
‘ನಾನು ಕಳೆದ 11 ವರ್ಷದಿಂದ ಈ ಶೋ ಜೊತೆಗೆ ಇರಲು ಕಾರಣ ಈ ವೇದಿಕೆ ಬಹಳ ಶುದ್ಧವಾದುದು. ಈ ವೇದಕೆಯಿಂದ ಹೋದ ಎಷ್ಟೋ ಮಂದಿ ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ್ದಾರೆ. ಎಷ್ಟೋ ಜನ ಸ್ಪರ್ಧಿಗಳು ತಮ್ಮ ವೃತ್ತಿಯಲ್ಲಿ ಮೇಲಕ್ಕೇರಿದ್ದಾರೆ. ಇದೆಲ್ಲ ಸಾಧ್ಯವಾಗಿರುವುದು ಈ ವೇದಿಕೆಯ ಶುದ್ಧತೆಯಿಂದ, ಪ್ರಮಾಣಿಕತೆಯಿಂದ ಹಾಗಾಗಿ ಈ ವೇದಿಕೆ ಇನ್ನೂ ಸಾಕಷ್ಟು ವರ್ಷಗಳು ಇರಬೇಕು. ಇದೇ ಕಾರಣಕ್ಕೆ ನಾನು ಈ ಶೋನ ಜೊತೆಗೆ ಇದ್ದೇನೆ’ ಎಂದರು.
ತೆರೆಯ ಮೇಲೆ ನಾನು ಕೂಲ್ ಆಗಿ ಕಾಣಬಹುದು, ಆದರೆ ನನ್ನೊಳಗೂ ಮನುಷ್ಯ ಇದ್ದಾನೆ. ನನ್ನೊಳಗೂ ಒಬ್ಬ ಗಿಲ್ಲಿ ಇದ್ದಾನೆ, ರಜತ್ ಇದ್ದಾನೆ, ಅಶ್ವಿನಿ ಇದ್ದಾರೆ, ರಕ್ಷಿತಾ ಇದ್ದಾರೆ. ನನಗೂ ಮೂಡ್ ಸ್ವಿಂಗ್ಗಳು ಆಗುತ್ತಿರುತ್ತವೆ. ನನಗೂ ಬೇಸರ ಆಗುತ್ತದೆ, ಸಿಟ್ಟೂ ಬರುತ್ತದೆ. ಆದರೆ ನೀವು ಅದನ್ನೆಲ್ಲ ನೋಡುವುದಿಲ್ಲ. ಅದನ್ನೆಲ್ಲ ಸಹಿಸಿಕೊಂಡು ನನ್ನನ್ನು ಒಳ್ಳೆಯ ಮೂಡ್ನಲ್ಲಿ ವೇದಿಕೆ ಮೇಲೇರುವಂತೆ ಮಾಡುವುದು ನಿರ್ದೇಶಕ ಪ್ರಕಾಶ್ ಅವರಿಗೆ ದೊಡ್ಡ ಧನ್ಯವಾದ ಎಂದ ಸುದೀಪ್, ಬಳಿಕ ತಮ್ಮ ಸಿಬ್ಬಂದಿಗಳೆಲ್ಲರಿಗೂ ಧನ್ಯವಾದ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ