ಬಿಗ್ಬಾಸ್ ಸ್ಪರ್ಧಿ ವಿನಯ್ (VInay) ಅವರನ್ನು ಸುದೀಪ್ ಅವರು ಆನೆ ಎಂದು ಹೊಗಳಿದ ಬೆನ್ನಲ್ಲೆ ಸ್ವತಃ ಮದ್ದೇರಿದ ಆನೆಯಂತೆ ವಿನಯ್ ಬಿಗ್ಬಾಸ್ನಲ್ಲಿ ವರ್ತಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಇನ್ನೂ ಕೆಲವರಿಗೆ ಬೆದರಿಸುವ ದನಿಯಲ್ಲಿ ಮಾತನಾಡಿದ್ದ ವಿನಯ್ ಹಳ್ಳಿ ಟಾಸ್ಕ್ನ ವೇಳೆಯಲ್ಲಿ ಸಂಗೀತಾ ಮೇಲೆ ತಮ್ಮ ಪ್ರತಾಪ ಪ್ರದರ್ಶಿಸಿದ್ದರು. ಅದಕ್ಕೆ ಸಂಗೀತಾ ಸೊಪ್ಪು ಹಾಕಿರಲಿಲ್ಲ. ಇದೀಗ ಮತ್ತೆ ವಿನಯ್ ತಮ್ಮ ನಾಲಗೆ ಹರಿಬಿಟ್ಟು ಮತ್ತೊಬ್ಬ ಮಹಿಳೆಯನ್ನು ಏಕವಚನದಿಂದ ಮಾತನಾಡಿಸಿ ಬೈಸಿಕೊಂಡಿದ್ದಾರೆ.
ಗುರುವಾರದ ಎಪಿಸೋಡ್ನಲ್ಲಿ ಬಿಗ್ಬಾಸ್, ಸ್ಪರ್ಧಿಗಳಿಗಾಗಿ ಕುಸ್ತಿ ಪಂದ್ಯವನ್ನು ಆಯೋಜಿಸಿದ್ದರು. ಮೊದಲು ಕಣಕ್ಕೆ ಇಳಿದು ಮೈಖಲ್ ವಿರುದ್ಧ ಎರಡು ನೇರ ಸುತ್ತುಗಳಲ್ಲಿ ಜಯಿಸಿದ್ದ ವಿನಯ್ ಅಖಾಡದ ಪಕ್ಕದಲ್ಲಿ ತಮ್ಮ ತಂಡದ ಸದಸ್ಯರೊಟ್ಟಿಗೆ ಕುಳಿತಿದ್ದರು. ಅವರ ಪಂದ್ಯದ ಬಳಿಕ ಸಂಗೀತಾ ಹಾಗೂ ನೀತು ನಡುವೆ ಸ್ಪರ್ಧೆ ನಡೆಯಿತು. ಇಬ್ಬರು ಸ್ಪರ್ಧಿಗಳ ನಡುವೆ ಬಹಳ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ತಂಡದ ಸದಸ್ಯರು ತಮ್ಮ ತಂಡದ ಆಟಗಾರರಿಗೆ ಬೆಂಬಲ ನೀಡುತ್ತಿದ್ದರು.
ತನಿಷಾ ಸಹ ತಮ್ಮ ತಂಡದ ಕ್ಯಾಪ್ಟನ್ ಆದ ಸಂಗೀತಾಗೆ ಬೆಂಬಲ ನೀಡುತ್ತಾ, ಎದುರಾಳಿ ನೀತುಗೆ, ನೋಡಿಕೊಂಡು ಆಡಿ, ನೀವು ಆಡುತ್ತಿರುವುದು ತಪ್ಪಾಗಬಹುದು ಎಂದರು. ಅದಕ್ಕೆ ಉಡಾಫೆಯಾಗಿ ವಿನಯ್, ನೀನು ಹೋಗಿ ಬಟ್ಟೆ ಬದಾಯಿಸಿಕೊಂಡು ಅಖಾಡಕ್ಕೆ ಇಳಿ ಎಂದರು. ಆಗ ತನಿಷಾ, ‘ನಾನು ಆಡುತ್ತಿರುವವರ ಬಳಿ ಮಾತನಾಡುತ್ತಿರುವುದು, ನಿಮ್ಮ ಬಳಿ ಅಲ್ಲ ಎಂದರು. ಅದಕ್ಕೆ ತಾಳ್ಮೆ ಕಳೆದುಕೊಂಡ ವಿನಯ್ ಏನೇ ನಿಂದು ಏನಿವಾಗ ಎಂದು ಏರಿದ ದನಿಯಲ್ಲಿ ಜಗಳಕ್ಕೆ ನಿಂತರು. ತನಿಷಾ ಸಹ ತಾಳ್ಮೆ ಕಳೆದುಕೊಂಡು, ಏಕವಚನದಲ್ಲಿ ಮಾತನಾಡಿದರೆ ಸರಿಯಾಗಿರಲ್ಲ, ಏನೇ, ಹೋಗೆ ಬಾರೆ ಎಂಬುದನ್ನು ನಿನ್ನ ಹೆಂಡತಿ ಹತ್ತಿರ ಇಟ್ಟುಕೊ ನನ್ನ ಬಳಿ ಅಲ್ಲ, ಎಂದು ಸರಿಯಾಗಿ ಜಾಡಿಸಿದರು.
ಇದನ್ನೂ ಓದಿ:ವಿನಯ್ಗೆ ಕೌಂಟರ್ ಕೊಟ್ಟು ಭೇಷ್ ಎನಿಸಿಕೊಂಡ ಪ್ರತಾಪ್
ವಿನಯ್ರನ್ನು ಅವರ ತಂಡದ ಸದಸ್ಯರು, ತನಿಷಾರನ್ನು ಅವರ ತಂಡದ ಸದಸ್ಯರು ಸುಮ್ಮನಾಗಿಸಿದರು. ಆ ಆಟದಲ್ಲಿ ಸಂಗೀತಾ ಗೆದ್ದರಾದರೂ ಒಟ್ಟು ಕುಸ್ತಿ ಪಂದ್ಯವನ್ನು ಸಂಗೀತಾರ ತಂಡ ಸೋತಿತು. ಬಳಿಕ ವಿನಯ್ ಬಂದು ತನಿಷಾ ಬಳಿ ಕ್ಷಮೆ ಕೇಳಿದರು. ಮಾತಿನ ಭರದಲ್ಲಿ ಏಕವಚನ ಬಂತು ಎಂದರು. ತನಿಷಾ ಹೆಚ್ಚೇನೂ ಮಾತನಾಡದೆ ವಿನಯ್ ಕ್ಷಮೆಯನ್ನು ಸ್ವೀಕರಿಸಿದರು.
ಕಳೆದೊಂದು ವಾರ ಅದರಲ್ಲಿಯೂ ವಿಶೇಷವಾಗಿ ನಿನ್ನೆಯ ಎಪಿಸೋಡ್ನಲ್ಲಿ ವಿನಯ್, ಸಂಗೀತಾ ಹಾಗೂ ಇತರರ ಮೇಲೆ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ವಿನಯ್ ಇಂದೂ ಅದನ್ನೇ ಮುಂದುವರೆಸಿದ್ದರು, ಆದರೆ ಎದುರಿಂದ ಅಷ್ಟೇ ಖಡಕ್ ಆದ ಪ್ರತಿಕ್ರಿಯೆ ಬಂದ ಕೂಡಲೇ ಕ್ಷಮೆ ಕೇಳಿದರು. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ