ಬಿಗ್ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ಘೋಷಣೆ ನಡೆಯುತ್ತಿದೆ. ಬಿಗ್ಬಾಸ್ ಕನ್ನಡ 11 ಭಾನುವಾರ ಸಂಜೆ ಪ್ರಾರಂಭವಾಗಲಿದೆ. ಆದರೆ ಶನಿವಾರವೇ ಸ್ಪರ್ಧಿಗಳ ಘೋಷಣೆ ಮಾಡಲಾಗುತ್ತಿದೆ. ಶನಿವಾರ ಕಲರ್ಸ್ ವಾಹಿನಿಯ ‘ರಾಜಾ ರಾಣಿ’ ರಿಯಾಲಿಟಿ ಶೋನ ಫಿನಾಲೆ ನಡೆಯುತ್ತಿದ್ದು, ಫಿನಾಲೆ ನಡುವೆ ಬಿಗ್ಬಾಸ್ ಕನ್ನಡ ಸೀಸನ್ 11 ರ ಕೆಲ ಸ್ಪರ್ಧಿಗಳ ಹೆಸರು ಘೋಷಣೆ ಆಗುತ್ತಿದ್ದು, ಹೊಸ ನಿಯಮದಂತೆ ಆ ಹೊಸ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಎಂದು ಪ್ರೇಕ್ಷಕರು ಮತ ಚಲಾಯಿಸಬೇಕಿದೆ. ಈವರೆಗೂ ಇಬ್ಬರು ಸ್ಪರ್ಧಿಗಳನ್ನು ಘೋಷಿಸಲಾಗಿದೆ. ಮೊದಲನೇಯ ಸ್ಪರ್ಧಿ ನಟಿ ಗೌತಮಿ ಜಾಧವ್ ಆಗಿದ್ದರೆ ಎರಡನೇ ಸ್ಪರ್ಧಿ ಲಾಯರ್ ಜಗದೀಶ್ ಇದೀಗ ಮೂರನೇ ಸ್ಪರ್ಧಿಯ ಘೋಷಣೆ ಆಗಿದೆ.
ಹಿಂದೂಪರ ಸಂಘಟನೆಗಳಲ್ಲಿ ಭಾಷಣಕಾರಳಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಸ್ಪರ್ಧಿಯಾಗಿ ಮನೆಗೆ ಕಳಿಸಲಾಗುತ್ತಿದೆ. ಚೈತ್ರಾ ಕುಂದಾಪುರ ಹಿಂದೂಪರ ಸಂಘಟನೆ, ಹೋರಾಟಗಳಿಂದ ಗುರುತು ಪಡೆದುಕೊಂಡಿದ್ದಾರೆ. ಹಿಂದೂಪರ ಭಾಷಣಗಳು, ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಬಿಜೆಪಿಯ ಕೆಲ ಶಾಸಕರು, ಸಂಸದರಿಂದ ಭಾರಿ ಮೊತ್ತದ ಹಣ ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾದರು.
ಇದನ್ನೂ ಓದಿ:ಬಿಗ್ಬಾಸ್ ಎರಡನೇ ಸ್ಪರ್ಧಿ ಘೋಷಣೆ: ಮನೆ ಅಲ್ಲೋಲ ಕಲ್ಲೋಲ ಗ್ಯಾರೆಂಟಿ
ಟಿಕೆಟ್ ಕೊಡಿಸುವ ಆಮೀಷಗಳನ್ನು ಒಡ್ಡಿ ಕೆಲವು ಬಿಜೆಪಿ ಮುಖಂಡರಿಂದ ಭಾರಿ ಮೊತ್ತದ ಹಣವನ್ನು ಚೈತ್ರಾ ಕುಂದಾಪುರ ಹಾಗೂ ಅವರ ಸಂಗಡಿಗರು ತೆಗೆದುಕೊಂಡಿದ್ದಾರೆಂದು ಆರೋಪ ಮಾಡಲಾಯ್ತು, ಪ್ರಕರಣ ದಾಖಲಾಗಿ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಜೈಲು ಪಾಲಾದರು. ಪ್ರಸ್ತುತ ಚೈತ್ರಾ ಕುಂದಾಪುರ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಚೈತ್ರಾ ಕುಂದಾಪುರ ಜೈಲಿನಿಂದ ಹೊರಬಂದ ಬಳಿಕ ಯಾವುದೇ ಹೋರಾಟಗಳಲ್ಲಿ ಗುರುತಿಸಿಕೊಂಡಿಲ್ಲ. ಇದೀಗ ಏಕಾಏಕಿ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ.
ಹಾಲು ಮಾರುವವರ ಮಗಳಾಗಿ ಹುಟ್ಟಿಯೂ ನಾನು ಈ ಹಂತಕ್ಕೆ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಚೈತ್ರಾ ಕುಂದಾಪುರ, ಆ ಕೋರ್ಟ್ ಕೇಸು ನನ್ನನ್ನು ಕುಗ್ಗಿಸಿಲ್ಲ ಎಂದು ಹೇಳುತ್ತಾ ಆತ್ಮವಿಶ್ವಾಸದಿಂದಲೇ ಬಿಗ್ಬಾಸ್ ಮನೆಗೆ ಕಾಲಿಡಲು ರೆಡಿಯಾಗಿದ್ದಾರೆ. ಕಳೆದ ಬಾರಿ ಸುಳ್ಳು ಹೇಳಿ, ವಂಚನೆ ಮಾಡಿ ಜನರ ಕಣ್ಣಲ್ಲಿ ವಿಲನ್ ಆಗಿದ್ದ ಡ್ರೋನ್ ಪ್ರತಾಪ್ ಅನ್ನು ಕರೆತಂದು ಆತ ಅಮಾಯಕ ಎಂಬಂತೆ ಬಿಂಬಿಸಲಾಗಿತ್ತು. ಈ ಬಾರಿ ವಂಚನೆ ಪ್ರಕರಣದ ಆರೋಪಿ ಚೈತ್ರಾರನ್ನು ಬಿಗ್ಬಾಸ್ ಮನೆಗೆ ಕರೆತರಲಾಗಿದ್ದು, ಡ್ರೋನ್ ಪ್ರತಾಪ್ ರೀತಿ ಚೈತ್ರಾ ಅವರಿಗೂ ಕ್ಲೀನ್ ಸರ್ಟಿಫಿಕೇಟ್ ಕೊಡಲಾಗುತ್ತದೆಯೇ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Sat, 28 September 24